ಕೆಜಿಎಫ್‌ನಲ್ಲಿ 12 ಕೂಸಿನ ಮನೆಗಳು ಲಾಲನೆ, ಪಾಲನೆಗೆ ಸಿದ್ಧ

KannadaprabhaNewsNetwork |  
Published : Jan 17, 2024, 01:46 AM IST
೧೪ಕೆಜಿಎಫ್೧ಉದ್ಘಾಟನೆ ಸಿದ್ದಗೊಂಡಿರುವ ಕೂಸಿನ ಮನೆಗಳು. | Kannada Prabha

ಸಾರಾಂಶ

ಗ್ರಾಮೀಣ ಭಾಗದ ಮಹಿಳೆಯರು ಕೂಸಿನ ಮನೆಯಲ್ಲಿ ೬ ತಿಂಗಳಿಂದ ೩ ವರ್ಷದೊಳಗಿನ ಮಕ್ಕಳನ್ನು ಬಿಟ್ಟು ನೆಮ್ಮದಿಯಿಂದ ಕೆಲಸಕ್ಕೆ ತೆರಳಲು ಸರ್ಕಾರ ಈ ಯೋಜನೆ ಆರಂಭಿಸಿದೆ. ಮಕ್ಕಳ ಪೋಷಣೆಯ ನಾಲ್ವರು ಕೇರ್ ಟೇಕರ್‌ಗಳ ನೇಮಕ

ಕನ್ನಡಪ್ರಭ ವಾರ್ತೆ ಕೆಜಿಎಫ್

ಕೂಲಿ ಕಾರ್ಮಿಕರ ಮಕ್ಕಳ ಲಾಲನೆ-ಪಾಲನೆಗಾಗಿ ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷೆಯ ಕೂಸಿನ ಮನೆ(ಶಿಶುಪಾಲನಾ ಕೇಂದ್ರ) ಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ. ಅದರಂತೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ೧೬ ಗ್ರಾಪಂ, ಪೈಕಿ ೧೨ ಗ್ರಾಮ ಪಂ, ಮೊದಲ ಹಂತದಲ್ಲಿ ಆಯ್ಕೆ ಮಾಡಿ ಅಲ್ಲಿ ಕೂಸಿನ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಅವು ಈಗ ಮಕ್ಕಳ ಲಾಲನೆ ಪಾಲನೆಗೆ ಸಿದ್ಧವಾಗಿದೆ.

ರಾಜ್ಯದಲ್ಲಿ ಕೂಲಿ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಟುಂಬದ ೩ ವರ್ಷದ ಒಳಗಿನ ಮಕ್ಕಳ ರಕ್ಷಣೆಗಾಗಿ ನರೇಗಾ ಯೋಜನೆ ಅಡಿಯಲ್ಲಿ ಕೆಜಿಎಫ್ ತಾಲೂಕಿನ ಪಾರಂಡಹಳ್ಳಿ, ಕಮ್ಮಸಂದ್ರ, ಸುಂದರಪಾಳ್ಯ, ವೆಂಗಸಂದ್ರ, ಎನ್.ಜಿ.ಹುಲ್ಕೂರು, ಹುಲ್ಕೂರು, ಬೇತಂಮಗಲ, ಮಾರಿಕುಪ್ಪಂ, ಘಟ್ಟಮಾದಮಂಗಳ, ಜಕ್ಕರನಕುಪ್ಪ, ರಾಮಸಾಗರ, ಕಂಗಾಡ್ಲಹಳ್ಳಿ ಗ್ರಾಪಂ, ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣಗೊಂಡಿವೆ.

ಸರ್ಕಾರದ ಅದೇಶದಂತೆ ಮೊದಲ ಹಂತದಲ್ಲಿ ೧೨ ಗ್ರಾಪಂಗಳಲ್ಲಿ ಮಕ್ಕಳ ಪೋಷಣೆಯ ಬಗ್ಗೆ ತಾಪಂ, ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ, ಗ್ರಾಪಂನಿಂದ ೫೦ ಮಂದಿ ಕೇರ್ ಟೇಕರ್‌ಗಳಿಗೆ ತರಬೇತಿ ನೀಡಿದ್ದು, ಪ್ರತಿ ಕೂಸಿನ ಮನೆಯ ಮಕ್ಕಳ ಪೋಷಣೆಯ ನಾಲ್ವರು ಕೇರ್ ಟೇಕರ್‌ಗಳನ್ನಾಗಿ ಆಯ್ಕೆ ಮಾಡಲಾಗಿದೆ, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರರು, ಶಾಸಕರು, ಸಿಇಒರಿಂದ ಕೂಸಿನ ಮನೆ ಉದ್ಘಾಟನೆಯಾಗಲಿದೆ ಎಂದು ತಾಪಂ ಅಧಿಕಾರಿ ಮಂಜುನಾಥ ಹರ್ತಿ ಮಾಹಿತಿ ನೀಡಿದ್ದಾರೆ.

ಕೂಸಿನ ಮನೆ ಉದ್ದೇಶವೇನು?

ಈ ಶಿಶುಪಾಲನಾ ಕೇಂದ್ರಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮೀನುಗಳಿಗೆ ಕೃಷಿ ಕೆಲಸಕ್ಕೆ ತೆರಳುತ್ತಾರೆ, ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ, ಗ್ರಾಮೀಣ ಭಾಗದ ಮಹಿಳೆಯರು ಕೂಸಿನ ಮನೆಯಲ್ಲಿ ೬ ತಿಂಗಳಿಂದ ೩ ವರ್ಷದೊಳಗಿನ ಮಕ್ಕಳನ್ನು ಬಿಟ್ಟು ನೆಮ್ಮದಿಯಿಂದ ಕೆಲಸಕ್ಕೆ ತೆರಳಲು ಸರ್ಕಾರ ಈ ಯೋಜನೆ ಆರಂಭಿಸಿದೆ.

ಕುಸಿನ ಮನೆಯಲ್ಲಿ ಚಿಕ್ಕ ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಶೌಚಾಲಯ, ಆಟವಾಡಲು ಆಟಿಕೆ ವಸ್ತುಗಳಿವೆ, ಕೇರ್ ಟೇಕರ್ಸ್‌ಗಳು ಮಕ್ಕಳಿಗೆ ಊಟ ಮಾಡಿಸಿ ಮಲಗಿಸುವ ವ್ಯವಸ್ಥೆ ಸಹ ಇರುತ್ತದೆ, ಸಂಜೆ ಲಘು ಉಪಹಾರ ನೀಡಿ ಮಕ್ಕಳನ್ನು ತಮ್ಮ ಪೋಷಕರ ಜೊತೆ ಕಳುಹಿಸಿ ಕೊಡುವುದು ಕೇರ್ ಟೇಕರ್ಸ್‌ಗಳ ಜವಾಬ್ದಾರಿಯಾಗಿರುತ್ತದೆ.

ಕೋಟ್‌.................ಕೆಜಿಎಫ್ ತಾಲೂಕಿನಲ್ಲಿ ೧೨ ಗ್ರಾಪಂಗಳಲ್ಲಿ ಕೂಸಿನ ಮನೆ ಸಿದ್ಧವಾಗಿದ್ದು, ಜ.೨೦ ರೊಳಗೆ ಉದ್ಘಾಟನೆ ಮಾಡಬೇಕೆಂದು ಸರ್ಕಾರ ಅದೇಶ ನೀಡಿದೆ.

------- ಮಂಜುನಾಥ ಹರ್ತಿ, ತಾಪಂ ಇಒ

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ