ಆರ್ಥಿಕ ಪ್ರಗತಿಗೆ ಖಾಕಿ ಕೊಡುಗೆ ಅಗತ್ಯ: ಸಿದ್ದು

KannadaprabhaNewsNetwork |  
Published : Apr 03, 2026, 02:00 AM IST
ದಾವಣಗೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ  ಸಿದ್ದು ಪ್ರಚಾರ | Kannada Prabha

ಸಾರಾಂಶ

ರಾಜ್ಯವು ಆರ್ಥಿಕವಾಗಿ ಪ್ರಗತಿ ಕಾಣಬೇಕಾದರೆ ಪೊಲೀಸರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯವು ಆರ್ಥಿಕವಾಗಿ ಪ್ರಗತಿ ಕಾಣಬೇಕಾದರೆ ಪೊಲೀಸರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಕೋರಮಂಗಲದ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಕವಾಯತು ಮೈದಾನದಲ್ಲಿ ಗುರುವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ‘ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ 153 ಮಂದಿ ಪೊಲೀಸರಿಗೆ ಪ್ರಸಕ್ತ ಸಾಲಿನ ‘ಮುಖ್ಯಮಂತ್ರಿ ಪದಕ’ ಪ್ರದಾನ ಮಾಡಿ ಮಾತನಾಡಿ, ಯಾವುದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಯಾ ಠಾಣಾಧಿಕಾರಿಯ ಗಮನಕ್ಕೆ ಬಾರದಂತೆ ಅಪರಾಧಗಳು, ಕೆಟ್ಟ ವ್ಯವಹಾರಗಳು ನಡೆಯಲು ಸಾಧ್ಯವಿಲ್ಲ. ರಾಜ್ಯದ ಆರ್ಥಿಕ ಬೆಳವಣಿಗೆ ಹಾಗೂ ಜಿಡಿಪಿ ಪ್ರಗತಿಗೆ ಕಾನೂನು ಸುವ್ಯವಸ್ಥೆ ಜತೆ ನೇರ ಸಂಬಂಧವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದರೆ ಆರ್ಥಿಕತೆಗೂ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸೈಬರ್ ಸೇರಿದಂತೆ ಆಧುನಿಕ ಯುಗದ ಹೊಸ ನಮೂನೆಯ ಅಪರಾಧ ಕೃತ್ಯಗಳ ತಡೆಗೆ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಮಯದ ಮಿತಿ ಇಲ್ಲದಂತೆ ದಿನದ 24 ಗಂಟೆಯೂ ಪೊಲೀಸರು ಕರ್ತವ್ಯಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ಸಮಾಜದಲ್ಲಿ ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರವು ಮಹಿಳೆಯರು, ಮಕ್ಕಳು ಮತ್ತು ದುರ್ಬಲರು ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದೆ. ಪೊಲೀಸರೂ ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಆಗಬೇಕು ಎನ್ನುವ ಗುರಿ ನಮ್ಮ ಸರ್ಕಾರದ್ದಾಗಿದೆ. ಇದು ಪೊಲೀಸ್ ಇಲಾಖೆಯ ಗುರಿಯೂ ಆಗಬೇಕಿದೆ ಎಂದರು. ಇದೇ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಅತ್ಯುತ್ತಮವಾದ ವ್ಯವಸ್ಥೆ ಹೊಂದಿದೆ ಎಂಬ ಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಶಾಂತಿ, ನೆಮ್ಮದಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಶ್ರಮ ಪಡುತ್ತಿದ್ದು, ಯಶಸ್ವಿಯಾಗಿದ್ದಾರೆ. ಇಂಡಿಯಾ ಜಸ್ಟೀಸ್ ವರದಿ ಪ್ರಕಾರ ದೇಶದಲ್ಲಿ ನೊಂದವರಿಗೆ ನ್ಯಾಯ ನೀಡುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡ್ರಗ್ಸ್ ಜಾಲ ತಡೆಗೆ ಕಂಕಣ ಬದ್ಧ:ರಾಜ್ಯದಲ್ಲಿ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸರ್ಕಾರವು‌ ಕಂಕಣ ಬದ್ಧವಾಗಿದೆ. ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪತ್ತೆ ಮಾಡಲಾಗಿದೆ. ಅನೇಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಪರಮೇಶ್ವರ್‌ ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್ ಹಾಗೂ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 8 ಸಾವಿರ ಕಾನ್‌ಸ್ಟೇಬಲ್

ನೇಮಕಾತಿ: ಗೃಹ ಸಚಿವ

ಪ್ರಸಕ್ತ ವರ್ಷ 8 ಸಾವಿರ ಕಾನ್‌ಸ್ಟೇಬಲ್ ಹಾಗೂ 600 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಶಾಶ್ವತವಾದ ಪೊಲೀಸ್ ಸಹಾಯ ಸೇವೆಗಳ ನೇಮಕಾತಿ ಮಂಡಳಿಯನ್ನು ಸ್ಥಾಪನೆಗೆ ಸಹ ಅವರು ಸಮ್ಮತಿಸಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು-ಕುಲಪತಿ ಪಾಟೀಲ್‌
ಮಹಿಳೆಯರು ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿರುವುದು ಪ್ರಗತಿಯ ಸೂಚಕ