ಕನಕಪುರ: ರೈತ ನಾಯಕ ದಿ. ಪ್ರೊ.ನಂಜುಂಡಸ್ವಾಮಿ ಆಶಯದಂತೆ ಯುವಜನತೆ ರೈತ ಸಂಘಟನೆಯಲ್ಲಿ ತೊಡಗಿಕೊಂಡು ಸಂಘವನ್ನು ಬಲಿಷ್ಠಗೊಳಿಸಬೇಕು ಎಂದು ರೈತ ಸಂಘದ ಯುವ ಘಟಕದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಕರೆ ನೀಡಿದರು.
ಪ್ರೊ.ಎಂ.ಡಿ.ನಂಜುಂಡಸ್ವಾಮಿ ದೇಶದ ರೈತರ ಆತ್ಮಗೌರವ ಹೆಚ್ಚಿಸಿದರು. ೮೦ರ ದಶಕದಲ್ಲೇ ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ರಾಜಕಾರಣಿಗಳ ವಿರುದ್ಧ ಧ್ವನಿ ಎತ್ತಿದ ಧೀಮಂತ ಹೋರಾಟಗಾರರು ಅವರು. ನಮ್ಮನ್ನು ಅಗಲಿ ಇಪ್ಪತ್ತು ವರ್ಷ ಕಳೆದರೂ ಇಂದಿಗೂ ಅವರು ಹಾಕಿಕೊಟ್ಟ ಮಾರ್ಗದರ್ಶನ ರೈತರ ಹೋರಾಟಗಳಿಗೆ ಸ್ಪೂರ್ತಿಯಾಗಿವೆ. ಇಂತಹ ರೈತ ಪರ ಹೋರಾಟಗಾರ ನಾಯಕ ಮತ್ತೊಮ್ಮೆ ಹುಟ್ಟಿ ಬರಬೇಕು ಎಂದರು.
ಪ್ರಗತಿಪರ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಎಂ.ಡಿ. ನಂಜುಂಡಸ್ವಾಮಿ ಅವರು ತಮ್ಮ ಜೀವನದ ಉದ್ದಕ್ಕೂ ರೈತರಿಗಾಗಿ ದುಡಿದು ತಮ್ಮ ಪ್ರಾಣವನ್ನೆ ಅರ್ಪಿಸಿದರು. ರಾಜಕಾರಣಿಗಳು ರೈತರನ್ನು ಒಕ್ಕಲಿಬ್ಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಹೊಂಗಾಣಿದೊಡ್ಡಿ ಗ್ರಾಮದ ರೈತರನ್ನು ಒಕ್ಕಲಿಬ್ಬಿಸುವ ಕೆಲಸಕ್ಕೆ ಮುಂದಾಗಿರುವ ಯಾವ ಪ್ರಭಾವಿ ವ್ಯಕ್ತಿಯಾದರೂ ಸರಿ ನಂಜುಂಡಸ್ವಾಮಿಯವರ ಮಾರ್ಗದರ್ಶನದಂತೆ ಶಾಂತಿಯುತ ಹೋರಾಟದಲ್ಲಿ ಗೆಲ್ಲುತ್ತೇವೆ. ಭೂಮಿ ಬಿಡುವ ಪ್ರಶ್ನೆಯೇ ಇಲ್ಲ. ಹೊಂಗಾಣಿದೊಡ್ಡಿ ಗ್ರಾಮಸ್ಥರ ಹೋರಾಟಕ್ಕೆ ಸಂಘಟನೆಗಳು ಬೆಂಬಲವಾಗಿರುತ್ತವೆ ಎಂದು ಭರವಸೆ ನೀಡಿದರು.ಪ್ರಗತಿಪರ ಸಂಘಟನೆ ಮುಖಂಡ ಸುರೇಶ್, ವೈಭವ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಪುಟಲಿಂಗಯ್ಯ, ಜಿಲ್ಲಾ ಕಾರ್ಯದರ್ಶಿ ಪಡುವಣಗೆರೆ ಕುಮಾರ್, ಶಿವರಾಜು, ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಕುಮಾರ್, ಸಿದ್ದರಾಜು ಸಿದ್ದರಾಮೇಗೌಡ, ರವಿ, ಹೊಂಗಾಣಿ ದೊಡ್ಡಿ ಮಲ್ಲೇಶ್, ರವಿ, ಸಾಗರ್, ಶಶಿಕುಮಾರ್, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 02:
ರಾಜ್ಯ ರೈತ ಸಂಘದಿಂದ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ನಡೆದ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರೈತ ಮುಖಂಡ ಚೀಲೂರು ಮುನಿರಾಜು ಮಾತನಾಡಿದರು.