ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ
ಕೆರುವಾಶೆ-ಶಿರ್ಲಾಲು ಸಂಪರ್ಕಿಸುವ ಹೆಪ್ಪನಡ್ಕ ಸೇತುವೆ ಮಧ್ಯಭಾಗದಲ್ಲಿ ಕುಸಿತವಾಗಿದ್ದು, ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಅಪಾಯ ಎದುರಾಗಿದೆ. ಹತ್ತು ದಿನಗಳ ಹಿಂದೆ ಈ ಸೇತುವೆ ಮಧ್ಯೆ ಕುಸಿತವಾಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಮುಖ್ಯ ದಾರಿ: ಈ ಸೇತುವೆ ಬಲು ಮುಖ್ಯ ಸೇತುವೆಯಾಗಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಹೆಬ್ರಿ, ಕುಂದಾಪುರ, ಶಿವಮೊಗ್ಗ ಕಡೆಯಿಂದ ಕಳಸ, ಹೊರನಾಡು, ಧರ್ಮಸ್ಥಳ ಭಾಗಗಳಿಗೆ ಸಂಚರಿಸಲು ಈ ಸೇತುವೆಯನ್ನು ನೆಚ್ಚಿಕೊಳ್ಳಲಾಗಿದೆ. ಹೆಬ್ರಿ, ಮುನಿಯಾಲು, ಕಾಡುಹೊಳೆ, ಅಂಡಾರು, ಶಿರ್ಲಾಲು, ಕೆರುವಾಶೆ ಮಾರ್ಗವಾಗಿ ಬಜಗೋಳಿ ಮೂಲಕ ಧರ್ಮಸ್ಥಳ ಹೊರನಾಡು ಅಥವಾ ಮುನಿಯಾಲು ಕಾಡುಹೊಳೆ, ಅಂಡಾರು, ಶಿರ್ಲಾಲು, ಬಂಗ್ಲೆಗುಡ್ಡೆ ಮೂಲಕ ಕೂಡುಬೆಟ್ಟು ಮಾರ್ಗವಾಗಿ ಮಾಳ ಕಳಸ, ಹೊರನಾಡು ಸಂಪರ್ಕಿಸಲು ಸಹಕಾರಿಯಾಗಿದೆ.
ಹಳೆಯ ಸೇತುವೆ: 1967ರಲ್ಲಿ ಲೋಕೋಪಯೋಗಿ ಇಲಾಖೆಯು ಈ ಸೇತುವೆಯನ್ನು ನಿರ್ಮಾಣ ಮಾಡಿದೆ. ಸುಮಾರು 57 ವರ್ಷಗಳ ಹಳೆಯ ಸೇತುವೆ ಇದಾಗಿದ್ದು, ಎರಡು ವರ್ಷಗಳ ಹಿಂದೆ ಈ ಸೇತುವೆಯನ್ನು ದುರಸ್ತಿಗೊಳಿಸಲಾಗಿತ್ತು. ಕೆಳಭಾಗದ ಕಂಬಗಳಿಗೆ ಹಾಕಲಾಗಿದ್ದ ಸಿಮೆಂಟ್ ಕಿತ್ತುಹೋಗಿದ್ದು ಮತ್ತೆ ಕಾಂಕ್ರೀಟ್ ಹಾಕಿ ಸರಿಪಡಿಸಲಾಗಿತ್ತು. ರಸ್ತೆ ತಡೆಗೋಡೆಗಳನ್ನು ಕೂಡ ಸರಿಪಡಿಸಿ ಸಂಚಾರಕ್ಕೆ ಯೋಗ್ಯ ಸೇತುವೆಯಾಗಿ ಮಾರ್ಪಡಿಸಲಾಗಿತ್ತು.ಹೊಸ ಸೇತುವೆ ನಿರ್ಮಾಣಕ್ಕೆ ಒತ್ತು: ಈ ಸೇತುವೆ 57 ವರ್ಷ ಹಳೆಯ ಸೇತುವೆಯಾಗಿದ್ದು, ಹೊಸ ಸೇತುವೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ತಿಳಿಸಿದ್ದಾರೆ. ಈಗ ಹೊಸ ಸೇತುವೆ ನಿರ್ಮಾಣಕ್ಕಾಗಿ ಯಾವುದೇ ಅನುದಾನ ನಿಗದಿಪಡಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸೇತುವೆ ಮಧ್ಯೆ ಕುಸಿತ ಉಂಟಾದ ಬಗ್ಗೆ ಮಾಹಿತಿ ಲಭಿಸಿದ್ದು, ಇನ್ನೂ ಕೆಲವೆ ದಿನಗಳಲ್ಲಿ ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿ ಮಾಡಲಾಗುವುದು. 57 ವರ್ಷಗಳ ಹಳೆಯ ಸೇತುವೆ ಇದಾಗಿದ್ದು, ಹೊಸ ಸೇತುವೆ ನಿರ್ಮಾಣ ಮಾಡಲು ಉನ್ನತಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಎರಡು ವರ್ಷಗಳ ಹಿಂದೆ ಈ ಸೇತುವೆಯನ್ನು ದುರಸ್ತಿಗೊಳಿಸಲಾಗಿತ್ತು.। ಸೋಮಶೇಖರ್, ಲೋಕೋಪಯೋಗಿ ಇಲಾಖೆ ಅಭಿಯಂತರರು, ಕಾರ್ಕಳ
-----------ಮಳೆ ಹೆಚ್ಚಿರುವ ಸಂದರ್ಭ ಈ ಹಳೆಯ ಸೇತುವೆಯಲ್ಲ ಸಂಚರಿಸಲು ಭಯವಾಗುತ್ತದೆ. ಭಾರಿ ಮಳೆ ಬಂದರೆ ನೀರಿನ ಸೆಳೆತಕ್ಕೆ ಸೇತುವೆ ಅಲುಗಾಡುವ ಅನುಭವವಾಗುತ್ತದೆ.। ಅವಿನಾಶ್, ವಿದ್ಯಾರ್ಥಿ ಕೆರುವಾಶೆ
----------ಶಾಶ್ವತವಾಗಿ ಹೊಸ ಸೇತುವೆ ನಿರ್ಮಾಣವಾಗಲಿ, ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನಹರಿಸಲಿ. ಮಳೆಗಾಲದಲ್ಲಿ ತಾತ್ಕಾಲಿಕವಾಗಿ ನಿರ್ಮಾಣವಾದ ಹೊಂಡವನ್ನು ಮುಚ್ಚಿ ಸಂಚಾರ ಯೋಗ್ಯ ಸೇತುವೆ ಮಾಡಿದರೆ ಉತ್ತಮ.। ದಯಾನಂದ್, ಕೆರುವಾಶೆ