ಬಿಎಸ್‌ಎಸ್‌ಕೆ ಪುನಾರಂಭಕ್ಕೆ ಖಂಡ್ರೆ ಅಡ್ಡಗಾಲು: ಕಲ್ಲೂರ್‌ ಗಂಭೀರ ಆರೋಪ

KannadaprabhaNewsNetwork |  
Published : Sep 05, 2025, 01:00 AM IST
ಚಿತ್ರ 4ಬಿಡಿಆರ್‌5ಬೀದರ್‌ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ್‌ ಮಾತನಾಡಿದರು.  | Kannada Prabha

ಸಾರಾಂಶ

ಸಾಲ ಕೊಡಲು ಕೇಂದ್ರ ಸರ್ಕಾರ ಮುಂದಾದರೂ ರಾಜ್ಯ ಸರ್ಕಾರದಿಂದ ಗ್ಯಾರಂಟಿ ಕೊಡಿಸುವಲ್ಲಿ ನಿರ್ಲಕ್ಷ ಒಂದೆಡೆಯಾದರೆ ಇನ್ನೊಂದೆಡೆ ಕಾರ್ಖಾನೆ ಗುತ್ತಿಗೆ ಪಡೆದು ಮತ್ತೇ ಕಬ್ಬು ನುರಿಸುವ ಹಂಗಾಮು ಆರಂಭಿಸಲು ಮುಂದೆ ಬರುವವರಿಗೂ ಅಡ್ಡಗಾಲು ಹಾಕಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಎಂದು ಕಾರ್ಖಾನೆಯ ಅಧ್ಯಕ್ಷ ಸುಭಾಷ ಕಲ್ಲೂರ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಸಾಲ ಕೊಡಲು ಕೇಂದ್ರ ಸರ್ಕಾರ ಮುಂದಾದರೂ ರಾಜ್ಯ ಸರ್ಕಾರದಿಂದ ಗ್ಯಾರಂಟಿ ಕೊಡಿಸುವಲ್ಲಿ ನಿರ್ಲಕ್ಷ ಒಂದೆಡೆಯಾದರೆ ಇನ್ನೊಂದೆಡೆ ಕಾರ್ಖಾನೆ ಗುತ್ತಿಗೆ ಪಡೆದು ಮತ್ತೇ ಕಬ್ಬು ನುರಿಸುವ ಹಂಗಾಮು ಆರಂಭಿಸಲು ಮುಂದೆ ಬರುವವರಿಗೂ ಅಡ್ಡಗಾಲು ಹಾಕಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಎಂದು ಕಾರ್ಖಾನೆಯ ಅಧ್ಯಕ್ಷ ಸುಭಾಷ ಕಲ್ಲೂರ್‌ ಆರೋಪಿಸಿದರು.

ಅವರು ನಗರದಲ್ಲಿ ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಖಾನೆ ಪುನಾರಂಭಕ್ಕೆ ಸರ್ಕಾರದಿಂದ ಅನುದಾನ ಕಲ್ಪಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಂಪೂರ್ಣ ವಿಫಲರಾಗಿದ್ದಷ್ಟೇ ಅಲ್ಲ ಅವರ ಸಹೋದರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ ಖಂಡ್ರೆ ಅವರ ಮಾತಿಗೆ ಬಿದ್ದು ಕಾರ್ಖಾನೆ ಪುನಾರಂಭಕ್ಕೆ ಖಳನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.

ಪುನರಾರಂಭ ಮಾತೇ ಇಲ್ಲ:

ಬಿಎಸ್‌ಎಸ್‌ಕೆ ಕಾರ್ಖಾನೆಯು ಜಿಲ್ಲೆಯ ಲಕ್ಷಾಂತರ ರೈತರು ಹಾಗೂ ಅವರ ಕುಟುಂಬದ ಜೀವನಾಡಿಯಾಗಿದೆ. ಸಾವಿರಾರು ಕಾರ್ಮಿಕರ ಜೀವನಕ್ಕೆ ದಾರಿಯಾಗಿದೆ. ಇದೆಲ್ಲದರ ಮಧ್ಯೆ ಕಾರಣಾಂತರಗಳಿಂದ ಸಾಲದ ಸುಳಿಗೆ ಸಿಲುಕಿರುವ ಕಾರ್ಖಾನೆಯು ಸ್ಥಗಿತಗೊಂಡಿದ್ದು ಅದರ ಪುನಾರಂಭಕ್ಕೆ ನಾನೊಬ್ಬ ಹಿರಿಯನಾಗಿದ್ದರೂ ಪುಟ್ಟ ಬಾಲಕನಂತೆ ಸಚಿವರ ಬೆನ್ನು ಬಿದ್ದು ಅಲೆದಾಡಿದ್ದೇನೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಖಾನೆಯ ಮೇಲಿರುವ ಸಾಲದ ಬಡ್ಡಿ ಮನ್ನಾ ಮಾಡಿ ಕಾರ್ಖಾನೆಯನ್ನು ಗುತ್ತಿಗೆ ನೀಡಲು ಅವಕಾಶ ಒದಗಿಬಂದಿತ್ತು. ಗುತ್ತಿಗೆ ಪಡೆಯಲು ಮುಂದೆ ಬಂದವರು ತಕ್ಷಣಕ್ಕೆ 40ಕೋಟಿ ರು.ಗಳನ್ನು ಡಿಸಿಸಿ ಬ್ಯಾಂಕ್‌ಗೆ ಪಾವತಿಸಿ ಪುನಾರಂಭಕ್ಕೆ ಬೇಕಾಗುವ ಅಷ್ಟೇ ದುಡ್ಡನ್ನು ಹಾಕಿ ಮುಂದಾಗುವ ಮತ್ತು ಪ್ರತಿ ವರ್ಷ 8 ಕೋಟಿ ರು.ಗಳನ್ನು ಬ್ಯಾಂಕ್‌ಗೆ ಪಾವತಿಸುವ ಬಗ್ಗೆ ವ್ಯಕ್ತಿಯೋರ್ವರನ್ನು ಅಣಿಗೊಳಿಸಿ ಸಚಿವರ ಹಾಗೂ ಬ್ಯಾಂಕ್‌ ಅಧ್ಯಕ್ಷರು ಸೇರಿದಂತೆ ಮತ್ತಿತರ ಸಂಬಂಧಿತರ ಗಮನಕ್ಕೆ ತರಲಾಗಿತ್ತು ಅದಕ್ಕೆ ಸೊಪ್ಪೂ ಹಾಕಿಲ್ಲ, ಅದೊಂದು ವೇಳೆ ಒಪ್ಪಿದ್ದೆಯಾದಲ್ಲಿ ಕಾರ್ಖಾನೆ ಆರಂಭವಾಗಿ ರೈತ, ಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು ಬ್ಯಾಂಕ್‌ಗೂ ಸಾಲ ಮರುಪಾವತಿ ಆಗುತ್ತಿತ್ತು ಎಂದು ತಿಳಿಸಿದರು.

ಇನ್ನು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್‌ಸಿಡಿಸಿಗೆ ಪತ್ರ ಬರೆದು ಬಿಎಸ್‌ಎಸ್‌ಕೆ ಕಾರ್ಖಾನೆ ಬ್ಯಾಂಕ್‌ಗಳಲ್ಲಿ ಹೊಂದಿರುವ 350 ಕೋಟಿ ರು.ಗಳ ಸಾಲ, ಇಥೆನಾಲ್‌ ಘಟಕ ಸ್ಥಾಪಿಸಲು 550 ಕೋಟಿ ರು.ಗಳ ಸಾಲ ಕೇಳಲಾಗಿತ್ತು. ಅದಕ್ಕೆ ಎನ್‌ಸಿಡಿಸಿ ಒಪ್ಪಿ ರಾಜ್ಯ ಸರ್ಕಾರ ಈ ಬಗ್ಗೆ ಕೇಳಿದ್ದೆಯಾದಲ್ಲಿ ಸರ್ಕಾರಕ್ಕೆ ಸಾಲ ಬಿಡುಗಡೆ ಮಾಡಲು ಸಿದ್ಧ ಅಲ್ಲಿಂದ ಕಾರ್ಖಾನೆಗೆ ಪಡೆಯಬಹುದು ಎಂದು ತಿಳಿಸಲಾಗಿದ್ದರೂ ಅದಕ್ಕೂ ಸರ್ಕಾರದ ಗಮನ ಸೆಳೆಯುವಲ್ಲಿ ಹಿಂದೇಟು ಹಾಕಿದ್ದಾರೆ. ಇಂಥ ವರ್ತನೆ ಯಾತಕ್ಕೆ ಎಂಬುವುದೇ ಅರ್ಥವಾಗ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಮಾರಾಟದ ಕುತಂತ್ರ, ಬಿಡೋಲ್ಲ:

ಸದ್ಯ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ ಖಂಡ್ರೆ ಅವರು ಬಿಎಸ್‌ಎಸ್‌ಕೆ ಕಾರ್ಖಾನೆಯ ಆಸ್ತಿಯನ್ನು ಹರಾಜಿಗೆ ಯತ್ನಿಸಿ ಸರ್ಕಾರದಿಂದಲೇ ಮುಖಭಂಗ ಅನುಭವಿಸಿದ್ದರು. ಇದೀಗ ಆಸ್ತಿಯನ್ನು ನಿವೇಶನಗಳ ನ್ನಾಗಿಸಿ ಮಾರಾಟ ಮಾಡುವ ಕುತಂತ್ರ ನಡೆಸಿದ್ದಾರೆ ಎಂದು ಕೇಳಿಬಂದಿದ್ದು ಅಂಥ ದುಸ್ಸಾಹಸಕ್ಕೆ ಕೈಹಾಕಿದ್ದೆಯಾದಲ್ಲಿ ಲಕ್ಷಾಂತರ ರೈತ ಕುಟುಂಬಸ್ಥರೊಂದಿಗೆ ಕಾರ್ಖಾನೆ ಮುಂದೆ ಪ್ರತಿಭಟಿಸಿ ಕಾರ್ಖಾನೆ ಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವದಾಗಿ ಸುಭಾಷ ಕಲ್ಲೂರ್‌ ತಿಳಿಸಿದರು.

ಎನ್‌ಸಿಡಿಸಿಯಿಂದ ಸಾಲ ಪಡೆದು ಡಿಸಿಸಿ ಬ್ಯಾಂಕ್‌, ಅಪೆಕ್ಸ್‌ ಸೇರಿದಂತೆ ಇನ್ನಿತರ ಬ್ಯಾಂಕ್‌ನಲ್ಲಿರುವ ಸಾಲ ಮರುಪಾವತಿಸಲು ಸರ್ಕಾರದ ಖಾತ್ರಿ ನೀಡುವಂತೆ ಸಿಎಂ ಅವರಿಗೆ ಭೇಟಿಯಾಗಿ ಮನವಿಸಲು ಸಚಿವ ಈಶ್ವರ ಖಂಡ್ರೆ ಅವರು ಮೂರು ದಿನಗಳಲ್ಲಿ ಸಿಎಂ ಸಮಯ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಸುಮಾರು 70 ದಿನ ಕಳೆದರೂ ಕ್ಯಾರೇ ಎನ್ನುತ್ತಿಲ್ಲ. ನಾವು ಕೇಳಿದಾಗಲೆಲ್ಲ ಎರಡ್ಮೂರು ದಿನಗಳಲ್ಲಿ ಸಮಯ ತೆಗೆದುಕೊಳ್ಳುವೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರ ಹಿತಾಸಕ್ತಿ ಕಾಪಾಡುವಲ್ಲಿ ಉಸ್ತುವಾರಿ ಸಚಿವರು ವಿಳಂಬ ಮಾಡುತ್ತಿದ್ದಾರೆ. ಈ ವರ್ತನೆಯಿಂದ ನಾವು ಬೇಸತ್ತು ಅನಿವಾರ್ಯವಾಗಿ ಸುದ್ದಿಗೋಷ್ಠಿಯ ಮೂಲಕ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸುವದಕ್ಕೆ ಮುಂದಾಗಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ವಿಶ್ವನಾಥ ಪಾಟೀಲ್‌ ಮಾಡಗೂಳ, ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ್‌ ಚಿಟಗುಪ್ಪ, ಬಕ್ಕಪ್ಪ ಬಸರೆಡ್ಡಿ, ಅಪ್ಪಾರಾವ್‌ ಡಾಕುಳಗಿ ಹಾಗೂ ರಾಜಪ್ಪ ಶೇರಿಕಾರ್‌ ಉಪಸ್ಥಿತರಿದ್ದರು.

ಡಿಸಿಸಿ ಖಾಸಗಿ ಬ್ಯಾಂಕ್‌ ಆಗಿದೆ, ದುಂಡಾವರ್ತನೆ ಅತಿಯಾಗಿದೆ

ಡಿಸಿಸಿ ಬ್ಯಾಂಕ್‌ ಸಹಕಾರ ಬ್ಯಾಂಕ್‌ ಆಗಿ ಉಳಿದಿಲ್ಲ. ಅದು ಖಾಸಗಿ ಬ್ಯಾಂಕ್‌ ಆಗಿ ಪರಿವರ್ತನೆಯಾಗಿದೆ. ಅಲ್ಲಿ ಯಾವೊಬ್ಬ ರೈತನಿಗೂ ಸಾಲ ಸಿಗುತ್ತಿಲ್ಲ. ಅಲ್ಲಿ ಅಮರ ಖಂಡ್ರೆ ಅವರು ದುಂಡಾವರ್ತನೆ ತೋರುತ್ತಿದ್ದಾರೆ. ಇದು ಸಚಿವ ಈಶ್ವರ ಖಂಡ್ರೆ ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರೋದ್ರಲ್ಲಿ ಸಂದೇಹವೇ ಇಲ್ಲ ಎಂದು ಸುಭಾಷ ಕಲ್ಲೂರ್‌ ಭವಿಷ್ಯ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಗಾಲಿ ಕಾರ್ಖಾನೆ ಉದ್ಯೋಗಿಗೆಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್
ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ