ಕರ್ಕಶ ಸೌಂಡ್‌ ಸಿಸ್ಟಮ್‌ಗಳ ಮೇಲೆ ಖಾಕಿ ಕಣ್ಣು

KannadaprabhaNewsNetwork |  
Published : Feb 20, 2026, 03:15 AM IST
ಪೊಲೀಸರು ಟ್ಯಾಕ್ಟರ್‌ಗೆ ಅಳವಿಡಿಸಿದ್ದ ಸೌಂಡ್‌ ಸಿಸ್ಟಮ್‌ ತೆರವುಗೊಳಿಸಿ, ಜಪ್ತಿ ಮಾಡಿರುವುದು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಇದೀಗ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ವಾಹನಗಳಲ್ಲಿ ಡಿಜೆ ಸೌಂಡ್‌ ಸಿಸ್ಟಮ್‌ಗಳ ಹಾವಳಿ. ಸಾರ್ವಜನಿಕರಿಗೆ, ಇತರ ವಾಹನಗಳಿಗೆ ತೊಂದರೆಯಾಗುತ್ತದೆ ಎಂಬುದರ ಪರಿವೇ ಇಲ್ಲದೇ ಜೋರು ಸೌಂಡ್‌ ಮಾಡಿಕೊಂಡು ಇತರರಿಗೆ ಕಿರಿಕಿರಿ ಮಾಡಲಾಗುತ್ತಿದೆ. ಇಂತವರಿಗೆ ಬಿಸಿಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ.

ಶ್ರೀಶೈಲ ಮಠದಕನ್ನಡಪ್ರಭ ವಾರ್ತೆ ಬೆಳಗಾವಿ

ಇದೀಗ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ವಾಹನಗಳಲ್ಲಿ ಡಿಜೆ ಸೌಂಡ್‌ ಸಿಸ್ಟಮ್‌ಗಳ ಹಾವಳಿ. ಸಾರ್ವಜನಿಕರಿಗೆ, ಇತರ ವಾಹನಗಳಿಗೆ ತೊಂದರೆಯಾಗುತ್ತದೆ ಎಂಬುದರ ಪರಿವೇ ಇಲ್ಲದೇ ಜೋರು ಸೌಂಡ್‌ ಮಾಡಿಕೊಂಡು ಇತರರಿಗೆ ಕಿರಿಕಿರಿ ಮಾಡಲಾಗುತ್ತಿದೆ. ಇಂತವರಿಗೆ ಬಿಸಿಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಟ್ರ್ಯಾಕ್ಟರ್‌ಗಳಿಗೆ ಭಾರೀ ಸೌಂಡ್‌ ಸಿಸ್ಟಮ್‌ ಅಳವಡಿಸಿ ಶಬ್ದ ಮಾಲಿನ್ಯ ಉಂಟುಮಾಡುತ್ತಿರುವವರ ವಿರುದ್ಧ ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ತೀವ್ರ ತೊಂದರೆ ಹಾಗೂ ರಸ್ತೆ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ಸೌಂಡ್‌ ಸಿಸ್ಟಮ್‌ಗಳನ್ನು ಜಪ್ತಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಲು ಟ್ರ್ಯಾಕ್ಟರ್‌ಗಳ ಬಳಕೆ ಹೆಚ್ಚಾಗಿದೆ. ಆದರೆ, ಕೆಲವರು ಟ್ರ್ಯಾಕ್ಟರ್‌ಗಳಿಗೆ ಅತಿಯಾದ ಕರ್ಕಶ ಧ್ವನಿಯ ಸೌಂಡ್‌ ಸಿಸ್ಟಮ್‌ಗಳನ್ನು ಅಳವಡಿಸಿ, ರಸ್ತೆಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಸಂಚಾರ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವುದರ ಜೊತೆಗೆ ರಸ್ತೆ ಅಪಘಾತಗಳ ಸಾಧ್ಯತೆಯೂ ಹೆಚ್ಚು. ವಾಹನ ಸವಾರರ ಗಮನ ಬೇರೆಡೆ ಸೆಳೆಯುವುದರಿಂದ ಅಪಘಾತಗಳು ಸಂಭವಿಸಬಹುದು. ಅಲ್ಲದೇ, ಹಿಂದಿನವರ ಎಷ್ಟೆ ಸೌಂಡ್‌ ಮಾಡಿದರೂ ಕೇಳದೇ ತಮ್ಮ ಗುಂಗಲ್ಲೇ ವಾಹನವನ್ನು ಚಲಾಯಿಸುತ್ತಿರುತ್ತಾರೆ.ಇನ್ನು, ಜಾತ್ರೆ, ಮೆರವಣಿಗೆ ಹಾಗೂ ವೈಯಕ್ತಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಟ್ರ್ಯಾಕ್ಟರ್‌ಗಳಿಗೆ ಭಾರೀ ಸೌಂಡ್‌ ಸಿಸ್ಟಮ್‌ ಅಳವಡಿಸುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆಯಲ್ಲಿಯೂ ಹೆಚ್ಚಿನ ಶಬ್ದದಿಂದ ವಿದ್ಯಾರ್ಥಿಗಳು, ವೃದ್ಧರು ಹಾಗೂ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಶಬ್ದ ಮಾಲಿನ್ಯದಿಂದ ಪರಿಸರಕ್ಕೂ ಹಾನಿ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇಂತಹ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ಐಗಳಿ, ಕುಡಚಿ, ಕಟಕೋಳ, ಮೂಡಲಗಿ, ಸುರೇಬಾನ, ಘಟಪ್ರಭಾ, ಕಿತ್ತೂರು, ಅಂಕಲಗಿ, ದೊಡವಾಡ, ಹುಕ್ಕೇರಿ ಹಾಗೂ ಸಂಕೇಶ್ವರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳದಲ್ಲೇ ಟ್ರ್ಯಾಕ್ಟರ್‌ಗಳನ್ನು ತಡೆದು ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದ ವಾಹನಗಳಿಗೆ ಅಳವಡಿಸಿದ್ದ ಧ್ವನಿ ವರ್ಧಕಗಳನ್ನು ತೆರವುಗೊಳಿಸಿ ಜಪ್ತಿ ಮಾಡಲಾಗಿದೆ. ಜೊತೆಗೆ ಚಾಲಕರ ವಿರುದ್ಧ ಪ್ರಕರಣಗಳನ್ನೂ ದಾಖಲಿಸಲಾಗಿದೆ.ಈ ಸಂಬಂಧ ಎಲ್ಲೆಡೆ ಪೊಲೀಸರ ಕಾರ್ಯಾಚರಣೆ ಮುಂದುವರಿಯಲಿದ್ದು, ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ತಿಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಯಾವುದೇ ವಾಹನಗಳಿಗೂ ವಿನಾಯಿತಿ ಇಲ್ಲ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ನೀಡಿದೆ. ಯಾವುದೇ ವಾಹನಗಳಲ್ಲಿ ಅನುಮತಿ ಇಲ್ಲದೆ ಅತಿಯಾದ ಸೌಂಡ್‌ ಸಿಸ್ಟಮ್‌ ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದರೆ ಕಾನೂನು ಕ್ರಮ ತಪ್ಪದು. ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸುವವರ ವಿರುದ್ಧ ಮುಂದಿನ ದಿನಗಳಲ್ಲಿಯೂ ನಿರಂತರ ಕಾರ್ಯಾಚರಣೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗಿದ್ದು, ಶಬ್ದ ಮಾಲಿನ್ಯ ಕಡಿಮೆ ಮಾಡಿ ರಸ್ತೆ ಸುರಕ್ಷತೆ ಹೆಚ್ಚಿಸುವ ದಿಸೆಯಲ್ಲಿ ಪೊಲೀಸರ ಈ ಕಾರ್ಯಾಚರಣೆ ಪರಿಣಾಮಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

-----

ಕೋಟ್.....ಜಿಲ್ಲೆಯಲ್ಲಿ ಟ್ರ್ಯಾಕ್ಟರ್‌ಗಳಿಗೆ ಅತಿಯಾದ ಸೌಂಡ್‌ ಸಿಸ್ಟಮ್ ಅಳವಡಿಸಿ ಶಬ್ದ ಮಾಲಿನ್ಯ ಉಂಟುಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ತೊಂದರೆ ಹಾಗೂ ಅಪಘಾತಗಳ ಸಾಧ್ಯತೆ ಹೆಚ್ಚಾದ ಹಿನ್ನೆಲೆ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಸೌಂಡ್ ಸಿಸ್ಟಮ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ. ಟ್ರ್ಯಾಕ್ಟರ್‌ ಡಿಜೆ ಸೌಂಡ್‌ಗಳನ್ನು ಸ್ವಯಂಪ್ರೇರಿತವಾಗಿ ಬಿಚ್ಚಿಡಿ, ಇಲ್ಲವಾದರೆ ಟ್ರ್ಯಾಕ್ಟರ್ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು.ಕೆ.ರಾಮರಾಜನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌
ನಕಲಿ ಪಿಎಚ್‌ಡಿ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ