ಶಿವಾನಂದ ಗೊಂಬಿ
119 ಕೇಸ್; 580ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್... ಮಾದಕ ವಸ್ತುಗಳ ವ್ಯಸನಿಗಳಿಗೆ ಟ್ರೀಟ್‌ಮೆಂಟ್..!
ಇದು ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಕಳೆದ 40 ದಿನಗಳಲ್ಲಿ (ಜು.4ರಿಂದ ಆ.13ರ ವರೆಗೆ) ಪೊಲೀಸ್ ಕಮಿಷನರೇಟ್ ನಡೆಸಿರುವ ಕಾರ್ಯವೈಖರಿಯ ಒಂದು ಝಲಕ್.ಕಳೆದ ಒಂಸೂವರೆ ತಿಂಗಳ ಹಿಂದೆಯಷ್ಟೇ ನಾಗರಿಕರು ಇಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ನಾಗರೀಕರಿಗೆ ಸುರಕ್ಷತೆಯೇ ಇಲ್ಲ. ಪ್ರತಿನಿತ್ಯ ಕಳ್ಳತನ, ದರೋಡೆ, ಸುಲಿಗೆ, ಕೊಲೆ, ಕೊಲೆ ಯತ್ನಗಳಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಪೊಲೀಸ್ ಕಮಿಷನರೇಟ್ ಅನ್ನು ಟೀಕಿಸುತ್ತಿದ್ದರು. ಅದರಲ್ಲೂ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆಯ ನಂತರವಂತೂ ನಾಗರಿಕರ ಆಕ್ರೋಶ ಮತ್ತಷ್ಟು ಹೆಚ್ಚಿತ್ತು. ಪ್ರತಿಭಟನೆಗಳು ಕೂಡ ನಡೆದಿದ್ದವು.
ಗಾಂಜಾಕ್ಕೆ ಅಮಲಿಗೆ ಬ್ರೇಕ್:
ಮೊದಲೆಲ್ಲ ಪೊಲೀಸರು ದಾಳಿ ನಡೆಸಿದರೂ 900 ಗ್ರಾಂಕ್ಕಿಂತ ಹೆಚ್ಚು ಸಿಗುತ್ತಲೇ ಇರಲಿಲ್ಲ. ಆದರೆ ಕಮಿಷನರ್ ಶಶಿಕುಮಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪ್ರತಿಸಲವೂ 1 ಕೆಜಿ ಮೇಲ್ಪಟ್ಟೆ ಗಾಂಜಾ ವಶಪಡಿಸಿಕೊಂಡಿರುವುದು ವಿಶೇಷ.
ಈ ವರೆಗೆ 14.12 ಕೆಜಿ ಮಾದಕ ವಸ್ತು ವಶಪಡಿಸಿಕೊಂಡಿದ್ದರೆ, ಅದರಲ್ಲಿ ₹ 9.79 ಲಕ್ಷ ಮೌಲ್ಯದ 10.42 ಕೆಜಿ ಗಾಂಜಾ ಇದ್ದರೆ, ₹ 65 ಸಾವಿರ ಮೌಲ್ಯದ 3.54 ಕೆಜಿ ಪಪ್ಪೆಸ್ಟ್ರಾ, ₹ 55 ಸಾವಿರ ಮೌಲ್ಯದ 154 ಗ್ರಾಂ ಅಫೀಮು ವಶಪಡಿಸಿಕೊಳ್ಳಲಾಗಿದೆ. ಇದರಿಂದಾಗಿ ಒಟ್ಟು ₹ 10.99 ಲಕ್ಷ ಮೌಲ್ಯದ ಮಾದಕ ವಸ್ತು ಪಡಿಸಿಕೊಂಡಂತಾಗಿದೆ. ಇನ್ನು ರಾಜಸ್ಥಾನ, ಗೋವಾ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಪೆಡ್ಲರ್‌ಗಳನ್ನು ಬಂಧಿಸಿರುವುದು ವಿಶೇಷ. ಮಾದಕ ವಸ್ತುಗಳ ಮಾರಾಟ ಮಾಡುವ ಹಾಗೂ ಖರೀದಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.ವ್ಯಸನಿಗಳಿಗೆ ಪಾಠ:
ಒಟ್ಟಿನಲ್ಲಿ ಮಹಾನಗರದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಸರಿದಾರಿಗೆ ತರಲಾಗುತ್ತಿದೆ. ಆದರೆ ಇದು ಬರೀ ಆರಂಭ ಶೂರತ್ವದಂತೆ ಆಗದೇ ನಿತ್ಯ ನಿರಂತರವಾಗಿ ನಡೆಯಬೇಕು. ಜತೆಗೆ ರಾಜಕೀಯ ವ್ಯಕ್ತಿಗಳು ಪೊಲೀಸ್ ಇಲಾಖೆ ವ್ಯವಸ್ಥೆಯಲ್ಲಿ ಹಸ್ತಕ್ಷೇಪವನ್ನು ಯಾವುದೇ ಕಾರಣಕ್ಕೂ ಮಾಡದೇ ದೂರವೇ ಉಳಿಯಬೇಕು ಎಂಬುದು ಪ್ರಜ್ಞಾವಂತರ ಅಂಬೋಣ