ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ 24ನೇ ವರ್ಷದ ವೈಭವದ ಶ್ರೀ ರಾಮೋತ್ಸವ ಕಾರ್ಯಕ್ರಮ ಬುಧವಾರದಿಂದ ನಡೆಯಲಿದೆ.ಕುಶಾಲನಗರ ರಥ ಬೀದಿಯ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಏ.26ರ ತನಕ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ರಾಮೋತ್ಸವ ಅಂಗವಾಗಿ ಪ್ರತಿದಿನ ಬೆಳಗ್ಗೆ ಗಣಪತಿ ಪೂಜೆ, ನವಗ್ರಹ ಮೃತ್ಯುಂಜಯ ಪೂಜೆ ಮತ್ತು ಶ್ರೀರಾಮ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿಶೇಷ ಕಾರ್ಯಕ್ರಮಗಳು, ಸೇವೆಗಳು ನಡೆಯಲಿವೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
ಪೂಜಾ ಕಾರ್ಯಕ್ರಮಗಳು ಕೆ.ಕೆ. ಸುಬ್ಬರಾಮ ಪುರೋಹಿತರ ನೇತೃತ್ವದಲ್ಲಿ ನಡೆಯುವುದು.ಕುಶಾಲನಗರ ರಥ ಬೀದಿಯಲ್ಲಿರುವ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದಲ್ಲಿ ಬುಧವಾರ ಸಂಜೆ ವಿಪ್ರ ಮಹಿಳೆಯರಿಂದ ವಿವಿಧ ವಿನೋದಾವಳಿ ಕಾರ್ಯಕ್ರಮ, 18ರಂದು ವಿಪ್ರ ಬಾಲಕ ಬಾಲಕಿಯರಿಂದ ಕಾರ್ಯಕ್ರಮ, 19ರಂದು ಮಾತು ಮಂಥನ, 20ರಂದು ವಿಭಿನ್ನ ನೃತ್ಯ ಸಮುಚ್ಚಯ ಕಾರ್ಯಕ್ರಮ, 21ರಂದು ಸೀತಾ ಕಲ್ಯಾಣ, ಸಂಜೆ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
22ರಂದು ಸ್ಥಳೀಯ ಕಲಾವಿದೆಯರಿಂದ ಭರತನಾಟ್ಯ ಹಾಗೂ ಮಕ್ಕಳಿಂದ ರೂಪಕ, 23ರಂದು ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ, ಸಂಜೆ ಸುಬ್ರಾಯ ಸಂಪಾಜೆ ಸಾರಥ್ಯದಲ್ಲಿ ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ‘ಪಾದುಕಾ ಪ್ರದಾನ’ ಪ್ರಸಂಗ ನಡೆಯಲಿದೆ.24ರಂದು ಸಂಜೆ ವಿಪ್ರ ಮಹನೀಯರಿಂದ ವಿವಿಧ ವಿನೋದಾವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
25ರಂದು ಶ್ರೀ ರಾಮ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುವುದು ಸಂಜೆ ಮಾಲಿನಿ ಅಯ್ಯರ್ ಅವರಿಂದ ಹರಿಕಥೆ ಕಾರ್ಯಕ್ರಮ ಜರಗಲಿದೆ.26ರಂದು ಹನುಮಂತೋತ್ಸವ ಕಾರ್ಯಕ್ರಮ, ಸಂಜೆ ಆರು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶ್ರೀ ರಾಮ ಸೇವಾ ಸಮಿತಿ ಮತ್ತು ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಪ್ರಕಟಣೆ ತಿಳಿಸಿದೆ.