ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ಹನುಮ ಧ್ವಜ ವಿವಾದದಿಂದ ಬಿಗುವಿನ ವಾತಾವರಣ ನೆಲೆಸಿರುವ ತಾಲೂಕಿನ ಕೆರಗೋಡು ಗ್ರಾಮಕ್ಕೆ ತೆರಳಿ ಅಲ್ಲಿನ ಜನರನ್ನು ಮಾತನಾಡಿಸಿದ ವೇಳೆ ಕೇಳಿಬಂದ ಮಾತುಗಳಿವು.
ಕೆರಗೋಡಿನಲ್ಲಿ ಸುಮಾರು ೩೦ರಿಂದ ೪೦ ಜಾತಿಯ ಜನರು ವಾಸವಿದ್ದಾರೆ. ಎಲ್ಲರೂ ಸಾಮರಸ್ಯ-ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಧ್ವಜಸ್ತಂಭ ಸ್ಥಾಪನೆ ಎಲ್ಲಾ ಜಾತಿಯ ಜನರಷ್ಟೇ ಅಲ್ಲದೇ, ಕೆರಗೋಡು ಸುತ್ತಮುತ್ತಲಿನ ಹನ್ನೆರಡು ದೊಡ್ಡಿಯ ಜನರು ಹಣ ಕೊಟ್ಟಿದ್ದಾರೆ. ಪಕ್ಷಾತೀತವಾಗಿಯೂ ಹಣ ಕೊಟ್ಟಿದ್ದಾರೆ. ಊರಿನ ಜನರೆಲ್ಲರೂ ಜಾತ್ಯತೀತವಾಗಿ ಮತ್ತು ಭಾವನಾತ್ಮಕವಾಗಿಯೂ ಒಂದಾಗಿದ್ದೇವೆ. ನಮ್ಮ ಒಗ್ಗಟ್ಟನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.೪೦ ವರ್ಷದ ಸ್ತಂಭ ಶಿಥಿಲ:
೧೦೮ ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಬೇಕು ಎಂದಾಗ ೩.೫೦ ಲಕ್ಷ ರು. ಖರ್ಚಾಗುತ್ತದೆ ಎಂಬ ವಿಷಯ ತಿಳಿದು ಕೆರಗೋಡು ಗ್ರಾಮದ ಜನರಷ್ಟೇ ಅಲ್ಲದೇ, ಸುತ್ತಮುತ್ತಲ ಮರಿಲಿಂಗನದೊಡ್ಡಿ, ಪಂಚೇಗೌಡನದೊಡ್ಡಿ, ಕಲ್ಮಂಟಿ ದೊಡ್ಡಿ, ಅಂಕಣ್ಣನ ದೊಡ್ಡಿ, ತಾಳೆಮೆಳೆದೊಡ್ಡಿ, ಅಗಸರದೊಡ್ಡಿ, ಕುಂಬಾರದೊಡ್ಡಿ, ಕೋಡಿದೊಡ್ಡಿ, ಹೊಸೂರು ಮುದ್ದನದೊಡ್ಡಿ, ಕೆರಗೋಡು ದೊಡ್ಡಿ, ಕುಳ್ಳಂಗಿನ ದೊಡ್ಡಿ (ಚಿಕ್ಕಬಾಣಸವಾಡಿ), ಸಿದ್ದೇಗೌಡನದೊಡ್ಡಿ ಸೇರಿದಂತೆ ೧೨ ದೊಡ್ಡಿಯ ಜನರು ಕೈಲಾದಷ್ಟು ಹಣವನ್ನು ಧ್ವಜಸ್ತಂಭಕ್ಕೆ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕೂಡ ಪಕ್ಷಬೇಧ ಮರೆತು ಹಣ ಕೊಟ್ಟಿದ್ದಾರೆ ಎಂದು ಕೆರಗೋಡು ಗ್ರಾಮದ ಜಗದೀಶ್ ಹೇಳುವ ಮಾತಾಗಿದೆ.
ನಿಷೇಧಾಜ್ಞೆ ನಡುವೆಯೂ ಊರು ಇಷ್ಟು ಶಾಂತವಾಗಿದೆ ಎಂದರೆ ಅದಕ್ಕೆ ಗ್ರಾಮದ ಜನರಲ್ಲಿರುವ ಒಗ್ಗಟ್ಟೇ ಮುಖ್ಯ ಕಾರಣ. ಈಗಲೂ ನಾವು ಅಣ್ಣ-ತಮ್ಮಂದಿರಂತೆಯೇ ಇದ್ದೇವೆ. ಚುನಾವಣೆ ಬಂದಾಗ ಅವರಿಷ್ಟ ಬಂದವರಿಗೆ ಓಟು ಹಾಕಿಕೊಳ್ಳುತ್ತಾರೆ. ಮರುದಿನಕ್ಕೆ ಎಲ್ಲರೂ ಒಂದಾಗಿರುತ್ತಾರೆ. ಗಲಾಟೆ, ಗಲಭೆ, ರಕ್ತಪಾತವಾದ ನಿದರ್ಶನಗಳೇ ನಮ್ಮೂರಿಗಿಲ್ಲ ಎನ್ನುವ ಮಾತನ್ನು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಲ್.ಕೃಷ್ಣ ಹೇಳುತ್ತಾರೆ.
ಹನುಮಧ್ವಜಕ್ಕಾಗಿಯೇ ಧ್ವಜಸ್ತಂಭ ನಿರ್ಮಾಣ:
ಧ್ವಜಸ್ತಂಭ ಸ್ಥಾಪನೆಗೆ ಮತ್ತು ಶ್ರೀಆಂಜನೇಯಸ್ವಾಮಿ ಧ್ವಜ ಹಾರಾಟಕ್ಕೆ ಪಂಚಾಯ್ತಿಯ ೧೮ ಸದಸ್ಯರು ಜ.೨೫ರಂದು ಬೆಂಬಲ ಸೂಚಿಸಿ ನಿರ್ಣಯ ಮಾಡಿದ್ದಾರೆ. ಒಂದಿಬ್ಬರು ಸದಸ್ಯರು ಬಿಟ್ಟರೆ ಎಲ್ಲಾ ಸದಸ್ಯರೂ ಧ್ವಜದ ಪರವಾಗಿದ್ದಾರೆ. ಇಡೀ ಊರಿನ ಜನರೆಲ್ಲರೂ ಹನುಮ ಧ್ವಜದ ಪರವಾಗಿ ನಿಂತಿದ್ದಾರೆ. ಧ್ವಜಸ್ತಂಭ ಸ್ಥಾಪನೆಯಿಂದ ಆರಂಭವಾಗಿ ಹನುಮಧ್ವಜ ಹಾರಾಡುವ ತನಕ ಒಬ್ಬರೇ ಒಬ್ಬರೂ ಕೂಡ ಕಾನೂನಿನ ಕೊಂಕನ್ನು ಎತ್ತಿರಲಿಲ್ಲ. ಈಗ ಎಲ್ಲರೂ ಧ್ವಜಸ್ತಂಭವನ್ನು ಕಾನೂನಿನ ಕುಣಿಕೆಗೆ ಹಾಕಿ ತೂಗಿ ನೋಡುತ್ತಿದ್ದಾರೆ ಎಂದು ಬೇಸರದಿಂದ ನುಡಿದರು.
ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣ ಮಾಡಲಾಗುವ ಧ್ವಜ ಸ್ತಂಭದಲ್ಲಿ ರಾಷ್ಟ್ರಧ್ವಜ, ನಾಡಧ್ವಜವೇ ಹಾರಾಡಬೇಕು. ಅಲ್ಲಿ ಬೇರೆ ಧ್ವಜಗಳಿಗೆ ಅವಕಾಶವಿಲ್ಲ ಎಂದು ಮೊದಲೇ ಹೇಳಬೇಕಿತ್ತು. ಸ್ಥಳ ಮಹಜರು ನಡೆಸಿದ ಪಂಚಾಯ್ತಿ ಅಧ್ಯಕ್ಷರು ಅಥವಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಯಾರೊಬ್ಬರೂ ಸರ್ಕಾರಿ ಜಾಗದಲ್ಲಿ ಶ್ರೀಆಂಜನೇಯಸ್ವಾಮಿ ಧ್ವಜ ಹಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲವೆಂದು ತಿಳಿಸಿಕೊಡಲಿಲ್ಲ. ಧ್ವಜಸ್ತಂಭ ಸ್ಥಾಪನೆಯಿಂದ ಈ ರೀತಿಯ ಕಾನೂನು ಸಮಸ್ಯೆ ಎದುರಾಗುತ್ತದೆ ಎಂದಿದ್ದರೆ ನಾವ್ಯಾರೂ ಧ್ವಜಸ್ತಂಭ ನಿರ್ಮಾಣ ಮಾಡುತ್ತಿರಲಿಲ್ಲ. ಅದಕ್ಕೆ ಬೇರೆ ಜಾಗವನ್ನು ಹುಡುಕಿಕೊಳ್ಳುತ್ತಿದ್ದೆವು ಎಂದು ಗ್ರಾಮದ ಬಸಂತ್ ತಿಳಿಸಿದರು.