ಕೊಪ್ಪಳ:
ಜನಸಂಖ್ಯೆ ಹೆಚ್ಚಳ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ್ ಎಂ.ಎಚ್. ಹೇಳಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಹುಲಿಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಜ್ಞಾನ, ಮೂಢನಂಬಿಕೆ, ಬಾಲ್ಯವಿವಾಹ, ಅನಕ್ಷರತೆ, ಕುಟುಂಬ ಕಲ್ಯಾಣ ಯೋಜನೆಗಳ ಮಾಹಿತಿ ಕೊರತೆ ಸೇರಿದಂತೆ ಹಲವಾರು ಅಂಶಗಳು ಜನಸಂಖ್ಯೆ ಬೆಳವಣಿಗೆಗೆ ಕಾರಣವಾಗಿವೆ. ಆಹಾರ, ವಸತಿ, ಉದ್ಯೋಗ, ಶೈಕ್ಷಣಿಕ, ವೈದ್ಯಕೀಯ, ಕಾಡು ನಾಶ ಮುಂತಾದ ಸಮಸ್ಯೆಯನ್ನು ಪ್ರತಿಯೊಬ್ಬರು ಎದುರಿಸಬೇಕಾಗುತ್ತದೆ. ಜತೆಗೆ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಹಾಗೂ ಜನಪ್ರತಿನಿಧಿಗಳು ಜನಸಂಖ್ಯೆ ನಿಯಂತ್ರಿಸಲು ಅರಿವು ಮೂಡಿಸಬೇಕಾಗಿದೆ ಮತ್ತು ಎಲ್ಲ ಅರ್ಹ ದಂಪತಿಗಳು ಜನಸಂಖ್ಯೆ ನಿಯಂತ್ರಣದ ಸೂತ್ರ ಪಾಲಿಸಬೇಕು ಎಂದರು.ಹೆರಿಗೆ ಆದ ಮೇಲೆ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷಗಳ ಅಂತರ ಕಾಪಾಡಲು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುವ ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ಮತ್ತು ಶಾಶ್ವತ ವಿಧಾನ ಬಳಕೆ ಮಾಡಬೇಕು. ಬಾಲ್ಯವಿವಾಹ ನಿಷೇಧ ಕುರಿತು ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.
ಕೊಪ್ಪಳ ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ದುಷ್ಪರಿಣಾಮ ಮತ್ತು ಅದಕ್ಕೆ ಕಾರಣ ಹಾಗೂ ಅದರ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯ ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಬಾಲ್ಯ ವಿವಾಹ ನಿಷೇಧ, ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ, ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಕುರಿತು ವಿವರವಾಗಿ ಮಾತನಾಡಿದರು.
ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಫಿಉಲ್ಲಾ, ಗ್ರಾಪಂ ಅಧ್ಯಕ್ಷ ನೀಲಮ್ಮ ಗುಂಗಾಡಿ, ಸದಸ್ಯ ರಮೇಶ ಪೂಜಾರ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಂದನಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ., ಪ್ರಥಮ ದರ್ಜೆ ಸಹಾಯಕಿ ಮೇರಿ, ಲೆಕ್ಕಪತ್ರ ಸಹಾಯಕ ಪ್ರಭು ಮತ್ತು ತಾಯಂದಿರು, ಬಾಣಂತಿಯರು, ಗರ್ಭಿಣಿಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.