ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿರುವ ತಾಲೂಕು ಮಂಗಲ ಗ್ರಾಮದ ಪರಿಸರ ರೂರಲ್ ಡವಲಪ್‌ಮೆಂಟ್ ಸೊಸೈಟಿಗೆ 2025-26ನೇ ಸಾಲಿನ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೌರವಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಹಿಳೆಯರ ಸಬಲೀಕರಣಕ್ಕಾಗಿ ಸಂಸ್ಥೆಯು ಸ್ವಸಹಾಯ ಸಂಘಗಳ ಬಲವರ್ಧನೆ ಕೇಂದ್ರಗಳ ಮೂಲಕ ಸ್ಥಗಿತಗೊಂಡಿರುವ ಸ್ವಸಹಾಯ ಸಂಘಗಳ ಪುನಶ್ಚೇತನ ಬಲವರ್ಧನೆಗಾಗಿ ತರಬೇತಿಗಳು, ಬ್ಯಾಂಕಿಂಗ್ ಸಾಲ ಸೌಲಭ್ಯಗಳು ಹಾಗೂ ಪುಸ್ತಕ ಬರವಣಿಗೆ ತರಬೇತಿ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿತ್ತು.

ಅಸಂಘಟಿತ ಗ್ರಾಮೀಣ ಮಹಿಳೆಯರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ನರೇಗಾ ಯೋಜನೆ ಕುರಿತು ಜಾಗೃತಿ ಆಂದೋಲನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವತಿಯರಿಗಾಗಿ ತರಬೇತಿ, ಮಹಿಳೆಯರಿಗಾಗಿ ಪರಿಸರಸ್ನೇಹಿ ಚಟುವಟಿಕೆಗಳನ್ನು ಉತ್ತೇಜಿಸಲು ಸಾವಿರಾರು ಬಟ್ಟೆ ಬ್ಯಾಗ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಹದಿಹರಯದ ಹೆಣ್ಣು ಮಕ್ಕಳ ಸಮಸ್ಯೆಗಳ ಕುರಿತಾಗಿ ಜಾಗೃತಿ ಮತ್ತು ತಪಾಸಣಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ.


ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗಕ್ಕೆ ಬರುವ ನೂರಾರು ಮಹಿಳೆಯರಿಗೆ ಕಳೆದ 6 ವರ್ಷಗಳಿಂದಲೂ ದಾಸೋಹ ಕಾಯಕವನ್ನು ಹಮ್ಮಿಕೊಂಡು ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ. ಹೀಗೆ ಜನರಿಂದ ಜನರಿಗಾಗಿ ನೆರವಾಗುವ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದ್ದನ್ನು ಮನಗಂಡು ರಾಜ್ಯ ಸರ್ಕಾರ ಪರಿಸರ ರೂರಲ್ ಡವಲಪ್‌ಮೆಂಟ್ ಸೊಸೈಟಿಗೆ 2025-26ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂದು ‘ಒಳಮೀಸಲಾತಿಯ ಮುಂದಿನ ಹೆಜ್ಜೆಗಳು’ ಕುರಿತು ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಮಂಡ್ಯಮಾದಿಗರ ಒಳಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ಮಾದರ ಮಹಾಸಭಾ, ಡಾ. ಬಾಬು ಜನಜೀವನರಾಮ್ ಸಂಘಗಳ ಒಕ್ಕೂಟ ಹಾಗೂ ಶಿವಶರಣ ಮಾದರ ಚನ್ನಯ್ಯ ಸೇವಾ ಸಮಿತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ (ಮಾ.೨೫) ಬೆಳಗ್ಗೆ ೧೦ ಗಂಟೆಗೆ ‘ಒಳಮೀಸಲಾತಿಯ ಮುಂದಿನ ಹೆಜ್ಜೆಗಳು’ ಕುರಿತ ವಿಚಾರ ಸಂಕಿರಣ ಹಾಗೂ ಒಳಮೀಸಲಾತಿ ಹೋರಾಟಗಾರರ ಸಮಾಲೋಚನಾ ಸಭೆ ನಡೆಯಲಿದೆ.

ಸಾಹಿತಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಸಮಾರಂಭ ಉದ್ಘಾಟಿಸಿ, ವಿಚಾರ ಮಂಡನೆ ಮಾಡುವರು. ಹಿರಿಯ ಒಳಮೀಸಲಾತಿ ಹೋರಾಟಗಾರ ಎಸ್.ಮಾರಪ್ಪ ಹಿರಿಯ ಒಳಮೀಸಲಾತಿ ಹೋರಾಟಗಾರರಾದ ಬಸವರಾಜ್ ಕೌತಾಳ್, ಎಚ್.ಹನುಮಂತಪ್ಪ, ಅಂಬಣ್ಣ ಆರೋಲಿಕರ್, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಅವರು ಮುಖ್ಯ ಭಾಷಣ ಮಾಡುವರು.ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಮಂಡ್ಯ ಜಿಲ್ಲಾ ಅಧ್ಯಕ್ಷ ಸಿ.ಕೆ.ಪಾಪಯ್ಯ ಪ್ರಾಸ್ತಾವಿಕ ನುಡಿ ನುಡಿಯುವರು. ಹಿರಿಯ ಒಳಮೀಸಲಾತಿ ಹೋರಾಟಗಾರ ಎನ್.ಆರ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಹಿರಿಯ ಒಳಮೀಸಲಾತಿ ಹೋರಾಟಗಾರ ಪಾವಗಡ ಶ್ರೀರಾಮ್, ಪ್ರಕಾಶ್ ಮೂರ್ತಿ, ಕೇಶವಮೂರ್ತಿ, ಕರಿಯಪ್ಪ ಗುಡಿಮನೆ, ಮುತ್ತಣ್ಣ ಬೆಣ್ಣೂರು, ನಾಗೇಂದ್ರ, ಶಿವಮೂರ್ತಿ, ವಿಜಯಕುಮಾರ್, ವೆಂಕಟಾಚಲ, ಪ್ರಸನ್ನ ಚಕ್ರವರ್ತಿ, ಪುಟ್ಟರಾಜು, ವಿ.ಬಿ.ಶಂಕರ್ ಪ್ರಸಾದ್, ಆರ್.ಬಿ.ಕುಮಾರ್ ಮತ್ತಿತರರು ಭಾಗವಹಿಸುವರು.