ಕೆಜಿಎ ಉತ್ಸವ, ಜಾದೂ ಪ್ರದರ್ಶನಕ್ಕೆ ಚಾಲನೆ

KannadaprabhaNewsNetwork | Published : Jan 13, 2025 12:48 AM

ಸಾರಾಂಶ

ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ್ ಮೈದಾನದಲ್ಲಿ ಭಾನುವಾರ ನಡೆದ ಕೆಜಿಎ ಉತ್ಸವ ಹಾಗೂ ಜಾದೂ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ್ ಮೈದಾನದಲ್ಲಿ ಭಾನುವಾರ ನಡೆದ ಕೆಜಿಎ ಉತ್ಸವ ಹಾಗೂ ಜಾದೂ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

ಉತ್ಸವ ಅಂಗವಾಗಿ ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಂದ ವಿವಿಧ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಅದರಲ್ಲಿ ಸೀರೆ, ಖಾದಿ ಬಟ್ಟೆ, ಕರಕುಶಲ ಹಾಗೂ ಗೃಹೋಪಯೋಗಿ ಮತ್ತು ಮಹಿಳೆಯರ ಅಲಂಕಾರಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ಮತ್ತೊಂದೆಡೆ 20ಕ್ಕೂ ಹೆಚ್ಚು ವಿವಿಧ ಬಗೆಯ ತಿಂಡಿ- ತಿನಿಸುಗಳ ಮಳಿಗೆಗಳನ್ನು ಹಾಕಲಾಗಿತ್ತು. ಮಹಿಳೆಯರು, ಮಕ್ಕಳು, ಯುವಕ- ಯುವತಿಯರು ಆಗಮಿಸಿ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಮಕ್ಕಳಿಗೆ ಆಟಿಗೆ ಸಾಮಗ್ರಿಗಳು ಹಾಗೂ ವಿವಿಧ ಸ್ಪರ್ಧೆಗಳು ಉತ್ಸವದ ಮೆರಗು ಹೆಚ್ಚಿಸುವಲ್ಲಿ ಸಹಕಾರಿಯಾದವು. ಸಂಜೆ ನಡೆದ ಜಾದೂ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಮಹಿಳಾ ಉದ್ಯಮಿಗಳಿಗೆ ವೇದಿಕೆ

ಅದಕ್ಕೂ ಮುನ್ನ ಕೆಜಿಎ ಉತ್ಸವಕ್ಕೆ ಚಾಲನೆ ನೀಡಿದ ಡಾ. ಶ್ರುತಿ ತೆಗ್ಗಿಮನಿ ಮಾತನಾಡಿ, ವಿವಿಧ ಉದ್ಯಮದಲ್ಲಿ ತೊಡಗಿಕೊಂಡಿರುವ ಮಹಿಳೆಯರು ಹಾಗೂ ಕರಕುಶಲ ವಸ್ತುಗಳ ತಯಾರಕರಿಗೆ ಇಂತಹ ಉತ್ಸವಗಳು ಸಹಕಾರಿಯಾಗಿವೆ. ಸ್ಥಳೀಯ ಉದ್ಯಮಿಗಳನ್ನು ಪರಿಚಯಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಬಡ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ಉಚಿತ ಸ್ಟಾಲ್‌ಗಳನ್ನು ನೀಡಲಾಗಿದೆ. ಮನೆಯಿಂದ ತಯಾರಿಸಿದ ಕರಕುಶಲ ಹಾಗೂ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಒದಗಿಸಲಾಗಿದೆ ಎಂದರು.

ಸಂಜೆ ನಡೆದ ಜಾದೂ ಪ್ರದರ್ಶನದಲ್ಲಿ ಖ್ಯಾತ ಜಾದೂಗಾರ ಶ್ರೀಧರ ಅವರು ವಿವಿಧ ಪ್ರಕಾರದ ಜಾದೂ ಕಲೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ನಂತರ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಜರುಗಿದವು.

ಈ ಸಂದರ್ಭದಲ್ಲಿ ಭಾರತಿ ನಂದಕುಮಾರ, ನಂದಾ ಸವಡಿ, ರೂಪಾ ಶಿಗ್ಗಾವ, ರೂಪಲ್ ಟಕ್ಕರ್, ದೀಪಾಲಿ ಗೋಟಡಕಿ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಎಚ್.ಎನ್. ನಂದಕುಮಾರ, ಶಿಥಲ್ ಗೋಟಡಕಿ, ವಿನೋದ ಬತ್ತಲ್, ಡಾ. ವಸಂತ ತೆಗ್ಗಿಮನಿ ಸೇರಿದಂತೆ ಹಲವರಿದ್ದರು.

Share this article