ಓದುಗರನ್ನು ಗೆಲ್ಲುವಂತಹ ಸಾಹಿತ್ಯ ಸೃಷ್ಟಿಯಾಗಲಿ: ಸತೀಶ ಕುಲಕರ್ಣಿ

KannadaprabhaNewsNetwork |  
Published : Aug 28, 2026, 02:30 AM IST
ಹಾವೇರಿಯ ವಿನಾಯಕ ನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾಧರ ನಂದಿ ಸಭಾಂಗಣದಲ್ಲಿ ಜಿಲ್ಲೆಯ ಆಯ್ದ 25 ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಹಾವೇರಿ ವಿನಾಯಕ ನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾಧರ ನಂದಿ ಸಭಾಂಗಣದಲ್ಲಿ ಜಿಲ್ಲೆಯ ಆಯ್ದ 25 ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ನಡೆಯಿತು.

ಹಾವೇರಿ: ಲೇಖಕರೇ ಪುಸ್ತಕ ಸಂಸ್ಕೃತಿಗೆ ಬೀಜವಿದ್ದಂತೆ. ಮುದ್ರಕ, ಪ್ರಕಾಶಕ ಹಾಗೂ ವಿತರಕ ಒಂದು ವೃತ್ತ. ಇದು ಓದುಗನಿಲ್ಲದಿದ್ದರೆ ಅಪೂರ್ಣ. ಅಂತಿಮವಾಗಿ ಓದುಗನೇ ನಿರ್ಣಾಯಕ. ಅಂತಹ ಓದುಗರನ್ನು ಗೆಲ್ಲುವಂತಹ ಸಾಹಿತ್ಯ ಸೃಷ್ಟಿಯಾಗಬೇಕು ಎಂದು ಲೇಖಕ ಸತೀಶ ಕುಲಕರ್ಣಿ ಹೇಳಿದರು.

ಇಲ್ಲಿನ ವಿನಾಯಕ ನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾಧರ ನಂದಿ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ಆಯ್ದ 25 ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕ ಮತ್ತು ಗ್ರಂಥಾಲಯಗಳ ಬಗ್ಗೆ ಕುತೂಹಲವಿರಬೇಕು. ಎಷ್ಟೋ ಬಾರಿ ಗ್ರಂಥಾಲಯಗಳಲ್ಲಿ ಸಿಗದೇ ಇರುವ ಪುಸ್ತಕಗಳು ಬೀದಿ ಬದಿಯ ಪುಸ್ತಕ ಮಾರಾಟಗಾರರ ಬಳಿಯಲ್ಲಿ ಸಿಗುತ್ತವೆಂದು ಹೇಳಿ ಸುಪ್ರಿಸಿದ್ಧ ಕವಿ ಮಧುರಚೆನ್ನರ ''''ನನ್ನ ನಲ್ಲ'''' ಎಂಬ ಕವನ ಸಂಕಲನ ಧಾರವಾಡದ ರಸ್ತೆ ಅಂಗಳದಲ್ಲಿ ಸಿಕ್ಕದ್ದನ್ನು ಸ್ವಾರಸ್ಯಕರವಾಗಿಯೂ ಹೇಳಿದರು.

ನಮ್ಮ ವಿಶ್ವವಿದ್ಯಾಲಯಗಳಲ್ಲಾಗಲಿ, ಜಿಲ್ಲಾ ಕನ್ನಡ ಸಾಹಿತಯ್ಯ ಪರಿಷತ್ತಿನ ಗ್ರಂಥಾಲಯಗಳಲ್ಲಿ ಜಿಲ್ಲೆಯ ಲೇಖಕರ ಪುಸ್ತಕಗಳು ಓದುಗರಿಗೆ ಸಿಗುವಂತಾಗಬೇಕು. ಅವುಗಳ ಮಾರಾಟ ವ್ಯಸ್ಥೆಯಾಗಬೇಕು ಎಂದರು.

ಡಾ. ಮಾನಸ ಮಾತನಾಡಿ, ಗ್ರಂಥಾಲಯಗಳನ್ನು ಸೃಷ್ಠಿ ಮಾಡಬಹುದು, ಆದರೆ ಓದುಗರನ್ನು ಸೃಷ್ಟಿಸುವುದೇ ಸವಾಲಿನ ಕೆಲಸ. ಇಂತಹ ಕಠಿಣ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಜಾಗೃತಿ ಸಮಿತಿ ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಗುಣಾತ್ಮಕವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಬಾಲ್ಯದಲ್ಲಿಯೇ ಮನೆ ವಾತಾವರಣವನ್ನು ಪಾಲಕರು ನಿರ್ಮಿಸಬೇಕು. ಪುಸ್ತಕಾಭಿರುಚಿ ವಾತಾವರಣದಲ್ಲಿ ಮಕ್ಕಳು ಬೆಳೆದೆರೆ ಅವರಲ್ಲಿ ಸುಸಂಸ್ಕೃತಿ ಹುಟ್ಟಿ ಅಂತಹ ಮಕ್ಕಳಿಂದ ಸಮಾಜಕ್ಕೆ ಕೇಡು ಕಡಿಮೆ ಎಂದು ಹೇಳಿ ಶಿಕ್ಷಕರಾದವರು ಪಠ್ಯೇತರ ಪುಸ್ತಕಗಳನ್ನು ಓದಿ ವಿದ್ಯಾರ್ಥಿಗಳಿಗೆ ಬೋಧಿಸಿ ಮಾದರಿಯಾಗಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, ಪುಸ್ತಕದ ಓದು ಏಕಾಗ್ರತೆಯನ್ನು ಹುಟ್ಟು ಹಾಕುತ್ತದೆ. ಸಮಾಜದ ಪರವಾಗಿ ಚಿಂತನೆ ಮಾಡಲು ಹಚ್ಚುತ್ತವೆ. ಜಿಲ್ಲಾ ಜಾಗೃತಿ ಸಮಿತಿ ಜಿಲ್ಲೆಯಲ್ಲಿ 50 ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸಿದ್ದು ಪ್ರಾಧಿಕಾರದ ಯೋಜನೆಯ ಹೆಜ್ಜೆ ಗುರುತುಗಳನ್ನು ಯಶಸ್ವಿಯಾಗಿ ಮೂಡಿಸಿವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ 51ನೇ ಗ್ರಂಥಾಲಯ ಉದ್ಘಾಟನೆ ನಡೆಯಿತು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಲಿಂಗಯ್ಯ ಹಿರೇಮಠ ಉದ್ಘಾಟಿಸಿದರು. ಪ್ರಾಧಿಕಾರ ಸುಮಾರು 500 ಪುಸ್ತಕಗಳನ್ನು ಗ್ರಂಥಾಲಯುಕ್ಕೆ ನೀಡಿದರೆ, ಜಾಗೃತಿ ಸಮಿತಿ 50 ಪುಸ್ತಕಗಳನ್ನು ನೀಡಿತು. ವೈ.ಬಿ. ಆಲದಕಟ್ಟಿ, ಎಸ್.ಆರ್. ಹಿರೇಮಠ ಮಾತನಾಡಿದರು. ಸಮಾರಂಭದಲ್ಲಿ ಡಾ.ಕೆ.ಎಚ್. ಮುಕ್ಕಣ್ಣನವರ, ಗದಿಗೆಪ್ಪ ಹೊಟ್ಟೆಗೌಡ್ರ, ಪೃಥ್ವಿರಾಜ ಬೆಟಗೇರಿ, ಹನುಮಂತಗೌಡ ಗೊಲ್ಲರ, ಸೋಮನಾಥ ಡಿ, ಸಿದ್ದೇಶ್ವರ ಹುಣಸಿಕಟ್ಟಿಮಠ, ಶಂಕರ ಸುತಾರ, ಸುರೇಶ ಹೊಸಮನಿ, ಸಿ.ಎಸ್. ತಳವಾರ, ಆರ್.ವಿ. ಬಡಿಗೇರ, ಪೂಜಾಶ್ರೀ ರಿತ್ತಿಮಠ, ರವಿ ಸಿ., ಇತರರಿದ್ದರು. ಅಕ್ಕಮಹಾದೇವಿ ಹಾನಗಲ್ಲ ಮತ್ತು ರೇಣುಕಾ ಗುಡಿಮನಿ ನಾಡಗೀತೆ ಹಾಡಿದರು. ಜಾಗೃತಿ ಸಮಿತಿಯ ಸದಸ್ಯ ಸಿ.ಎಸ್. ಮರಳಿಹಳ್ಳಿ ಸ್ವಾಗತಿಸಿದರು. ಡಾ. ಲಕ್ಷ್ಮಿಕಾಂತ ಮಿರಜಕರ ನಿರ್ವಹಿಸಿದರು. ಸೋಮಣ್ಣ ಡಂಬರಮತ್ತೂರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡ ಅಂತಾಪುರದಲ್ಲಿ ಮತ್ತೆರಡು ಜಿನ ಶಾಸನಗಳ ಅನ್ವೇಷಣೆ
ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟ ಆಯ್ಕೆ