ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಕೇರಳ ಸಮಾಜ ಆಶ್ರಯದಲ್ಲಿ ಓಣಂ ಹಬ್ಬದ ಆಚರಣೆ ಕಾರ್ಯಕ್ರಮ ನಡೆಯಿತು. ಹಬ್ಬದ ಕಾರ್ಯಕ್ರಮ ಅಂಗವಾಗಿ ಕುಶಾಲನಗರ ಕೇರಳ ಸಮಾಜದ ಬಳಿಯಿಂದ ಮಾವೇಲಿ ವೇಷಧಾರಿಯ ಜೊತೆಯಲ್ಲಿ ಚಂಡೆ ವಾದ್ಯದ ಸಹಿತ ಸಮಾರಂಭ ನಡೆಯುವ ಸಭಾಂಗಣ ತನಕ ಮೆರವಣಿಗೆ ನಡೆಯಿತು. ಸಮಾಜದ ಸದಸ್ಯರಿಗೆ ಬೆಳಗ್ಗೆ ಪೂಕಳಂ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಡ್ರಾಯಿಂಗ್ ಸ್ಪರ್ಧೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮ ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷರಾದ ಪಿ ರವೀಂದ್ರನ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿ ಎಂ ವಿಜಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್, ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ ಚಂದ್ರ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭ ಕೇರಳ ಸಮಾಜದ ಸ್ಥಾಪಕ ಆಡಳಿತ ಮಂಡಳಿಯ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರಾಂಕ್ ಪಡೆದ ಜಾಯ್ಸ್ ಲೀನಾ ಜೋಸೆಫ್ ಅವರಿಗೆ ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಮಧ್ಯಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮಾಜದ ಉಪಾಧ್ಯಕ್ಷರಾದ ಕೆ ಬಾಬು, ಕಾರ್ಯದರ್ಶಿ ಕೆ ಜೆ ರಾಬಿನ್, ಸಹ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ ಸಿ ಆನಂದ್, ನಿರ್ದೇಶಕರಾದ ಕೆ ವರದ ಎಂ ಜಿ ಪ್ರಕಾಶ್, ಪಿ ಕೆ ಧನರಾಜ್ ಎನ್ ಎ ಸುಶೀಲ ವಿ ಎಸ್ ಜಿತೇಶ್, ನಿರ್ಮಲ ಶಿವರಾಜ್ ಮತ್ತಿತರರು ಇದ್ದರು.