ಶಿವಕುಮಾರ ಕುಷ್ಟಗಿ
ಗದಗ ನಗರ ಭಾನುವಾರ ಸಂಪೂರ್ಣ ಕೆ.ಎಚ್. ಪಾಟೀಲಮಯವಾಗಿತ್ತು. ಉರಿಬಿಸಿಲು ಲೆಕ್ಕಿಸದೇ, ಆ ಪಕ್ಷ- ಈ ಪಕ್ಷ ಎನ್ನದೇ ಮಹಿಳೆಯರು- ಮಕ್ಕಳೂ ಸೇರಿದಂತೆ ಇಲ್ಲಿನ ಕಾಟನ್ ಸೇಲ್ ಸೊಸೈಟಿ ಆವರಣಕ್ಕೆ ಜನಸಾಗರವೇ ಹರಿದು ಬಂದಿತ್ತು. ಎಲ್ಲರ ಬಾಯಲ್ಲೂ ಈ ನೆಲದ ಧಣಿ ದೊಡ್ಡಗೌಡ್ರ ಗುಣಗಾನ.
ಇದಕ್ಕೆಲ್ಲ ಸಾಕ್ಷಿಯಾಗಿದ್ದು ಸಹಕಾರಿ ಭೀಷ್ಮ, ಹುಲಕೋಟಿ ಹುಲಿ ದಿವಂಗತ ಕೆ.ಎಚ್. ಪಾಟೀಲ ಅವರ ಜನ್ಮ ಶತಮಾನೋತ್ಸವ.ಕಳೆದ ಒಂದು ವಾರದಿಂದ ಈ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದರಿಂದ ಭಾನುವಾರ ಬೆಳಗ್ಗೆ ಗದಗ-ಬೆಟಗೇರಿ ಅವಳಿ ನಗರ ಅಕ್ಷರಶಃ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಪ್ರಮುಖ ರಸ್ತೆಗಳಿಗೆ ಅಳವಡಿಸಿದ್ದ ಸ್ವಾಗತ ಕಮಾನುಗಳಲ್ಲಿ ಕೆ.ಎಚ್.ಪಾಟೀಲ ಅವರು ಈ ನೆಲಕ್ಕೆ, ಸಮಾಜಕ್ಕೆ ಮಾಡಿದ ಸಾಧನೆಯ ಕಿರುನೋಟ ಅಳವಡಿಸಲಾಗಿತ್ತು. ಹಾಗಾಗಿ ಈ ಕಾರ್ಯಕ್ರಮಕ್ಕೆ ಬರುವ ಜನರೆಲ್ಲ ಅವುಗಳನ್ನು ಕುತೂಹಲದಿಂದ ನೋಡಿಕೊಂಡು ಬರುತ್ತಿದ್ದರು.
ಎಲ್ಲ ಪಕ್ಷಗಳ ನಾಯಕರು ಭಾಗಿ: ಕಾರ್ಯಕ್ರಮ ಕೇವಲ ಕಾಂಗ್ರೆಸ್‌ಗೆ ಸೀಮಿತವಾಗಿರದೇ ಎಲ್ಲ ಪಕ್ಷಗಳ ನಾಯಕರು ಪಕ್ಷ ಭೇದ ಮರೆತು ಪಾಲ್ಗೊಂಡು ತಮ್ಮ ಮತ್ತು ಕೆ.ಎಚ್. ಪಾಟೀಲರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ಅದರಲ್ಲಿಯೂ ವಿಪ ಸಭಾಪತಿ ಬಸವರಾಜ ಹೊರಟ್ಟಿ, ನರಗುಂದ ಬಿಜೆಪಿ ಶಾಸಕರಾದ ಸಿ.ಸಿ. ಪಾಟೀಲ, ಎಸ್.ವಿ.ಸಂಕನೂರ, ಜೆಡಿಎಸ್‌ನಿಂದ ಜಿ.ಟಿ. ದೇವೇಗೌಡ ಪಾಲ್ಗೊಂಡು ಮಾತನಾಡಿದ್ದು, ಕೆ.ಎಚ್.ಪಾಟೀಲ ಅವರು ಪಕ್ಷ ಮೀರಿದ ವ್ಯಕ್ತಿ ಎನ್ನುವುದನ್ನು ಸಾಬೀತುಪಡಿಸಿತು.
ಯುವಕರ ಪಡೆಯ ದೃಢತೆ:ಜನ್ಮ ಶತಮಾನೋತ್ಸವದ ಅಂಗವಾಗಿ ಕಳೆದ ಒಂದು ವರ್ಷದಿಂದ ಹಲವಾರು ಜನಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದ್ದು, ಇದರ ಹೊಣೆಯನ್ನು ಜಿಲ್ಲೆಯ ಕಾಂಗ್ರೆಸ್ ಪಡೆಯಲ್ಲಿರುವ ಯುವಕರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಗಣ್ಯರ ದಂಡು:ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ವಹಿಸಿಕೊಂಡಿದ್ದರು. ಈ ವೇಳೆ ಸಚಿವರಾದ ಈಶ್ವರ ಖಂಡ್ರೆ, ಬೋಸರಾಜು, ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಜೆ.ಟಿ. ಪಾಟೀಲ, ಯು.ಬಿ. ವೆಂಕಟೇಶ್, ಯು.ಬಿ. ಬಣಕಾರ, ಪ್ರಸಾದ ಅಬ್ಬಯ್ಯ, ಜಿ.ಎಸ್. ಪಾಟೀಲ, ಬಸವರಾಜ ಶಿವಣ್ಣನವರ, ಎನ್.ಎಚ್. ಕೋನರಡ್ಡಿ, ಎಸ್.ವಿ. ಸಂಕನೂರ, ಯಾಸೀರಖಾನ್ ಪಠಾಣ್, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವರಾದ ಬಿ.ಆರ್. ಯಾವಗಲ್, ಎ.ಎಂ. ಹಿಂಡಸಗೇರಿ, ಮಾಜಿ ಶಾಸಕರಾದ ಡಿ.ಆರ್.ಪಾಟೀಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಮಿಥುನ್ ಪಾಟೀಲ, ಕೋಟ್ರೆಶಪ್ಪ ಬಸೇಗಣ್ಣಿ, ಹಾಗೂ ಕೆ.ಎಚ್. ಪಾಟೀಲ ಮತ್ತು ಎಚ್.ಕೆ. ಪಾಟೀಲ ಅವರ ಒಡನಾಡಿಗಳು, ಆಪ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.