ಕನ್ನಡಪ್ರಭ ವಾರ್ತೆ ಉಳ್ಳಾಲ
ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ್ 2.0 ಪೈಪ್ ಲೈನ್ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರಿದೂಗಿಸಲು, ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಟಾಸ್ಕ್ ಫೋರ್ಸ್ ರಚಿಸಿ ತಿಂಗಳಿಗೊಂದು ಸಭೆ ಕಡ್ಡಾಯ ನಡೆಸಬೇಕು. ಕೋಟೆಕಾರು ಆಯಾಯ ವಾರ್ಡುಗಳಿಗೆ ಭೇಟಿ ನೀಡಿ ಕೌನ್ಸಿಲರುಗಳೊಂದಿಗೆ ಸಮಾಲೋಚಿಸಿ ಕಾಮಗಾರಿ ನಡೆಸಬೇಕು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ನಡೆಸಿದ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಸ್ತೆಗಳನ್ನು ಅಗೆದರೆ ಶೀಘ್ರವೇ ದುರಸ್ತಿಗೊಳಿಸಬೇಕು. ಜನಪ್ರತಿನಿಧಿಗಳ ದೂರವಾಣಿ ಕರೆಗಳಿಗೆ ಸ್ಪಂದಿಸಬೇಕು. ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾಮಗಾರಿಗಳನ್ನು ನಡೆಸಬೇಕಿದೆ. ಹಲವು ವಾರ್ಡುಗಳಲ್ಲಿ ಕೆಲ ಮನೆಗಳನ್ನು ಬಿಟ್ಟು ಮನೆಗಳಿಗೆ ಪೈಪ್ ಲೈನ್ ಹಾಕಲಾಗಿದೆ. ಇದನ್ನು ಆಯಾಯ ವಾರ್ಡುಗಳ ಕೌನ್ಸಿಲರ್ ಗಳ ಜೊತೆಗೆ ಚರ್ಚಿಸಿ ಪ್ರತಿಯೊಂದು ಮನೆಗೂ ನೀರಿನ ಹಕ್ಕು ಒದಗಿಸಬೇಕಾಗಿರುವುದು ಸ್ಥಳೀಯ ಆಡಳಿತ ಹಾಗೂ ನೀರಾವರಿ ಇಲಾಖೆಯವರ ಜವಾಬ್ದಾರಿಯಾಗಿದೆ. ಯಾವುದೇ ಮನೆಯನ್ನು ತಪ್ಪಿಸದ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆಯೂ, ತುರ್ತಾಗಿ ಗೊಂದಲಗಳನ್ನು ಪರಿಹರಿಸುವ ಉದ್ದೇಶದಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ನೀರಿನ ವಿಚಾರಕ್ಕೆ ಸಂಬಂಧಿಸಿ ಟಾಸ್ಕ್ ಫೋರ್ಸ್ ರಚಿಸಿಕೊಂಡು ತಿಂಗಳಿಗೆ ಪರಿಶೀಲನಾ ಸಭೆಯನ್ನು ರಚಿಸಬೇಕು ಎಂದು ತಿಳಿಸಿದರು.ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸೊಳ್ಳೆಂಜೀರು ಇದ್ದರು.ವಾಟರ್ ಬೋರ್ಡ್ ಎಇಇ ಅಜೆಯ್ ಸಮಸ್ಯೆಗಳನ್ನು ಆಲಿಸಿದರು..........
ಝೋನ್ 2 , ವಾರ್ಡ್ ಸಂಖ್ಯೆ 11 ರ ಮಡ್ಯಾರು ಭಾಗದಲ್ಲಿ ಹಲವು ಮನೆಗಳಿಗೆ ಅಮೃತ್ 2.0 ಪೈಪ್ ಲೈನ್ ಅಳವಡಿಸದೆ ಬೇರೆ ವಾರ್ಡುಗಳ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಜನತೆ ಕೌನ್ಸಿಲರ್ ಗಳನ್ನು ಪ್ರಶ್ನಿಸುವಂತಾಗಿದೆ.ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು-ಹರೀಶ್ ರಾವ್, ಕೌನ್ಸಿಲರ್...............ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ರು.2000 ನೀಡಲಾಗುತ್ತಿದೆ. ಅದೇ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಕೇವಲ ರು.800 ನೀಡಲಾಗುತ್ತಿದೆ. ಇದರಿಂದ ಬಹಳಷ್ಟು ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿವೆ. ವಿಧಾನಸಭಾ ಅಧ್ಯಕ್ಷರು ಈ ಕುರಿತು ವಿಧಾನಸಭೆಯಲ್ಲಿ ಗಮನಹರಿಸಬೇಕಿದೆ. ಹಲವೆಡೆ ಕಳಪೆ ಕಾಮಗಾರಿಗಳು ನಡೆದಿವೆ, ಈ ಬಗ್ಗೆಯೂ ಅಧಿಕಾರಿಗಳು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಳ್ಳುವಂತೆ ಆಗ್ರಹಿಸಬೇಕು. ಖಾತಾ ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ. ಬೇರೆಲ್ಲಿಯೂ ಇರದ ಸಮಸ್ಯೆ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಇದೆ.
-ಧೀರಜ್ ಕುಸಾಲ್ ನಗರ, ಕೌನ್ಸಿಲರ್