ಗದಗ ನಗರದಲ್ಲಿ ಮುಗಿಯದ ಅಂಡರ್‌ಪಾಸ್ ಗೋಳು

KannadaprabhaNewsNetwork |  
Published : Apr 12, 2026, 02:30 AM IST
ಗದಗ ಬೆಟಗೇರಿ ಸಂಪರ್ಕಿಸುವ ಅಂಡರ್‌ಪಾಸ್ ಸ್ಥಿತಿ | Kannada Prabha

ಸಾರಾಂಶ

ಗದಗ-ಬೆಟಗೇರಿ ಅವಳಿ ನಗರ ಸಂಪರ್ಕಿಸುವ ರೈಲ್ವೆ ಅಂಡರ್‌ಪಾಸ್‌ ಎನ್ನುವುದು ಮುಗಿಯದ ಗೋಳಾಗಿದೆ. ಅವಳಿ ನಗರಗಳನ್ನು ಸಂಪರ್ಕಿಸುವ ಈ ಅಂಡರ್‌ಪಾಸ್‌ಗಳು ಸಂಚಾರದ ಕೊಂಡಿಯಾಗುವ ಬದಲಾಗಿ ಪ್ರತಿ ಬಾರಿಯೂ ಸಂಕಷ್ಟ ಸೃಷ್ಟಿಸುವ ಸಮಸ್ಯೆಯ ತಾಣಗಳಾಗಿ ಮಾರ್ಪಟ್ಟಿವೆ.

ಶಿವಕುಮಾರ ಕುಷ್ಟಗಿ

ಗದಗ: ಗದಗ-ಬೆಟಗೇರಿ ಅವಳಿ ನಗರ ಸಂಪರ್ಕಿಸುವ ರೈಲ್ವೆ ಅಂಡರ್‌ಪಾಸ್‌ ಎನ್ನುವುದು ಮುಗಿಯದ ಗೋಳಾಗಿದೆ. ಅವಳಿ ನಗರಗಳನ್ನು ಸಂಪರ್ಕಿಸುವ ಈ ಅಂಡರ್‌ಪಾಸ್‌ಗಳು ಸಂಚಾರದ ಕೊಂಡಿಯಾಗುವ ಬದಲಾಗಿ ಪ್ರತಿ ಬಾರಿಯೂ ಸಂಕಷ್ಟ ಸೃಷ್ಟಿಸುವ ಸಮಸ್ಯೆಯ ತಾಣಗಳಾಗಿ ಮಾರ್ಪಟ್ಟಿವೆ.

ಪಾಲಾ-ಬಾದಾಮಿ ಹೆದ್ದಾರಿಯಲ್ಲಿರುವ ಈ ಅಂಡರ್‌ಪಾಸ್‌ನಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಭಾರೀ ಗಾತ್ರದ ವಾಹನಗಳು ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದಾಗಿ ಸಾರ್ವಜನಿಕರ ಸಹನೆ ಕಳೆದುಕೊಳ್ಳುವಂತಾಗಿದೆ. ಅಲ್ಲದೇ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಸಹ ಪ್ರತಿ ಬಾರಿ ತಡಬಡಾಯಿಸಿ ಬಂದರೂ ತಾಸುಗಟ್ಟಲೇ ಕಾಯುವುದು ಸಾಮಾನ್ಯವಾಗಿದೆ.

ಗಂಭೀರ ಸಮಸ್ಯೆ: ಗದಗ ರೈಲ್ವೆ ನಿಲ್ದಾಣದ ಸಮೀಪದಲ್ಲೇ ಇರುವ ಅಂಡರ್‌ಪಾಸ್‌ನಲ್ಲಿ ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಕಂಟೈನರ್ ಅಥವಾ ಎತ್ತರದ ಲಾರಿಗಳು ಸಿಲುಕಿಕೊಳ್ಳುತ್ತಿವೆ. ಚಾಲಕರು ಅಂಡರ್‌ಪಾಸ್‌ನ ಎತ್ತರದ ಮಿತಿಯನ್ನು ಅಂದಾಜಿಸದೇ ವಾಹನಗಳನ್ನು ಮುಂದೆ ಸಾಗಿಸುವುದರಿಂದ ಈ ಸಮಸ್ಯೆಯಾಗುತ್ತಿದೆ. ಒಮ್ಮೆ ವಾಹನ ಸಿಲುಕಿದರೆ, ಇಡೀ ರಸ್ತೆಯ ಸಂಚಾರ ಬಂದ್‌ ಆಗುತ್ತದೆ. ವಾಹನ ಸಿಲುಕಿದ ತಕ್ಷಣ ಸ್ಥಳಕ್ಕೆ ಧಾವಿಸುವ ಸಂಚಾರಿ ಪೊಲೀಸರು, ಸಿಲುಕಿದ ವಾಹನವನ್ನು ಹೊರತೆಗೆಯಲು ಟೈರ್‌ಗಳ ಗಾಳಿಯನ್ನು ಅರ್ಧದಷ್ಟು ಖಾಲಿ ಮಾಡಿ, ವಾಹನದ ಎತ್ತರವನ್ನು ಸ್ವಲ್ಪ ತಗ್ಗಿಸಿ ಹೊರಕ್ಕೆ ಎಳೆಯುವ ಕಸರತ್ತು ನಡೆಸುತ್ತಾರೆ. ಗಾಳಿ ತೆಗೆದರೂ ವಾಹನ ಹೊರಬರದಿದ್ದಾಗ ಭಾರೀ ಗಾತ್ರದ ಕ್ರೇನ್‌ಗಳನ್ನು ತರಿಸಿ ವಾಹನವನ್ನು ಹಿಂದಕ್ಕೆ ಎಳೆಯಬೇಕಾಗುತ್ತದೆ. ಇದಕ್ಕೆ ಕನಿಷ್ಠ 3ರಿಂದ 4 ಗಂಟೆಗಳ ಸಮಯ ಹಿಡಿಯುತ್ತದೆ.

ಟ್ರಾಫಿಕ್ ಸಮಸ್ಯೆ: ಒಂದು ಬದಿಯಲ್ಲಿ ಭಾರೀ ವಾಹನ ತೆರವು ಕಾರ್ಯಾಚರಣೆ ನಡೆಯುತ್ತಿದ್ದರೆ, ರಸ್ತೆಯ ಎರಡೂ ಬದಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ದ್ವಿಚಕ್ರ ವಾಹನ ಸವಾರರು, ಬಸ್, ಲಾರಿ, ಆ್ಯಂಬುಲೆನ್ಸ್‌ಗಳು ಮುಂದಕ್ಕೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದೆಲ್ಲವನ್ನು ನಿರ್ವಹಿಸಲು ಹತ್ತಾರು ಪೊಲೀಸರು, ಅಂಡರ್‌ಪಾಸ್‌ನ ಎರಡೂ ಬದಿಯಲ್ಲೂ ಹರಸಾಹಸ ಪಡುವ ದೃಶ್ಯ ಸಾಮಾನ್ಯವಾಗುತ್ತಿದೆ. ವಾರಕ್ಕೊಮ್ಮೆ ಈ ರಸ್ತೆ ಬಂದ್ ಆಗುವುದು ಗದಗ ಬೆಟಗೇರಿ ಜನರಿಗೆ ಶಾಪವಾಗಿದೆ. ರೈಲ್ವೆ ನಿಲ್ದಾಣಕ್ಕೆ ಹೋಗುವವರು ರೈಲು ತಪ್ಪಿಸಿಕೊಳ್ಳುತ್ತಿದ್ದಾರೆ, ರೋಗಿಗಳು ಆಸ್ಪತ್ರೆಗೆ ತಲುಪಲು ಪರದಾಡುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರೈಲ್ವೆ ಮತ್ತು ನಗರಸಭೆ ಅಧಿಕಾರಿಗಳು ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯರು.

ಕಬ್ಬಿಣದ ತಡೆಗೋಡೆ ಅಗತ್ಯ: ಈ ನಿರಂತರ ಸಮಸ್ಯೆಗೆ ಕಡಿವಾಣ ಹಾಕಲು ಕೇವಲ ಸೂಚನಾ ಫಲಕಗಳನ್ನು ಹಾಕಿದರೆ ಸಾಲದು. ಅಂಡರ್‌ಪಾಸ್‌ ಪ್ರವೇಶಕ್ಕೂ ಮೊದಲೇ ಕಬ್ಬಿಣದ ದಪ್ಪನೆಯ ತಡೆಗೋಡೆಗಳನ್ನು ಅಳವಡಿಸಬೇಕು. ಸದ್ಯ ಅಂಡರ್‌ಪಾಸ್‌ಗೆ ಹೊಂದಿಕೊಂಡೇ ಕಬ್ಬಿಣದ ಪ್ರವೇಶದ್ವಾರಗಳಿವೆ. ಹೀಗಾಗಿ ಭಾರೀ ವಾಹನ ಚಾಲಕರು ನೇರವಾಗಿ ಅಂಡರ್‌ಪಾಸ್‌ಗೆ ನುಗ್ಗುತ್ತಿದ್ದಾರೆ. ಹೀಗಾಗಿ ಕಬ್ಬಿಣದ ಪ್ರವೇಶ ದ್ವಾರಗಳನ್ನು ಅಂಡರ್‌ಪಾಸ್‌ನಿಂದ ಸಾಕಷ್ಟು ದೂರದಲ್ಲಿ ಅಳವಡಿಸಬೇಕು. ಅಂದಾಗ ಮಾತ್ರ ಭಾರೀ ವಾಹನಗಳು ಅಲ್ಲಿ ಸಿಲುಕುವುದು ತಪ್ಪುತ್ತದೆ. ಜತೆಗೆ ಅಂಡರ್‌ಪಾಸ್‌ಗೆ ಆಗುವ ಹಾನಿಯನ್ನೂ ತಪ್ಪಿಸಬಹುದಾಗಿದೆ.

ಕುಸಿಯುತ್ತಿದೆ ರಸ್ತೆ: ಒಂದೆಡೆ ಅಂಡರ್‌ಪಾಸ್‌ನಲ್ಲಿ ಭಾರೀ ವಾಹನಗಳು ಸಿಲುಕಿ ಆವಾಂತರ ಸೃಷ್ಟಿಸುತ್ತಿದ್ದರೆ, ಇನ್ನೊಂದೆಡೆ ಅಂಡರ್‌ಪಾಸ್ ರಸ್ತೆ ನಿಧಾನವಾಗಿ ಕುಸಿಯುತ್ತಿರುವುದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಗದಗ ಕಡೆಯಿಂದ ಬೆಟಗೇರಿ ಕಡೆಗೆ ಹೋಗುವ ದ್ವಿಚಕ್ರ ವಾಹನ ಸವಾರರು, ಕುಸಿದ ರಸ್ತೆಯನ್ನು ಗಮನಿಸದೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಣ್ಣ ಕಾರುಗಳು ಹಾನಿಗೊಳಗಾಗುತ್ತಿವೆ. ಬೆಟಗೇರಿ ಭಾಗದ ರಸ್ತೆಯ ಒಂದು ಕಡೆ, ನೀರಿನ ಪೈಪ್‌ಲೈನ್‌ಗೆ ತೋಡಿದ ಗುಂಡಿ ಮುಚ್ಚಿ ರಸ್ತೆಯಲ್ಲೆ ಗುಡ್ಡ ನಿರ್ಮಾಣವಾಗಿದ್ದರೆ, ಒಂದು ಕಡೆ ಭೂಕುಸಿತ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಗದಗ ರೈಲ್ವೆ ನಿಲ್ದಾಣ ಸಮೀಪದ ಅಂಡರ್‌ಪಾಸ್‌ನಲ್ಲಿ ಭಾರೀ ವಾಹನಗಳು ಸಿಲುಕಿ ಸಮಸ್ಯೆ ಸೃಷ್ಟಿಸುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ರೈಲ್ವೆ ಇಲಾಖೆ ಜತೆ ಚರ್ಚೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನು ಅಂಡರ್‌ಪಾಸ್‌ಗಳಲ್ಲಿ ರಸ್ತೆ ಕುಸಿದಿರುವ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ತೃತೀಯ ಲಿಂಗಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ