ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆ ಹಿಂದುಳಿಯಲು 65 ವರ್ಷಗಳ ಅಧಿಕಾರ ನಡೆಸುತ್ತಿರುವ ಈಶ್ವರ ಖಂಡ್ರೆ ಹಾಗೂ ಅವರ ಕುಟುಂಬವೇ ಕಾರಣ ಎಂದು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಆರೋಪಿಸಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಚಿವರಾಗಿರುವ ಖಂಡ್ರೆ ಸ್ವಕ್ಷೇತ್ರ ಭಾಲ್ಕಿಯಲ್ಲಿ ಒಂದು ಕ್ರೀಡಾಂಗಣ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಖಂಡ್ರೆ ಕುಟುಂಬದ ಆಡಳಿತದಲ್ಲಿದ್ದು ಅದರ ಆಸ್ತಿ ಒಟ್ಟಾರೆ 200ಕೋಟಿ ರು.ಗಳಿದ್ದರೂ ಅದರ ಮೇಲೆ ₹500 ಕೋಟಿ ಸಾಲ ಪಡೆದು ಸಾಲ ತೀರಿಸಲಾಗದೇ ಎನ್‌ಪಿಎ ಆಗಿದೆ ಅಷ್ಟೇ ಅಲ್ಲ, ಅವರು ಅದಕ್ಕೆ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇದೇನಾ ಇವರ ನೈತಿಕತೆ ಎಂದು ಖೂಬಾ ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡಿದ 5 ಗ್ಯಾರಂಟಿಗಳು ಬೋಗಸ್ ಆಗಿವೆ. ಪ್ರಣಾಳಿಕೆಯಲ್ಲಿ ವಾಸ್ತವಾಂಶ ಮರೆಮಾಚಿ ಮತದಾರರಿಗೆ ಆಸೆ ಆಮಿಷ ತೋರಿಸಿ ಚುನಾವಣೆ ಗೆಲ್ಲಲು ಅವಾಸ್ತವಿಕ ಅಂಶ ಮುಂದಿಟ್ಟು ಜನರಿಗೆ ಮೋಸ ಮಾಡಲಾಗುತ್ತಿದೆ. ರೈತರು, ಬಡವರು, ಮಹಿಳೆಯವರು ಹಾಗೂ ಯುವ ವರ್ಗಕ್ಕೆ ನೀಡಿದ ಯೋಜನೆಗಳ ಫಲವನ್ನು ಮುಂದಿಟ್ಟು ನಾವು ಬಿಜೆಪಿಯವರು ಪ್ರಣಾಳಿಕೆ ಸಿದ್ಧಪಡಿಸಿ ಮತದಾರರ ಮುಂದೆ ಹೋಗಿದ್ದೇವೆ ಎಂದರು. ಈಶ್ವರ ಖಂಡ್ರೆ ಪ್ರಶ್ನೆಗಳಿಗೆ ಉತ್ತರಿಸಲಿ, ಖೂಬಾ ಆಗ್ರಹ:ಬೊಮ್ಮಾಯಿ ಸರ್ಕಾರ ಇದ್ದಾಗ ಮೆಹಕರ್ ಏತ ನೀರಾವರಿ ಯೋಜನೆಗಾಗಿ ಟೆಂಡರ್ ಕರೆದಿದ್ದರು, ಆದರೆ ಇದೀಗ ನೀವು ಅದನ್ನು ರದ್ದುಗೊಳಿಸಿದ್ದು ಯಾಕೆ? ಇಂದಿಗೂ ಯೋಜನೆ ಪ್ರಾರಂಭವಾಗಿಲ್ಲ ಏಕೆ? ಬೀದರ್ ಜಿಲ್ಲಾ ಸಂಕೀರ್ಣ ನಿರ್ಮಾಣ ಮಾಡಿಲ್ಲ ಏಕೆ? ಔರಾದ್ ವರ್ತುಲ ರಸ್ತೆ ನಿರ್ಮಾಣ ಮಾಡುವಲ್ಲಿ ಉದಾಸೀನ ಏಕೆ? ಕೇಂದ್ರ ಸಿಪೆಟ್ ಕಟ್ಟಡದ ರಾಜ್ಯ ಸರ್ಕಾರದ ಪಾಲಿನ ಹಣ ಕೊಡಿಸಲಿಲ್ಲ ಏಕೆ? ಅನುಭವ ಮಂಟಪ ನಿರ್ಮಾಣಕ್ಕಾಗಿ ಅನುದಾನ ನೀಡುವುದರಲ್ಲಿ ಉದಾಸೀನ ಮಾಡುತ್ತಿರುವುದೇಕೆ? ಎಂಬ ಹಲವು ಪ್ರಶ್ನೆಗಳಿಗೆ ಖಂಡ್ರೆಯವರು ಪುತ್ರನ ನಾಮಪತ್ರ ಸಲ್ಲಿಕೆಗೂ ಮುನ್ನ ಜನರಿಗೆ ಉತ್ತರ ನೀಡಬೇಕೆಂದು ಖೂಬಾ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರದ ಶಂಕೆ ಮೇರೆ ಐಟಿ ದಾಳಿ:ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮೇಲೆ ಐಟಿ ದಾಳಿ ಭ್ರಷ್ಟಾಚಾರದ ಶಂಕೆ ಮೇರೆಗೆ ನಡೆದಿದೆ. ಅದಕ್ಕೆ ಯಾರ ಮೇಲೆಯೂ ಒತ್ತಡ ಹಾಕಿಲ್ಲ ಹಾಗೂ ನಾನು ಪತ್ರವನ್ನೂ ಬರೆದಿಲ್ಲ. ಭ್ರಷ್ಟಾಚಾರಿಗಳಿಗೆ ಅದರ ಬಗ್ಗೆ ಆತಂಕ ಬರುತ್ತದೆ ಹೊರತು ಜನಸಾಮಾನ್ಯರಿಗೆ ಅದ್ಯಾವುದೂ ಸಮಸ್ಯೆಯಾಗಲ್ಲ ಎಂದು ಭಗವಂತ ಖೂಬಾ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಏ.18ರಂದು ಭಗವಂತ ಖೂಬಾ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿ ಜಿಲ್ಲೆ ಶಾಸಕರು, ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ ಸುಮಾರು 25 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ನಗರದ ಗಣೇಶ ಮೈದಾನದಿಂದ ಖಾದಿ ಭಂಡಾರ್, ಡಾ.ಅಂಬೇಡ್ಕರ್ ವೃತ್ತದ ಮುಖಾಂತರವಾಗಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಲಾಗುತ್ತಿದೆ ಎಂದು ನೀಡಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಪ್ರಕಾಶ ಖಂಡ್ರೆ, ರಾಜಶೇಖರ ನಾಗಮೂರ್ತಿ, ಶ್ರೀನಿವಾಸ ಚೌಧರಿ ಹಾಗೂ ಬಾಬು ವಾಲಿ ಉಪಸ್ಥಿತರಿದ್ದರು.