ಕನ್ನಡಪ್ರಭ ವಾರ್ತೆ ಚಾಮರಾಜನಗರಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುಮ ದೇವರಿಗಾದ ಅಪಮಾನವನ್ನು ಖಂಡಿಸಿ, ಹನುಮ ಧ್ವಜವನ್ನು ಅದೇ ಜಾಗದಲ್ಲಿ ಹಾರಿಸಲು ಆಗ್ರಹಿಸಿ ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡ ರಾ. ಸತೀಶ್, ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಸುಮಾರು ೩೫ ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ರಾಷ್ಟ್ರಧ್ವಜವನ್ನು, ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಕನ್ನಡ ಧ್ವಜವನ್ನು ಹಾಗೂ ಉಳಿದ ಹಬ್ಬ ಹರಿದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇನ್ನೂ ಉಳಿದ ವರ್ಷಪೂರ್ತಿ ದಿನಗಳಲ್ಲಿ ಹನುಮ ಧ್ವಜವನ್ನು ಆಚರಿಸುವ ಪರಂಪರೆ ನಡೆದು ಬಂದಿದೆ.
ಧ್ವಜದ ಕಂಬವು ಶಿಥಿಲಗೊಂಡಿದ್ದು, ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯವಾದ ಶ್ರೀರಾಮಮಂದಿರದಲ್ಲಿ ಶ್ರೀಬಾಲರಾಮನ ಪ್ರತಿಷ್ಠಾಪನೆ ಜರುಗುವ ಈ ಸಂಭ್ರಮದ ಸುದಿನದ ಸ್ಮರಣಾರ್ಥವಾಗಿ ಕೆರೆಗೋಡು ಮತ್ತು ಸುತ್ತಮುತ್ತಲಿನ 12 ದೊಡ್ಡಿಗಳ ಗ್ರಾಮಸ್ಥರು ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಯನ್ನು ಹೊತ್ತೊಯ್ಯುತ್ತಿದ್ದ ಅರ್ಜುನ ಆನೆಯ ನೆನಪಿಗಾಗಿ ೧೦೮ ಅಡಿಯ ಭವ್ಯವಾದ ಅರ್ಜುನ ಧ್ವಜ ಕಂಬವನ್ನು ನಿರ್ಮಿಸಲು ೪ ರಿಂದ ೫ ಲಕ್ಷ ದೇಣಿಗೆ ಸಂಗ್ರಹಿಸಿ ಜನವರಿ 22ರಂದು ಶ್ರೀ ಹನುಮಧ್ವಜವನ್ನು ಹಾರಿಸುವ ಯೋಜನೆಯನ್ನು ಮಾಡಿದ್ದರು,ಹನುಮಧ್ವಜವನ್ನು ಹಾರಿಸಲು ಅನುಮತಿ ಕೋರಿ ಕೆರೆಗೋಡು ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು, ಕೆರೆಗೋಡು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಇಟ್ಟು ಸರ್ವಾನುಮತದಿಂದ ಆಗೀಕರಿಸಲಾಗಿರುತ್ತದೆ. ಅಲ್ಲದೇ ಜ.೨೫ ರಂದು ಕೆರೆಗೋಡು ಗ್ರಾಪಂನ ೨೨ಸದಸ್ಯರ ಬಲದ ಸಾಮಾನ್ಯ ಸಭೆಯಲ್ಲಿ ೨೦ ಸದಸ್ಯರು ಹಾಜರಿದ್ದು, ಇವರಲ್ಲಿ ೧೮ ಜನರು ಮೇಲ್ಕಂಡ ಅರ್ಜಿಗಳಿಗೆ ಒಪ್ಪಿಗೆಯ ಅಂಗೀಕಾರ ನೀಡಿರುತ್ತಾರೆ. ಒಬ್ಬರು ಈ ಅರ್ಜಿಗೆ ಸಂಬಂಧಿಸಿದ ವಿಷಯದಲ್ಲಿ ಆಕ್ಷೇಪಣೆ ಇಲ್ಲ ಎಂದು ತಿಳಿಸಿರುತ್ತಾರೆ.
ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ಜ. ೨೦ರಂದು ಶ್ರೀ ಹನುಮ ಧ್ವಜವನ್ನು ಸಾವಿರಾರು ಹನುಮ ಭಕ್ತರು ಹಾಗೂ ಗ್ರಾಮಸ್ಥರು ಸೇರಿ ಶ್ರೀ ಹನುಮಧ್ವಜವನ್ನು ಹಾರಿಸಿರುತ್ತಾರೆ. ಅಲ್ಲದೇ 2024ರ ಜ.26 ಗಣರಾಜ್ಯೋತ್ಸವದ ನಿಮಿತ್ತ ಅರ್ಜುನ ಧ್ವಜ ಸ್ತಂಭದಲ್ಲಿ ಭವ್ಯವಾದ ತ್ರಿವರ್ಣ ಧ್ವಜವನ್ನು ಬೆಳಗ್ಗೆ ಹಾರಿಸಿ ರಾಷ್ಟ್ರಗೀತೆ ಹಾಡಿದ್ದಾರೆ. ಸೂರ್ಯಾಸ್ತದ ಒಳಗೆ ಧ್ವಜವನ್ನು ಗೌರವದಿಂದ ಗ್ರಾಮಸ್ಥರು ಇಳಿಸಿರುತ್ತಾರೆ. ಈ ದಿನ ಸೂರ್ಯಾಸ್ತದ ನಂತರ ಶ್ರೀ ಹನುಮಧ್ವಜವನ್ನು ಹಾರಿಸಲಾಗಿರುತ್ತದೆ.ರಾಷ್ಟ್ರ ವಿರೋಧಿ, ಹಿಂದೂ ದ್ವೇಷಿ, ಶ್ರೀ ಹನುಮ ದೇವರ ಅಪಮಾನಕಾರರಾದ ಕಾಂಗ್ರೆಸ್ಸಿನ ಕುಟೀಲ ನೀತಿಯ ಕಾರಣದಿಂದಾಗಿ ಅರ್ಜುನ ಧ್ವಜಸ್ತಂಭದಲ್ಲಿದ್ದ ಶ್ರೀ ಹನುಮಧ್ವಜವನ್ನು ಇಳಿಸಿ ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಧ್ವಜವನ್ನು ಮುಕ್ಕಾಲು ಧ್ವಜಕಂಬದವರೆಗೆ ಏರಿಸಿ ರಾಷ್ಟ್ರಗೀತೆ ಹಾಡದೇ, ಗ್ರಾಮಸ್ಥರು ಹಾಡುವುದಕ್ಕೂ ಬಿಡದೇ ಪೋಲಿಸರಿಂದ ಲಾಠಿಚಾರ್ಜ್ ಮಾಡಿಸಿ ರಾಷ್ಟ್ರಕ್ಕೆ ಮತ್ತು ಹಿಂದೂ ಧರ್ಮಕ್ಕೆ ಮತ್ತು ಸಮಾಜಕ್ಕೆ ಹಾಗೂ ಶ್ರೀ ಹನುಮ ದೇವರಿಗೂ ಅಪಮಾನ ಮಾಡಿರುತ್ತಾರೆ ಎಂದು ಆರೋಪಿಸಿದರು. ಈ ಅಪಮಾನಗಳನ್ನು ಖಂಡಿಸುತ್ತಾ ಅದೇ ಅರ್ಜುನ ಧ್ವಜಸ್ತಂಭದಲ್ಲಿ ಶ್ರೀ ಹನುಮಧ್ವಜವನ್ನು ಹಾರಿಸಲು ಆಗ್ರಹಿಸಿದರು. ಪ್ರತಿಭಟನೆಯಲ್ಲಿ, ರಮೇಶ್, ರಮೇಶ್‌ನಾಯಕ, ಶ್ರೀನಿವಾಸ್, ಶಿವು ವಿನೋದ್‌ರಾಜು, ಚೇತನ್ ಮತ್ತಿತರರು ಭಾಗವಹಿಸಿದ್ದರು