ಕೇರಳದ ಕ್ಯಾಲಿಕೇಟ್ ನಿಂದ ಬೆಂಗಳೂರಿಗೆ ಹೊರಟಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸೊಂದು ವೇಗ ಮಿತಿ ಸಂಚಾರ ನಿಯಂತ್ರಣ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಚಾಲಕ ಮತ್ತು ನಿರ್ವಾಹಕ ಮೃತಪಟ್ಟು, 24 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಅವರಗೆರೆ ಸೇತುವೆ ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ರಾಮನಗರ
ಕೇರಳದ ಕ್ಯಾಲಿಕೇಟ್ ನಿಂದ ಬೆಂಗಳೂರಿಗೆ ಹೊರಟಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸೊಂದು ವೇಗ ಮಿತಿ ಸಂಚಾರ ನಿಯಂತ್ರಣ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಚಾಲಕ ಮತ್ತು ನಿರ್ವಾಹಕ ಮೃತಪಟ್ಟು, 24 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಅವರಗೆರೆ ಸೇತುವೆ ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಬಸ್ಸಿನ ಚಾಲಕ ವಿದಿಲೇಶ್ ಮತ್ತು ನಿರ್ವಾಹಕ ಅರುಣ್ ಕುಮಾರ್ ಮೃತರು. ಇವರ ಶವಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ 24 ಪ್ರಯಾಣಿಕರನ್ನು ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಗೆ ದಾಖಲಿಸಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಓರ್ವನನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕ್ಯಾಲಿಕೇಟ್‌ನಿಂದ ಬೆಂಗಳೂರಿಗೆ ರಾತ್ರಿ ಹೊರಟ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ (ಕೆಎಲ್ 15, ಎ - 1963) ಬೆಳಗ್ಗೆ 6.30ರ ಸಮಯದಲ್ಲಿ ಬಿಡದಿ ಸಮೀಪದ ಅವರಗೆರೆ ಸೇತುವೆ ಬಳಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿನ ವೇಗ ಮಿತಿ ಸಂಚಾರ ನಿಯಂತ್ರಣ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆನಂತರ ರಸ್ತೆ ವಿಭಜಕಕ್ಕೂ ಡಿಕ್ಕಿಯಾಗಿ ಹೆದ್ದಾರಿಯಲ್ಲಿ ಉರುಳಿ ಬಿದ್ದಿದೆ.ಘಟನೆಯಲ್ಲಿ ಚಾಲಕ ವಿದಿಲೇಶ್ ಮತ್ತು ನಿರ್ವಾಹಕ ಅರುಣ್ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, 24 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಪ್ರಯಾಣಿಕರೆಲ್ಲರು ಕೇರಳ ಮೂಲದವರಾಗಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ವೇಗ ಮಿತಿ ಸಂಚಾರಿ ನಿಯಂತ್ರಣ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪೊಲೀಸರು ಕ್ರೇನ್ ನ ಸಹಾಯದಿಂದ ಕಂಬವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.