ಮಂತ್ರಾಲಯ ಮಠಕ್ಕೂ ಯಲಬುರ್ಗಾ ಶ್ರೀಮಠಕ್ಕೂ ಅನನ್ಯ ಸಂಬಂಧ

KannadaprabhaNewsNetwork |  
Published : Apr 12, 2026, 02:15 AM IST
ಯಲಬುರ್ಗಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಮಂತ್ರಾಲಯಕ್ಕೆ ಕ್ಷೇತ್ರವು ತವರು ಮನೆ ಇದ್ದಂತೆ. ಶ್ರೀಮಠದ ಎಲ್ಲ ಯತಿಶೇಖರರು ಕಾಲಕಾಲಕ್ಕೆ ಇಲ್ಲಿಗೆ ಬಂದು ಶಿಷ್ಯರಿಗೆ ತತ್ವೋಪದೇಶ, ಪೂಜೆ ಮತ್ತು ಭಿಕ್ಷೆ ಸ್ವೀಕರಿಸಿ ಅನುಗ್ರಹಿಸಿದ್ದಾರೆ

ಯಲಬುರ್ಗಾ: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೂ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠಕ್ಕೂ ಅನನ್ಯ ಸಂಬಂಧವಿದೆ ಎಂದು ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರತೀರ್ಥ ಶ್ರೀಪಾದಂಗಳ ಹೇಳಿದರು.

ಪಟ್ಟಣದ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಂತ್ರಾಲಯಕ್ಕೆ ಕ್ಷೇತ್ರವು ತವರು ಮನೆ ಇದ್ದಂತೆ. ಶ್ರೀಮಠದ ಎಲ್ಲ ಯತಿಶೇಖರರು ಕಾಲಕಾಲಕ್ಕೆ ಇಲ್ಲಿಗೆ ಬಂದು ಶಿಷ್ಯರಿಗೆ ತತ್ವೋಪದೇಶ, ಪೂಜೆ ಮತ್ತು ಭಿಕ್ಷೆ ಸ್ವೀಕರಿಸಿ ಅನುಗ್ರಹಿಸಿದ್ದಾರೆ. ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಈ ಕ್ಷೇತ್ರಕ್ಕೆ ಸದಾಕಾಲ ಒಳಿತಾಗಲಿ ಎಂದರು.

ನೂರಾರು ವರ್ಷಗಳ ಹಿಂದೆ ಯಲಬುರ್ಗಾದ ಪೂರ್ವಜರು ಮಂತ್ರಾಲಯದ ಸುವರ್ಣ ಮಂಟಪ ನಿರ್ಮಾಣಕ್ಕೆ ಬಂಗಾರ ದಾನ ಮಾಡಿದ್ದನ್ನು ಸ್ಮರಿಸಬಹುದು. ಈ ಪುಣ್ಯ ಕ್ಷೇತ್ರದ ಜನತೆಯ ಭಕ್ತಿ, ಭಾವದ ಸಮರ್ಪಣೆ ಮರೆಯುವಂತಿಲ್ಲ. ಈ ಬಾಂಧವ್ಯ ಪರಂಪರೆ ಹೀಗೆ ಮುಂದುವರೆಯಲಿದೆ ಎಂದರು.

೧೯೭೦ರ ದಶಕದಲ್ಲಿ ಇಲ್ಲಿಗೆ ಸುಶಮೀಂದ್ರತೀರ್ಥ ಶ್ರೀಪಾದಂಗಳವರು ಬಂದು ಎರಡು ತಿಂಗಳ ಕಾಲ ನೆಲೆಸಿ, ರಾಯರಮಠ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈಗ ಶ್ರೀಮಠ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ.ಮುಂದೆ ಶ್ರೀಮಠದ ವಜ್ರ ಮಹೋತ್ಸವ ಆಚರಣೆಗೆ ನಾವೆಲ್ಲರೂ ಸಿದ್ಧರಾಗೋಣ ಎಂದರು.

ಮಂತ್ರಾಲಯದ ಮಠವು ಪಟ್ಟಣದ ರಾಯರ ಮಠಕ್ಕೆ ₹ ೫ ಲಕ್ಷ ಮತ್ತು ತುಲಾಭಾರ ಸೇವೆಯ ಹಣ ನೀಡುತ್ತಿದೆ. ಇನ್ನೂ ಮಠದ ಸಾಕಷ್ಟು ಅಭಿವೃದ್ಧಿ ಶ್ರಮಿಸೋಣ. ರಾಘವೇಂದ್ರ ಸ್ವಾಮಿಗಳ ಸಂಕಲ್ಪದಂತೆ ಎಲ್ಲರೂ ಸತ್ಯ, ಪ್ರಾಮಾಣಿಕತೆ ಹಾದಿಯಲ್ಲಿ ನಡೆಯಬೇಕು. ರಾಯರ ಭಜನೆ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ. ರಾಯರ ಮಠವು ಎಲ್ಲ ವರ್ಗದ ಜನರ ಕಲ್ಯಾಣ ಬಯಸುವ ಕಾರ್ಯ ಮಾಡುತ್ತಿದೆ. ರಾಘವೇಂದ್ರ ಸ್ವಾಮಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದೇವೆ. ನಾನು ಅನೇಕ ಬಾರಿ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಮಂತ್ರಾಲಯ ಮಠದ ಪೀಠಾಧಿಪತಿಯಾಗಿ ಇಲ್ಲಿಗೆ ಆಗಮಿಸುತ್ತಿರುವುದು ಎರಡನೇ ಬಾರಿ ಎಲ್ಲರಿಗೂ ರಾಯರ ಅನುಗ್ರಹದಿಂದ ಒಳ್ಳೆಯದಾಗಲಿ ಎಂದು ಹಾರೈಸಿದರು.

ಅದ್ಧೂರಿ ಶೋಭಾಯಾತ್ರೆ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದದಿಂದ ಶ್ರೀ ಮಠದ ವರೆಗೆ ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಅದ್ಧೂರಿಯಾಗಿ ಶೋಭಾಯಾತ್ರೆಯ ಮೂಲಕ ವಿವಿಧ ವಾದ್ಯ ಮೇಳದೊಂದಿಗೆ ಶ್ರೀಮಠಕ್ಕೆ ಸ್ವಾಗತಿಸಲಾಯಿತು. ಇದೇ ವೇಳೆ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳು ಮಂತ್ರಾಲಯ ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಸತ್ಕರಿಸಿದರು. ದಾರಿಯುದ್ದಕ್ಕೂ ರಾಯರ ಜಯಘೋಷ, ಭಜನೆ ನೋಡುಗರ ಗಮನ ಸೆಳೆಯಿತು. ವಿವಿಧ ವಿದ್ವಾಂಸರು, ಪಂಡಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಿ ಹೂವಿನ ಅಲಂಕಾರ ಮಾಡಲಾಗಿತ್ತು. ಶ್ರೀಗಳಿಗೆ ತುಲಾಭಾರ ಸೇವೆ ನಡೆಯಿತು.

ಈ ಸಂದರ್ಭ ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಸುನಿಲ್ ಕುಲಕರ್ಣಿ, ರಾಘವೇಂದ್ರಾಚಾರ ಜೋಶಿ, ಸುಧೀರ ಕೊರ್ಲಹಳ್ಳಿ, ವಂಶಿಕೃಷ್ಣ, ಗುರುರಾಜ ತೊಂಡಿಹಾಳ, ಅಪ್ಪಣ್ಣ ಜೋಶಿ, ಜಗನ್ನಾಥ ದೇಸಾಯಿ, ಸಂತೋಷಿಮಾ ಜೋಶಿ, ವಂಸತರಾವ್ ಕುಲಕರ್ಣಿ, ಕೃಷ್ಣ ಮುಕ್ತೇದಾರ್, ಗುರುರಾಜ್ ಆಚಾರ್ ಪುರೋಹಿತ್, ಶೇಷಗಿರಿರಾವ್ ಪಟವಾರಿ, ನಾರಾಯಣ ಗಂಗಾಖೇಡ್ ಸೇರಿದಂತೆ ಅನೇಕ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿದ್ದರು.

ರಾಯರಡ್ಡಿ ಸನ್ಮಾನ: ಯಲಬುರ್ಗಾದಲ್ಲಿ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿಯವರು ಸನ್ಮಾನಿಸಿ, ತುಲಾಭಾರ ಸೇವೆ ಸಲ್ಲಿಸಿದರು. ಬಳಿಕ ಶಾಸಕರನ್ನು ಶ್ರೀಗಳು ಸನ್ಮಾನಿಸಿದರು. ನಂತರ ಶ್ರೀಗಳ ಕಾರ್ಯಕ್ರಮವನ್ನು ಶಾಸಕರು ವೀಕ್ಷಿಸಿದರು.

ಮೂಲರಾಮನಿಗೆ ವಿಶೇಷ ಪೂಜೆ: ಪಟ್ಟಣದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಎರಡನೇ ದಿನದ ಕಾರ್ಯಕ್ರಮ ನಿಮಿತ್ತ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಮೂಲರಾಮನ ಪೂಜಾ ಕೈಂಕರ್ಯಗಳು ನಡೆದವು. ರಾಯರ ಬ್ರಂದಾವನಕ್ಕೂ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀಗಳಿಗೆ ಭಕ್ತರಿಂದ ಪಾದಪೂಜೆ ಕಾರ್ಯಕ್ರಮ ಸಮರ್ಪಿಸಲಾಯಿತು. ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ಜರುಗಿದವು. ಇದೆ ವೇಳೆ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಶ್ರೀಗಳಿಗೆ ಸನ್ಮಾನಿಸಿದರು.

ಯಲಬುರ್ಗಾ ಜನತೆಯ ಭಕ್ತಿ ಸೇವೆ ಮಂತ್ರಾಲಯ ಮಠವು ಎಂದಿಗೂ ಮರೆಯುವುದಿಲ್ಲ. ಇಲ್ಲಿನ ಜನರ ಭಕ್ತಿ ಪ್ರೀತಿ, ಸೇವಾ ಮನೋಭಾವ ಮರೆಯಲಾಗದು. ಎಲ್ಲರೂ ರಾಯರ ಆದರ್ಶ, ಸತ್ಯ ನಿಷ್ಠೆ ಹಾದಿಯಲ್ಲಿ ನಡೆಯಬೇಕು. ಯಲಬುರ್ಗಾದ ರಾಯರ ಮಠದ ಅಭಿವೃದ್ಧಿಗೆ ನಾವು ಸಹಕಾರ ನೀಡುತ್ತೇವೆ. ಈ ಪರಂಪರೆ ಹೀಗೆ ಸಾಗಬೇಕು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಕರ ವಿರೋಧದ ನಡುವೆ ಒಂದಾದ ಅಂತರ್‌ ಧರ್ಮೀಯ ಪ್ರೇಮಿಗಳು
ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ