ಇಂದಿನಿಂದ ಕೆ.ಎಚ್. ಪಾಟೀಲ್ ಕ್ರಿಕೆಟ್ ಲೀಗ್ ಸೀಸನ್-2 ಆರಂಭ

KannadaprabhaNewsNetwork |  
Published : Apr 12, 2026, 02:30 AM IST
ಕ್ರಿಕೆಟ್‌ | Kannada Prabha

ಸಾರಾಂಶ

ಗದಗ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಏ. 12ರಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.

ಗದಗ: ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಕೆ.ಎಚ್. ಪಾಟೀಲ್ ಕ್ರಿಕೆಟ್ ಲೀಗ್ ಸೀಸನ್-1ರ ಅಭೂತಪೂರ್ವ ಯಶಸ್ಸಿನ ನಂತರ, ಈಗ ಮತ್ತಷ್ಟು ಸಡಗರದೊಂದಿಗೆ ಸೀಸನ್-2 ಆರಂಭಕ್ಕೆ ಸಜ್ಜಾಗಿದೆ. ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಏ. 12ರಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆ ಕಾರ್ಯಕ್ರಮಕ್ಕೆ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಡಿ.ಆರ್. ಪಾಟೀಲ ಸಹಿತ ಅನೇಕ ಮುಖಂಡರು ಆಗಮಿಸಲಿದ್ದಾರೆ. ವಿಶೇಷವಾಗಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ, ಸುಜಿತ್ ಸೋಮಸುಂದರ್, ಈರಣ್ಣ ಸವಡಿ ಆಗಮಿಸಲಿದ್ದಾರೆ ಎಂದರು.

20 ತಂಡಗಳು: ಸೀಸನ್ -1ರಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು. ಈ ಬಾರಿ 456 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಕೆ ಮಾಡಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ 20 ಫ್ರಾಂಚೈಸಿಗಳು ಭಾಗವಹಿಸಿ, 320 ಆಟಗಾರರನ್ನು ತಂಡಗಳಿಗೆ ಸೇರಿಸಿಕೊಳ್ಳಲಾಗಿದೆ ಎಂದರು.

ಈ ಬಾರಿ ಗದಗ ನಗರದ 220 ಆಟಗಾರರ ಜತೆಗೆ 100 ಗ್ರಾಮೀಣ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ತಂಡದಲ್ಲಿರುವ 16 ಆಟಗಾರರಿದ್ದು, ಕನಿಷ್ಠ 5 ಜನ ಕಡ್ಡಾಯವಾಗಿ ಗ್ರಾಮೀಣ ಭಾಗದವರೇ ಇರಬೇಕು ಎನ್ನುವ ನಿಯಮ ರೂಪಿಸುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಮನ್ನಣೆ ನೀಡಲಾಗಿದೆ ಎಂದರು.

ಗರಿಷ್ಠ ಬೆಲೆಗೆ ಹರಾಜು: ಮಾ. 22 ಮತ್ತು 23ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಆಟಗಾರರು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಎಡ್ವರ್ಡ್ ಎನ್ನುವ ಆಟಗಾರ ₹44 ಸಾವಿರಕ್ಕೆ ಮಾರಾಟವಾಗಿದ್ದಾರೆ. ಅದೇ ರೀತಿ ಶಂಕರ ₹42 ಸಾವಿರ, ಯುವರಾಜ್ ₹36 ಸಾವಿರ, ವೈಭವ್ ಮತ್ತು ಫಯಾಜ್ ತಲಾ ₹34 ಸಾವಿರಕ್ಕೆ ಬಿಡ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

ಆಕರ್ಷಕ ಬಹುಮಾನ: ಗೆದ್ದ ತಂಡಗಳಿಗೆ ಹಾಗೂ ವೈಯಕ್ತಿಕ ಪ್ರದರ್ಶನ ನೀಡಿದವರಿಗೆ ಬೃಹತ್ ಮೊತ್ತದ ಬಹುಮಾನ ಘೋಷಿಸಲಾಗಿದೆ. ಪ್ರಥಮ ಬಹುಮಾನ ₹2 ಲಕ್ಷ, ದ್ವಿತೀಯ ₹1.5 ಲಕ್ಷ, ಅಲ್ಲದೇ ಟೂರ್ನಿಯ ಶ್ರೇಷ್ಠ ಆಟಗಾರನಿಗೆ ₹25 ಸಾವಿರ, ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ಬಾಲರ್‌ಗೆ ತಲಾ ₹10 ಸಾವಿರ ಸಹಿತ ಇನ್ನಿತರ ವೈಯಕ್ತಿಕ ಬಹುಮಾನ ನೀಡಲು ನಿರ್ಧರಿಸಲಾಗಿದೆ ಎಂದರು.

18 ದಿನಗಳ ಟೂರ್ನಿ: ಸೀಸನ್-2ರಲ್ಲಿ ಒಟ್ಟು 18 ದಿನಗಳ ಕಾಲ ಹೊನಲು ಬೆಳಕಿನ ಪಂದ್ಯಾವಳಿ ನಡೆಯಲಿದೆ. ಅತ್ಯುತ್ತಮ ಬೆಳಕಿನ ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ, ಥರ್ಡ್ ಅಂಪೈರ್ ವ್ಯವಸ್ಥೆಯೂ ಒಳಗೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಉಮರಫಾರೂಕ್ ಹುಬ್ಬಳ್ಳಿ, ಸರ್ಫರಾಜ್ ಶೇಕ್, ಅಹ್ಮದ ಖಾಜಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ತೃತೀಯ ಲಿಂಗಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ