ಭಯೋತ್ಪಾದನಾ ಪ್ರಕರಣದ ಪ್ರಮುಖ ಆರೋಪಿ ಯಾಸೀನ್ ಭಟ್ಕಳ್‌ ವೀಡಿಯೋ ಕಾನ್ಫರೆನ್ಸ್ ವಿಚಾರಣೆ

KannadaprabhaNewsNetwork |  
Published : Jul 25, 2025, 01:12 AM IST
ಯಾಸಿನ್‌ ಭಟ್ಕಳ್‌  | Kannada Prabha

ಸಾರಾಂಶ

ಭಯೋತ್ಪಾದನಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾಸೀನ್ ಭಟ್ಕಳ ಯಾನೆ ಶಾರೂಕ್ ಯಾನೆ ಡಾಕ್ಟರ್ ಅರಾಜೂ ಎಂಬಾತನನ್ನು ಗುರುವಾರ ಮೊದಲ ಬಾರಿಗೆ ಮಂಗಳೂರಿನ ಜೆ.ಎಮ್.ಎಫ್.ಸಿ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

2008ನೇ ಸಾಲಿನಲ್ಲಿ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಭಯೋತ್ಪಾದನಾ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾಸೀನ್ ಭಟ್ಕಳ ಯಾನೆ ಶಾರೂಕ್ ಯಾನೆ ಡಾಕ್ಟರ್ ಅರಾಜೂ ಎಂಬಾತನನ್ನು ಗುರುವಾರ ಮೊದಲ ಬಾರಿಗೆ ಮಂಗಳೂರಿನ ಜೆ.ಎಮ್.ಎಫ್.ಸಿ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿದೆ.ಈತನ ವಿರುದ್ಧದ ವಿಚಾರಣೆಯು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ ಇದ್ದು, ಈ ಮೂಲಕ ವಿಚಾರಣೆಯು ಪುನಾರಂಭವಾಗಿದೆ. ಪ್ರಸ್ತುತ ಯಾಸೀನ್ ಭಟ್ಕಳ್‌ ಹೈದರಾಬಾದ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

2008ರ ಅಕ್ಟೋಬರ್ 4 ರಂದು ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಮತ್ತು ಚೆಂಬುಗುಡ್ಡೆ ಪ್ರದೇಶಗಳಲ್ಲಿ ಭಯೋತ್ಪಾದನಾ ಕ್ರಿಯಾಕಲಾಪಗಳನ್ನು ನಿರ್ವಹಿಸುತ್ತಿದ್ದರು ಎಂಬ ಮಾಹಿತಿಯ ಮೇರೆಗೆ ಡಿಸಿಐಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬರ್‌ 242/2008 ರಂತೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಐಎಫ್ಎಕ್ಸ್ ಹಾಗೂ ಇತರ ಸ್ಫೋಟಕ ವಸ್ತುಗಳು ಸಹಿತ ಸಿಕ್ಕಿಬಿದ್ದ ಆರೋಪಿಗಳಲ್ಲಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದ್ದು, ಉಳಿದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದರು.

ಈ ಪ್ರಕರಣದಲ್ಲಿ ಆರೋಪಿಗಳಾದ ಸಯ್ಯದ್ ಮೊಹಮ್ಮದ್ ನೌಶಾದ್, ಅಹಮ್ಮದ್ ಬಾವ ಅಬೂಬಕ್ಕರ್, ಫಕೀರ್ ಅಹಮ್ಮದ್ ಯಾನೆ ಫಕೀರ್ ಈ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತರೆ ಆರೋಪಿಗಳಾದ ಮೊಹಮ್ಮದ್ ಆಲಿ, ಜಾವೇದ್ ಆಲಿ, ಮೊಹಮ್ಮದ್ ರಫೀಕ್, ಶಬ್ಬೀರ್ ಭಟ್ಕಳ್ ಇವರನ್ನು ಖುಲಾಸೆಗೊಳಿಸಿ 12-04-2017 ರಂದು ನ್ಯಾಯಾಲಯ ಅಂತಿಮ ತೀರ್ಪು ನೀಡಿತ್ತು.

ಆದರೆ ಪ್ರಮುಖ ಆರೋಪಿ ಯಾಸೀನ್ ಭಟ್ಕಳ್‌ ಪ್ರಕರಣದ ವಿಚಾರಣಾ ಹಂತದಲ್ಲಿ ತಲೆಮರೆಸಿಕೊಂಡಿದ್ದ ಕಾರಣ ಆತನ ವಿಚಾರಣೆ ಬಾಕಿ ಉಳಿದಿತ್ತು.ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ತಿಹಾರ್ ಜೈಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಆರೋಪಿಯನ್ನು ಮಂಗಳೂರಿನ ಜೆ.ಎಮ್.ಎಫ್.ಸಿ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಹಾಜರುಪಡಿಸಿದ್ದಾರೆ. ಮುಂದಿನ ವಿಚಾರಣೆ ಆಗಸ್ಟ್‌ 20 ರಂದು ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''