ಪ್ರತಿಭೆ-ಕೌಶಲ್ಯವಿದ್ದರೆ ಉದ್ಯೋಗ ಅವಕಾಶಗಳು ಸಾಧ್ಯ: ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ

KannadaprabhaNewsNetwork |  
Published : Apr 12, 2026, 02:30 AM IST
ಕಾರ್ಯಕ್ರಮದಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಗದಗ ನಗರದ ಬಸವೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಬೃಹತ್ ಉದ್ಯೋಗ ಮೇಳ ನಡೆಯಿತು. ಜ. ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಚಾಲನೆ ನೀಡಿದರು.

ಗದಗ: ಪ್ರತಿಭೆ ಮತ್ತು ಕೌಶಲ್ಯವಿದ್ದರೆ ಉದ್ಯೋಗ ಅವಕಾಶಗಳು ಒಲಿದು ಬರಲು ಸಾಧ್ಯ. ಜೀವನದಲ್ಲಿ ಯಶಸ್ಸು ಪಡೆಯಲು ಉದ್ಯೋಗ ಅವಶ್ಯ, ಇಂತಹ ಉದ್ಯೋಗವಿರುವ ವ್ಯಕ್ತಿಗಳಿಗೆ ವಿಜಯಲಕ್ಷ್ಮೀ ಒಲಿಯಬಲ್ಲಳು ಎಂದು ಜ. ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ನಗರದ ಬಸವೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಧಾರವಾಡದ ಕನೆಕ್ಟ್ ಸಂಸ್ಥೆ ಹಾಗೂ ಬಸವೇಶ್ವರ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿಭೆ ಮತ್ತು ಕೌಶಲ್ಯಗಳು ವಿದ್ಯಾವಂತ ಅಭ್ಯರ್ಥಿಗಳಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಲ್ಲವು. ಸತ್ಯ, ನ್ಯಾಯ, ನೀತಿ, ಚಾರಿತ್ರ್ಯರ್ಯವುಳ್ಳ ವ್ಯಕ್ತಿಗಳಲ್ಲಿ ಕರ್ತವ್ಯಪ್ರಜ್ಞೆ ಅಗತ್ಯ. ಈ ಎಲ್ಲ ಗುಣಗಳುಳ್ಳ ಅಭ್ಯರ್ಥಿಗಳು ಜೀವನದಲ್ಲಿ ಉತ್ತಮ ಉದ್ಯೋಗ, ಉತ್ತಮ ಜೀವನ ಹೊಂದಲು ಸಾಧ್ಯವಿದೆ. ಅಂತಹ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶ ನಿಮ್ಮದಾಗಲಿ ಎಂದರು.

ಈ ಬೃಹತ್ ಉದ್ಯೋಗ ಮೇಳ ಏರ್ಪಡಿಸಲು ಕಾರಣರಾದ ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮತ್ತು ಪದಾಧಿಕಾರಿಗಳು, ಧಾರವಾಡದ ಕನೆಕ್ಟ್ ಸಂಸ್ಥೆ ಹಾಗೂ ಬಸವೇಶ್ವರ ಮಹಾವಿದ್ಯಾಲಯದ ಸಿಬ್ಬಂದಿಯ ಶ್ರಮ ಸಾರ್ಥಕತೆ ಪಡೆದಿದೆ. ಇಂದಿಲ್ಲಿ ಉದ್ಯೋಗಕ್ಕೆ ನೇಮಕಾತಿ ಪತ್ರ ಪಡೆದುಕೊಳ್ಳುವ ಅಭ್ಯರ್ಥಿಗಳ ಭವಿಷ್ಯ ಸುಂದರವಾಗಿ ರೂಪುಗೊಳ್ಳಲಿ ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತಿದೆ. ಜತೆಗೆ ತಮ್ಮ ಮಕ್ಕಳನ್ನು ಕಲಿಸಬೇಕೆಂಬ ಹಂಬಲ ಪಾಲಕರಲ್ಲಿಯೂ ಬೇಕು. ಹೀಗಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತಿದೆ. ಇದು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಅವಶ್ಯ ಹಾಗೂ ಅನಿವಾರ್ಯ. ಇತ್ತಿಚೆಗೆ ಪ್ರಕಟಗೊಂಡ ಪಿಯುಸಿ ಫಲಿತಾಂಶವು ಸಾಕಷ್ಟು ತೃಪ್ತಿ ತಂದಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಮೇಳದಿಂದಾಗಿ ಉದ್ಯೋಗ ಲಭ್ಯವಾಗಿ ಉತ್ತಮ ಭವಿಷ್ಯ ರೂಪುಗೊಳ್ಳಲಿ ಎಂದರು. ರಾಜಕಾರಣಿಗಳ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು ಎಂಬುದು ಮುಗಿದ ಅಧ್ಯಾಯವಾಗಿದೆ. ಸ್ವಯಂಪ್ರತಿಭೆ, ಕೌಶಲ್ಯವಿದ್ದವರನ್ನು ಉದ್ಯೋಗಗಳು ಹುಡುಕಿಕೊಂಡು ಬರುವುದು. ಈ ನಿಟ್ಟಿನಲ್ಲಿ ಚೇಂಬರ್ ಒಳ್ಳೆ ಕೆಲಸ ಮಾಡಿದೆ ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನಿರುದ್ಯೋಗ ಸಮಸ್ಯೆ ಜಾಗತಿಕವಾಗಿದೆ. ಕೌಶಲ್ಯತೆಯ ಕೊರತೆ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಧೈರ್ಯ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ವಿವಿದ ಇಲಾಖೆಗಳಲ್ಲಿ ಒಟ್ಟು 4 ಲಕ್ಷ ಹುದ್ದೆಗಳು ಖಾಲಿ ಆಗಿದ್ದು, ಅವುಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಪ್ರಾಮಾಣಿಕತೆ ಮತ್ತು ಪರಿಶ್ರಮ ಇದ್ದವರಿಗೆ ಉದ್ಯೋಗ ಅವಕಾಶಗಳು ಒಲಿದು ಬರಲಿವೆ. ಮೆರಿಟ್ ಮತ್ತು ಮಾನವೀಯ ಮೌಲ್ಯಗಳಿಂದಾಗಿ ಮಹಿಳೆಯರೇ ಮುನ್ನಡೆ ಸಾಧಿಸಿದ್ದು, ಬರಲಿರುವ ದಿನಗಳಲ್ಲಿ ಅವರೇ ಪ್ರಾಬಲ್ಯರಾಗುವರು ಎಂದರು.

ವಿಪ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಕೌಶಲ್ಯ ಆಧಾರಿತ ಶಿಕ್ಷಣ ಇಂದು ಅವಶ್ಯವಿದೆ. ಪ್ರಧಾನಿ ಮೋದಿ ಅವರು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಸಾಕಷ್ಟು ಪ್ರಗತಿಯ ಕಾರ್ಯಗಳನ್ನು ಮಾಡಿದ್ದಾರೆ. ಭಾಷೆಯ ಮೇಲೆ ಪ್ರಭುತ್ವ ಮತ್ತು ಪ್ರಾಬಲ್ಯ ಹೊಂದಿದರೆ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಉನ್ನತ ಹುದ್ದೆ ಹೊಂದಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿದರು. ನಟರಾಜ ಮೂರಶಿಳ್ಳಿ, ತೋಂಟೇಶ ಕುರಡಗಿ, ಗಿರೀಶ ಅಂಗಡಿ, ಕಿರಣ ಭೂಮಾ, ಎಂ.ಎಂ. ಬುರಡಿ, ಎಸ್.ಪಿ. ಸಂಶಿಮಠ, ಚನ್ನವೀರಪ್ಪ ಹುಣಸಿಕಟ್ಟಿ, ಪ್ರಕಾಶ ಉಗಲಾಟದ, ಶಿದ್ರಾಮಪ್ಪ ಉಮಚಗಿ, ಅರವಿಂದ ಕಾಮತ, ಜ್ಯೋತಿ ದಾನಪ್ಪಗೌಡ್ರ ಇದ್ದರು. ಚಂದ್ರು ಬಾಳಿಹಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು. ಜಯದೇವ ಮೆಣಸಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ತೃತೀಯ ಲಿಂಗಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ