ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ ಮತ್ತು ಸಾಹಿತ್ಯಶ್ರೀ ಪ್ರಶಸ್ತಿ ಪ್ರಕಟಗೊಂಡಿದ್ದು, ಡಾ। ವಸುಂಧರಾ ಭೂಪತಿ, ಡಾ। ಎಸ್‌.ತುಕಾರಾಂ ಸೇರಿ ಐವರು ಹಿರಿಯ ಸಾಹಿತಿಗಳನ್ನು ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ ಮತ್ತು ಸಾಹಿತ್ಯಶ್ರೀ ಪ್ರಶಸ್ತಿ ಪ್ರಕಟಗೊಂಡಿದ್ದು, ಡಾ। ವಸುಂಧರಾ ಭೂಪತಿ, ಡಾ। ಎಸ್‌.ತುಕಾರಾಂ ಸೇರಿ ಐವರು ಹಿರಿಯ ಸಾಹಿತಿಗಳನ್ನು ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಅವರು, ಪ್ರೊ.ಶಿವರಾಮಯ್ಯ (ಬೆಂಗಳೂರು), ಚಂದ್ರಶೇಖರ ತಾಳ್ಯ (ಚಿತ್ರದುರ್ಗ), ಡಾ। ಚಂದ್ರಕಾಂತ ಪೋಕಳೆ (ಬೆಳಗಾವಿ), ಡಾ। ವಸುಂಧರಾ ಭೂಪತಿ (ಬಳ್ಳಾರಿ) ಮತ್ತು ಡಾ। ಎಸ್‌.ತುಕಾರಾಂ (ಮೈಸೂರು) ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ರು.ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿದೆ ಎಂದು ಹೇಳಿದರು.

2025ನೇ ವರ್ಷದ ‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಹತ್ತು ಮಂದಿ ಸಾಹಿತಿಗಳು ಆಯ್ಕೆಯಾಗಿದ್ದಾರೆ. ಡಾ। ನಿಷ್ಠಿ ರುದ್ರಪ್ಪ (ಬಳ್ಳಾರಿ), ಡಾ। ವೀರೇಶ ಬಡಿಗೇರ (ಬಾಗಲಕೋಟೆ), ಡಾ। ಸಿ.ಜಿ.ಲಕ್ಷ್ಮೀಪತಿ(ಚಿತ್ರದುರ್ಗ), ಕಂನಾಡಿಗ ನಾರಾಯಣ (ಬೆಂಗಳೂರು), ರೂಪ ಹಾಸನ (ಹಾಸನ), ಜಯರಾಮ ರಾಯಪುರ (ವಿಜಯವಾಡ), ಕುಮುದಾ ಸುಶೀಲ್‌ (ದಾವಣಗೆರೆ), ಡಾ। ಓ.ನಾಗರಾಜು (ತುಮಕೂರು), ಬಿ.ಎಂ.ಬಷೀರ್‌ (ಮಂಗಳೂರು) ಮತ್ತು ಡಾ। ಜ್ಯೋತಿ (ಬೆಂಗಳೂರು) ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹25 ಸಾವಿರ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

2024ನೇ ವರ್ಷದ ಪುಸ್ತಕ ಬಹುಮಾನ:

2024ರಲ್ಲಿ ಪ್ರಕಟವಾದ ವಿವಿಧ 17 ಸಾಹಿತ್ಯ ಪ್ರಕಾರದ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ಪಿ.ಭಾರತೀದೇವಿ- ಚಲಿಸುವ ಚುಕ್ಕಿಗಳು (ಕಾವ್ಯ), ಶಶಿ ತರೀಕೆರೆ- ಪೂಪಾ (ನವಕವಿಗಳ ಪ್ರಥಮ ಸಂಕಲನ), ವೈ.ಎಸ್‌.ಹರಗಿ- ಇಮಾಮ್‌ ಸಾಹೇಬರ ಕುದುರೆ (ಕಾದಂಬರಿ), ಅನಿಲ್‌ ಗುನ್ನಾಪೂರ- ಸರ್ವೆ ನಂಬರ್‌ 97 (ಸಣ್ಣಕತೆ), ಡಾ.ಚಂದ್ರು ಕಾಳೇನಹಳ್ಳಿ- ಗಂಧವತಿ (ನಾಟಕ), ಡಾ। ಶಿವರಾಜ ಬ್ಯಾಡರಹಳ್ಳಿ- ಒಂದು ತಲೆ ಚವುರದ ಕಥೆ (ಲಲಿತ ಪ್ರಬಂಧ), ಮಲ್ಲಿಕಾರ್ಜುನ ಹುಲಗಬಾಳಿ- ತಿರುಗಾಟ (ಪ್ರವಾಸ ಸಾಹಿತ್ಯ), ಎಂ.ಜಿ.ಹೆಗಡೆ- ಚಿಮಣಿ ಬೆಳಕಿನಿಂದ (ಜೀವನ ಚರಿತ್ರೆ/ ಆತ್ಮಕಥೆ), ಮಹಾಂತೇಶ ಪಾಟೀಲ- ಬೆಳಕು ಬೆಳೆಯುವ ಹೊತ್ತು (ಸಾಹಿತ್ಯ ವಿಮರ್ಶೆ), ರಾಜಶೇಖರ ಕುಕ್ಕುಂದಾ- ಬಿಸಿ ಬಿಸಿ ಬಾತು (ಮಕ್ಕಳ ಸಾಹಿತ್ಯ), ಶ್ರೀಧರ ತುಮರಿ- ಪಕ್ಷಿಗಳ ವಿಸ್ಮಯ ವಿಶ್ವ (ವಿಜ್ಞಾನ ಸಾಹಿತ್ಯ) ಮತ್ತು ಡಾ। ಎನ್‌.ಎನ್‌.ಚಿಕ್ಕಮಾದು- ಪ್ರಜಾಮಾತೆ (ಮಾನವಿಕ), ಡಾ। ಹಂಪನಹಳ್ಳಿ ತಿಮ್ಮೇಗೌಡ- ದಾಸೊಕ್ಕಲಿಗರು (ಗ್ರಂಥ ಸಂಪಾದನೆ/ಸಂಶೋಧನೆ), ದು.ಸರಸ್ವತಿ- ಜಾತಿ ಮತ್ತು ಲಿಂಗತ್ವ (ಅನುವಾದ-1 ಭಾರತೀಯ ಭಾಷೆಯಿಮದ ಕನ್ನಡಕ್ಕೆ ಅನುವಾದ), ಡಾ.ಹುಲಿಕುಂಟೆ ಮೂರ್ತಿ- ನುಡಿ ಕಂಡಾಯ (ವೈಚಾರಿಕ/ ಅಂಕಣ ಬರಹ), ಲಕ್ಷ್ಮಣ ಶರೆಗಾರ- ತಿದಿಯ ತುದಿಗೆ ಬೆಂಕಿಯ ಉಗುಳು(ಲೇಖಕರ ಮೊದಲ ಸ್ವತಂತ್ರ ಕೃತಿ) ಮತ್ತು ಡಾ.ಪ್ರದೀಪ್‌ ಕೆಂಜಿಗೆ- ನರವಾನರ (ಸಂಕೀರ್ಣ) ಕೃತಿಗಳು ಆಯ್ಕೆಗೊಂಡಿವೆ.

ಆಯ್ಕೆಯಾದ ಪ್ರತಿ ಕೃತಿಗೆ ತಲಾ 25 ಸಾವಿರ ರು.ನಗದು ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

2024ನೇ ವರ್ಷದ ದತ್ತಿ ಬಹುಮಾನ:

ಪ್ರೇಮಕುಮಾರ್‌ ಹರಿಯಬ್ಬೆ-ಬಹುರೂಪಿ(ಕಾದಂಬರಿ- ಚದುರಂಗ ದತ್ತಿ ಬಹುಮಾನ), ಕಡಿದಾಳ್‌ ಪ್ರಕಾಶ್‌- ನನ್ನೂರಿನ ಶ್ರೀಸಾಮಾನ್ಯರು (ಲಲಿತ ಪ್ರಬಂಧ: ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ), ನ್ಯಾ.ಶಿವರಾಜ ವಿ.ಪಾಟೀಲ-ಕಳೆದ ಕಾಲ ನಡೆದ ದೂರ (ಜೀವನ ಚರಿತ್ರೆ- ಸಿಂಪಿ ಲಿಂಗಣ್ಣ ದತ್ತಿ), ಡಾ.ಎಚ್‌.ಲಕ್ಷ್ಮೀನಾರಾಯಣಸ್ವಾಮಿ- ಒಳಮೀಸಲಾತಿ ಮತ್ತು ಇತರೆ ಲೇಖನಗಳು (ಸಾಹಿತ್ಯ ವಿಮರ್ಶೆ- ಪಿ.ಶ್ರೀನಿವಾಸರಾವ್‌ ದತ್ತಿ), ಅಭಿಷೇಕ ಬಳೆ ಮಸರಕಲ್‌- ಆಕೆ ಒಂದು ಹೂವು ಮತ್ತು ಹಿಡಿ ಮಣ್ಣು (ಕಾವ್ಯ ಹಸ್ತಪ್ರತಿ- ಚಿ.ಶ್ರೀನಿವಾಸರಾಜು ದತ್ತಿ), ಆರ್‌.ಕಾರ್ತಿಕ್‌- ಸತ್ತವರ ಸೊಲ್ಲು (ಅನುವಾದ 1- ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿ), ಶೈಲಜಾ ಅಶ್ವಥ್‌ ಕೋಲಾರ- ರಾಕ್ಷಸರ ನಡುವೆ ಪಯಣ (ಲೇಖಕರ ಮೊದಲ ಸ್ವತಂತ್ರ ಕೃತಿ- ಮಧುರಚೆನ್ನ ದತ್ತಿ), ಎ.ಎಸ್‌.ಪುತ್ತಿಗೆ- ವಾರ್ತಾಭಾರತಿ ಸಂಪಾದಕೀಯ (ವೈಚಾರಿಕ/ ಅಂಕಣ ಬರಹ- ಬಿ.ವಿ.ವೀರಭದ್ರಪ್ಪ ದತ್ತಿ), ವನಮಾಲ ವಿಶ್ವನಾಥ- ಕುವೆಂಪು ಬ್ರೈಡ್‌ ಇನ್‌ ದಿ ಹಿಲ್ಸ್‌ (ಕನ್ನಡದಿಂದ ಇಂಗ್ಲಿಷಿಗೆ ಅನುವಾದ- ಅಮೆರಿಕನ್ನಡ ದತ್ತಿ), ಡಾ.ಕಬ್ಬಿನಾಲೆ ವಸಂತ ಭಾರದ್ವಾಜ- ಹರಿದಾಸರ ಮುಂಡಿಗೆಗಳು (ದಾಸ ಸಾಹಿತ್ಯ- ಜಲಜಾ ಶ್ರೀಪತಿ ಆಚಾರ್ಯಗಂಗೂರ್ ದತ್ತಿ) ಮತ್ತು ಯು.ಸಿರಾಜ್‌ ಅಹಮದ್‌- ನೆಲ ನುಡಿದ ನಾದ (ಗಜಲ್‌ ಕಾವ್ಯ- ನಾಡೋಜ ಡಾ.ಶಾಂತರಸ ಗಜ಼ಲ್‌ ಕಾವ್ಯ ದತ್ತಿ) ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಸೇರಿ ಇತರರು ಇದ್ದರು.