ವೆಂಕಟೇಶ್ ಕಲಿಪಿ
ಅಸಂಜ್ಞೇಯ (ಗಂಭೀರ ಸ್ವರೂಪವಲ್ಲದ) ಅಪರಾಧಗಳ ತನಿಖೆಗೆ ಅನುಮತಿ ಪಡೆಯಲು ಮೊದಲಿಗೆ ದೂರುದಾರನನ್ನು ಮ್ಯಾಜಿಸ್ಟ್ರೇಟ್ ಬಳಿ ಕಳುಹಿಸದೆ, ಪೊಲೀಸರು ಸ್ವತಃ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿ ತನಿಖೆಗೆ ಅನುಮತಿ ಪಡೆಯಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎನ್ಎಸ್)-2023 ಸೆಕ್ಷನ್ 174(1), ಸಿಆರ್ಪಿಸಿ ಸೆಕ್ಷನ್ 155ಕ್ಕೆ ತಾತ್ವಿಕವಾಗಿ ಸಮಾನವಾಗಿದೆ. ಆದರೆ, ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಅಗತ್ಯ ನಿಯಮ ರೂಪಿಸಿ ಜಾರಿಗೆ ತಂದಿಲ್ಲ. ಅದರಂತೆ ಬಿಎನ್ಎಸ್ಎಸ್ ಜಾರಿಗೆ ಬಂದ ನಂತರ ಅಸಂಜ್ಞೇಯ ಅಪರಾಧಗಳ ತನಿಖೆಗೆ ಸಂಬಂಧಿಸಿ ಕರ್ನಾಟಕದಲ್ಲಿ ಅಗತ್ಯ ನಿಯಮ ರೂಪಿಸಿ ಜಾರಿಗೆ ತರುವುದನ್ನು ಪರಿಶೀಲಿಸಲು ಪ್ರಸ್ತುತ ಆದೇಶದ ಪ್ರತಿಯನ್ನೂ ಕರ್ನಾಟಕ ಕಾನೂನು ಆಯೋಗಕ್ಕೆ ಕಳುಹಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.ಅಸಂಜ್ಞೇಯ ಅಪರಾಧಗಳಿಗೆ ಸಂಬಂಧಿಸಿ ತಮ್ಮ ವಿರುದ್ಧದ ದಾಖಲಾದ ದೂರಿನ ತನಿಖೆಗೂ ಮೊದಲು ದೂರುದಾರರು ಮ್ಯಾಜಿಸ್ಟ್ರೇಟ್ ಅವರಿಗೆ ಮನವಿ ಸಲ್ಲಿಸಿ ಅನುಮತಿ ಪಡೆದಿಲ್ಲ. ಸ್ವತಃ ತನಿಖಾಧಿಕಾರಿಯೇ ಸಲ್ಲಿಸಿದ ಅರ್ಜಿ ಮನ್ನಿಸಿ ಮ್ಯಾಜಿಸ್ಟ್ರೇಟ್ ತನಿಖೆಗೆ ಅನುಮತಿ ನೀಡಿ ಆದೇಶಿಸಿದೆ. ಇದು ಕಾನೂನು ಬಾಹಿರ. ಈ ಅಂಶ ಪರಿಗಣಿಸಿ ಮ್ಯಾಜಿಸ್ಟ್ರೇಟ್ ಆದೇಶ ಹಾಗೂ ತಮ್ಮ ವಿರುದ್ಧ ಪ್ರಕರಣದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ನಗರದ ಸುಶೀಲ್ ಮಂಡಲ್ ಸೇರಿ ಏಳು ಮಂದಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ ಈ ಆದೇಶ ಮಾಡಿದೆ.
ದೂರುದಾರರ ಆಕ್ಷೇಪ ಪ್ರಕರಣ ರದ್ದತಿಗೆ ಸಾಕಾಗುವುದಿಲ್ಲ. ದೂರುದಾರರನ್ನು ಮೊದಲು ಮ್ಯಾಜಿಸ್ಟ್ರೇಟ್ ಬಳಿ ಕಳುಹಿಸಿಲ್ಲ ಎಂಬ ಕಾರಣಕ್ಕೆ ಸೆಕ್ಷನ್ 155(2)ರ ಅಡಿ ಅನುಮತಿ ಪಡೆದಿದ್ದರೂ ತನಿಖೆ ಸ್ವಯಂಚಾಲಿತವಾಗಿ ಅಮಾನ್ಯವಾಗುವುದಿಲ್ಲ. ಪೊಲೀಸರು ನೇರವಾಗಿ ಮ್ಯಾಜಿಸ್ಟ್ರೇಟ್ನಿಂದ ಅನುಮತಿ ಪಡೆದು ತನಿಖೆ ನಡೆಸಬಹುದು ಎಂದು ಪೀಠ ಆದೇಶಿಸಿದೆ.
ಸುಶೀಲ್ ಮಂಡಲ್ ಸೇರಿ ಏಳು ಆರೋಪಿಗಳು ತನ್ನ ಹತ್ಯೆಗೆ ಸಂಚು ರೂಪಿಸಿ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ಸೋಹಿದುಲ್ ಮಂಡಲ್ ಎಂಬಾತ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು 2020ರ ಜ.4ರಂದು ಎನ್ಸಿಆರ್ ದಾಖಲಿಸಿದ್ದರು. 2020ರ ಜ.5ರಂದು ತನಿಖಾಧಿಕಾರಿ 1ನೇ ಎಸಿಎಂಎಂ (ಮ್ಯಾಜಿಸ್ಟ್ರೇಟ್) ಕೋರ್ಟ್ಗೆ ಅರ್ಜಿ ಸಲ್ಲಿಸಿ, ಈ ಅಸಂಜ್ಞೇಯ ಅಪರಾಧಗಳ ಕುರಿತು ತನಿಖೆ ನಡೆಸಲು ಅನುಮತಿ ಕೋರಿದ್ದರು.
ಅರ್ಜಿದಾರರ ಪರ ವಕೀಲರು, ಸಿಆರ್ಪಿಸಿ ಸೆಕ್ಷನ್ 155(1)ರ ಪ್ರಕಾರ ಅಸಂಜ್ಞೇಯ ಅಪರಾಧಕ್ಕೆ ಸಂಬಂಧಿಸಿದ ಮಾಹಿತಿ ಬಂದಾಗ ಪೊಲೀಸರು ಅದರ ಸಾರಾಂಶವನ್ನು ನಿಗದಿತ ದಾಖಲೆಯಲ್ಲಿ ದಾಖಲಿಸಿ, ತನಿಖೆಗೆ ಅನುಮತಿ ಪಡೆಯಲು ದೂರುದಾರರನ್ನು ಮ್ಯಾಜಿಸ್ಟ್ರೇಟ್ ಬಳಿ ಕಳುಹಿಸಬೇಕು. ಆದರೆ, ಪ್ರಕರಣದಲ್ಲಿ ತನಿಖಾಧಿಕಾರಿ ತಾವೇ ನೇರವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಸಿಆರ್ಪಿಸಿ ಸೆಕ್ಷನ್ 155(2)ರ ಅಡಿ ತನಿಖೆಗೆ ಅನುಮತಿ ಪಡೆದಿರುವುದು ಕಾನೂನುಬಾಹಿರ. ಇದರಿಂದ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ವಾದ ಮಂಡಿಸಿದ್ದರು.