ಕೆಸರುಗದ್ದೆ ಕ್ರೀಡಾಕೂಟ: ಆಡಿ ಸಂಭ್ರಮಿಸಿದ ದ.ಕ. ಡಿಸಿ!

KannadaprabhaNewsNetwork |  
Published : Sep 23, 2024, 01:20 AM IST
ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸಂಭ್ರಮಿಸುತ್ತಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ | Kannada Prabha

ಸಾರಾಂಶ

ಪಡಿಪಿರೆ ಗದ್ದೆಯಲ್ಲಿ ಭಾನುವಾರ ಜರಗಿದ 6 ನೇ ವರ್ಷದ ‘ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು, ಮಕ್ಕಳ ಜೊತೆ ಮಗುವಾಗಿ ಬೆರೆತರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

‘ಹಾಡು ಸಂತೋಷಕ್ಕೆ..ಕುಣಿದೂ.. ತಾಳಕ್ಕೆ .. ನಲಿದು....’ ಎನ್ನುವ ಹಾಡು ತಾಸೆ ಸ್ವರದಲ್ಲಿ‌ ಮೊಳಗುತ್ತಿದ್ದರೆ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮಕ್ಕಳ ಜೊತೆ ಮಕ್ಕಳಾಗಿ ಕೆಸರಿನಲ್ಲಿ ಕುಣಿಯುತ್ತಿದ್ದರು. .ಇಡೀ ಗ್ರಾಮದ ಜನತೆ ಈ ಅಚ್ಚರಿಯ ದೃಶ್ಯವನ್ನು ಕಂಡು ಬೆರಗಾಗಿ, ತಾವೂ ಸಂಭ್ರಮಿಸಿದರು. ಈ ಅಪೂರ್ವ ದೃಶ್ಯ ಕಂಡುಬಂದದ್ದು ಅನಂತಾಡಿ ಗ್ರಾಮದಲ್ಲಿ . ಇಲ್ಲಿನ ನವ ಭಾರತ್ ಯುವಕ ಸಂಘದ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಭಾನುವಾರ ಜರಗಿದ 6 ನೇ ವರ್ಷದ ‘ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು, ಮಕ್ಕಳ ಜೊತೆ ಮಗುವಾಗಿ ಬೆರೆತರು.ಇದೇ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ರೈತ ದೇಶದ ಬೆನ್ನೆಲುಬು ಸಂತೋಷದಿಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು, ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು. ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ.ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ ಎಂದರು. ಜಿಲ್ಲಾಧಿಕಾರಿ ಜೊತೆಗೆ ಅವರ ಪತ್ನಿ, ಮಗು ಕೂಡ ಕೆಸರಿನಲ್ಲೂ ಗ್ರಾಮದ ಮಕ್ಕಳ ಜೊತೆಗೂಡಿ ಸಂತಸಪಟ್ಟ ರೀತಿ ಕಂಡು ಊರೇ ಸಂಭ್ರಮಿಸಿತು.ಸಂಘದ ಅಧ್ಯಕ್ಷ ಅನೀಶ್ ಅಶ್ವತ್ತಾಡಿ ಅಧ್ಯಕ್ಷತೆ ವಹಿಸಿದ್ದರು.ಡಾ. ರೂಪಲತಾ ಕೊಂಗಲಾಯಿ ಧ್ವಜಾರೋಹಣ ನೆರವೇರಿಸಿ , ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಮಾಣಿ ವಲಯ ಅಧ್ಯಕ್ಷ ರಾಮ್ ಕಿಶಾನ್ ರೈ ಮಾಡಿದರು. ಕ್ರೀಡಾಕೂಟದ ಕೆಸರುಗದ್ದೆಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೊಯ್ಯೇ ನೆರವೇರಿಸಿದರು.ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನಾರ್ಶ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೆರಳಕಟ್ಟೆ, ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನ ರಾಧಾಕೃಷ್ಣಮೂಲ್ಯ, ಮಲ್ಲರಾಯ ದೈವ ಪರಿಚಾರಕರಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಈಡೆಮುಂಡೆವು ಮತ್ತಿತರರಿದ್ದರು.ಕೆಸರು ಗದ್ದೆಯಲ್ಲಿ ಮಕ್ಕಳಿಗೆ,ಮಹಿಳೆಯರಿಗೆ, ಪುರುಷರಿಗೆ, ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ತುಳುವ ಸಂಸ್ಕೃತಿಯ ಚಾಪೆ ನೆಯುದು , ಬುಟ್ಟಿ ನೆಯ್ಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನಗರಿ ನೆಯ್ಯುವುದು, ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷತೆ ನಡೆಸಲಾಯಿತು.ಯತೀಶ್ ಪೂಂಜಾವ್ ಸ್ವಾಗತಿಸಿ, ವೆಂಕಟೇಶ್ ಮಾಸ್ಟರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''