ಮಂಗಳೂರು: ಸುಮಾರು ಮೂರು ದಶಕಗಳ ಕಾಲ ಕನ್ನಡಿಗರು ನಡೆಸಿದ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಮಂಗಳೂರನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿತ್ತು. ಅ. 1 ರಿಂದ ಈ ಆದೇಶ ಜಾರಿಯಾಗುತ್ತಿದೆ. ಇದರ ವಿರುದ್ಧ ಈಗ ಕೇರಳದಲ್ಲಿ ಹೋರಾಟ ಆರಂಭವಾಗಿದ್ದು, ಮಂಗಳೂರಲ್ಲೂ ಆಕ್ರೋಶ ವ್ಯಕ್ತವಾಗತೊಡಗಿದೆ. ಕರಾವಳಿಯ ರೈಲ್ವೆ ಹೋರಾಟಗಾರರು ಜಾಲತಾಣಗಳಲ್ಲಿ ವ್ಯಾಪಕ ಅಭಿಯಾನ ಆರಂಭಿಸಿದ್ದಾರೆ. ಇದುವರೆಗೆ ಕೇರಳದ ಅಧಿಕಾರಿಗಳು ಕರ್ನಾಟಕದ ರೈಲ್ವೆ ಆದಾಯ ಕಸಿದುಕೊಂಡಿರುವ ಬಗ್ಗೆ ತರಹೇವಾರಿಯಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಮಂಗಳೂರನ್ನು ಮೈಸೂರು ವಿಭಾಗದ ವ್ಯಾಪ್ತಿಗೆ ತಂದಿರುವುದರಿಂದ ಕರ್ನಾಟಕದ ಕರಾವಳಿ ಪ್ರದೇಶದ ರೈಲ್ವೆ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಬಹುದು. ವಿಶೇಷವಾಗಿ ಕೇರಳದ ಪ್ರವೇಶ ದ್ವಾರಗಳಂತಿರುವ ಮಂಜೇಶ್ವರ, ಉಪ್ಪಳ ಹಾಗೂ ಕುಂಬಳೆ ರೈಲು ನಿಲ್ದಾಣಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆಯಿದೆ ಎಂದು ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಪ್ರತಿಕ್ರಿಯಿಸಿದ್ದಾರೆ.
ಸೇಲಂ ಪ್ರತ್ಯೇಕ ವಿಭಾಗವಾದಾಗ ನಷ್ಟ ಆಗಿರಲಿಲ್ಲವೇ: ಆದರೆ ಈ ಸಂದರ್ಭದಲ್ಲಿ ಮತ್ತೊಂದು ಪ್ರಶ್ನೆಯೂ ಮುನ್ನೆಲೆಗೆ ಬರುತ್ತಿದೆ. 2007ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ, ಸಿಪಿಐ(ಎಂ) ಬೆಂಬಲದೊಂದಿಗೆ ಪ್ರತ್ಯೇಕ ಸೇಲಂ ವಿಭಾಗ ರಚನೆಯಾದಾಗ ಪಾಲಕ್ಕಾಡ್ ವಿಭಾಗಕ್ಕೆ ಗಣನೀಯ ಪ್ರಮಾಣದ ಆದಾಯ ಹಾಗೂ ಪ್ರದೇಶ ನಷ್ಟವಾಗಿರಲಿಲ್ಲವೇ? ಆಗ ಹೊಸ ವಿಭಾಗ ರಚನೆಗೆ ಕಾಂಗ್ರೆಸ್ ಮುಂದಾಗಿತ್ತು. ಆದರೆ ಈಗ ಮಂಗಳೂರಿನ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಬದಲಾವಣೆ ಪ್ರಸ್ತಾಪವಾದಾಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣವೇನು ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಮುಖ್ಯಮಂತ್ರಿ ಅವರ ನಿಲುವು ಏನು ಎಂಬುದನ್ನೂ ಕಾದು ನೋಡಬೇಕಿದೆ ಎಂದಿದ್ದಾರೆ.
ಮಂಗಳೂರು ಪ್ರತ್ಯೇಕ ರೈಲ್ವೆ ವಲಯ ಆಗಬೇಕು ಎಂಬ ಬೇಡಿಕೆಯನ್ನು ಇರಿಸಿ ಕರಾವಳಿಯಲ್ಲಿ ಹೋರಾಟ ನಡೆಸುತ್ತಲೇ ಬಂದಿತ್ತು. ಆದರೆ ನಮ್ಮ ಸಂಸದರು ಈ ವಿಚಾರವನ್ನು ಗೌಣವಾಗಿಸಿ ಮಂಗಳೂರನ್ನು ಮೈಸೂರಿಗೆ ಸೇರಿಸಲು ಶ್ರಮಿಸಿದ್ದಾರೆ. ಹಿಂದೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಈಗ ಇರುತ್ತಿದ್ದರೆ ಅವರೇ ಕೊಂಕಣ ರೈಲ್ವೆ ಸೇರಿಸಿ ಮಂಗಳೂರನ್ನು ಪ್ರತ್ಯೇಕ ವಿಭಾಗ ಮಾಡುತ್ತಿದ್ದರು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಶತಮಾನ ಇತಿಹಾಸವನ್ನು ಹೊಂದಿದೆ. ಈಗ ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರಿದ ಕಾರಣ ಮಂಗಳೂರಿನಲ್ಲಿ ರೈಲ್ವೆ ಹಳಿ ಡಬ್ಲಿಂಗ್, ಹೊಸ ರೈಲುಗಳ ಆರಂಭ ಹೀಗೆ ಎಲ್ಲವೂ ಹಿನ್ನಡೆ ಕಾಣಲಿದೆ. ಎಂದು ರೈಲ್ವೆ ಹೋರಾಟಗಾರರೂ ಆಗಿರುವ ವಿಧಾನ ಪರಿಷತ್ ಸದಸ್ಯ ಪಿ.ವಿ.ಮೋಹನ್ ಹೇಳಿದ್ದಾರೆ.ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿದ ವಿಚಾರ ಮುಂದುರಿಸಿ ನಾವು ಹೋರಾಟ ನಡೆಸುತ್ತೇವೆ. ಅದೇ ವಿಚಾರದಲ್ಲಿ ಸಂಸದರನ್ನು ಸೋಲಿಸುತ್ತೇವೆ ಎಂದು ಪಿ.ವಿ.ಮೋಹನ್ ಪ್ರತಿಕ್ರಿಯಿಸಿದರು. ಮಂಗಳೂರು ಕೇಂದ್ರೀಕರಿಸಿ ಹೆಚ್ಚುವರಿ ರೈಲು ಸೇವೆ ಕಲ್ಪಿಸಿ: ಕೇರಳದ ಜನಪ್ರತಿನಿಧಿಗಳು ಅಲ್ಲಿನ ಜನರ ರೈಲ್ವೆ ಬೇಡಿಕೆಗಳಿಗಾಗಿ ನಿರಂತರವಾಗಿ ಒತ್ತಡ ತಂದು ಹೆಚ್ಚುವರಿ ರೈಲು ಸೇವೆಗಳನ್ನು ಪಡೆದುಕೊಳ್ಳುತ್ತಿರುವಾಗ, ಕರ್ನಾಟಕದ ಜನಪ್ರತಿನಿಧಿಗಳು ಇದೇ ರೀತಿಯ ಕಾಳಜಿ ಮತ್ತು ಒತ್ತಡವನ್ನು ತೋರಿಸದಿರುವುದು ದುರಂತ. ಕರ್ನಾಟಕದ ಜನರ, ವಿಶೇಷವಾಗಿ ದುಡಿಯುವ ವರ್ಗದ ಪ್ರಯಾಣದ ಅಗತ್ಯಗಳನ್ನು ಪರಿಗಣಿಸಿ ರೈಲು ಸೇವೆಗಳನ್ನು ಹೆಚ್ಚಿಸುವಂತೆ ರಾಜ್ಯದ ಜನಪ್ರತಿನಿಧಿಗಳು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಮೇಲೆ ಒತ್ತಡ ಹೇರಬೇಕು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕೇಂದ್ರದ ರೈಲ್ವೆ ಇಲಾಖೆಯನ್ನು ಆಗ್ರಹಿಸಿದೆ.
ನಮ್ಮ ರೈಲು, ನಮ್ಮ ಆದಾಯ, ನಮ್ಮ ರಾಜ್ಯದ ಕೈತಪ್ಪದಂತೆ ನೋಡಿಕೊಳ್ಳಬೇಕು:
ಕೇರಳದ ಪಾಲ್ಘಾಟ್ ವಿಭಾಗದ ಶೇ 90 ರಷ್ಟುಆದಾಯ ಮಂಗಳೂರು ರೈಲ್ವೆ ವಲಯದಿಂದಲೇ ಹೋಗುತ್ತಿದೆ, ಅಂದರೆ ಆರಂಭದಿಂದಲೂ ಇಷ್ಟು ದೊಡ್ಡ ಆದಾಯದಿಂದ ಕರ್ನಾಟಕ ವಂಚಿತವಾಗುತ್ತಿದೆ, ನಮ್ಮ ಕಣ್ಣೆದುರಲ್ಲೇ ಅದು ಕೇರಳಂನ ಪಾಲಾಗುತ್ತಿದೆ. ಮಂಗಳೂರಿನಿಂದ ಕೋಟ್ಯಾಂತರ ಆದಾಯ ಪಡೆಯುವ ಪಾಲ್ಘಾಟ್ ವಿಭಾಗ, ರೈಲು ನಿಲ್ದಾಣಗಳ, ಹಳಿಗಳ, ಪ್ರಯಾಣಿಕರಿಗೆ ಸೌಕರ್ಯಗಳ ಅಭಿವೃದ್ಧಿಯ ವಿಷಯ ಬಂದಾಗ ಮಾತ್ರ ಮಂಗಳೂರನ್ನು ಪೂರ್ಣ ಕಡೆಗಣಿಸಿದೆ !
ಮಂಗಳೂರು ನೆಲ ನಮ್ಮದು, ಬಂದರು ನಮ್ಮದು, ರೈಲು ಬಳಸುವವರು ನಾವು, ಸರಕುಗಳು ನಮ್ಮದು, ಆದಾಯ ಕೊಡುವವರು ನಾವು, ಆದರೆ ಆದಾಯ ಹೋಗುವುದು ಮಾತ್ರ ಕೇರಳಂಗೆ, ಇದು ಇದುವರೆಗೆ ನಡೆಯುತ್ತಿತ್ತು, ನಮಗೆ ಮೋಸವಾಗುತ್ತಿತ್ತು.