ಖರ್ಗೆ ಬಹಿರಂಗ ಕ್ಷಮೆ ಕೇಳಬೇಕು: ಯಶ್‌ಪಾಲ್‌ ಸುವರ್ಣ ಆಗ್ರಹ

KannadaprabhaNewsNetwork |  
Published : Jan 29, 2025, 01:32 AM IST
ಯಶ್‌ಪಾಲ್‌ | Kannada Prabha

ಸಾರಾಂಶ

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬೇಜವಾಬ್ದಾರಿಯುತವಾದುದು. ಅವರಂತಹ ರಾಷ್ಟ್ರೀಯ ನಾಯಕರಿಗೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ ಎಂದು ಶಾಸಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕುಂಭಮೇಳದಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ದೂರವಾಗುವುದಿಲ್ಲ, ಬಡವರ ಹೊಟ್ಟೆ ತುಂಬುವುದಿಲ್ಲ, ಮೋದಿ ಅಮಿತ್ ಶಾ ನೂರು ಜನ್ಮ ಎತ್ತಿದರೂ ಸ್ವರ್ಗಕ್ಕೆ ಹೋಗುವುದಿಲ್ಲ ನರಕಕ್ಕೆ ಹೋಗುತ್ತಾರೆ ಎಂಬ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು ಅವರ ಪ್ರಾಯದೋಷದಿಂದಲೋ ಅಥವಾ ಅದು ಕಾಂಗ್ರೆಸ್‌ ಪಕ್ಷದ ಹೇಳಿಕೆಯೋ ಗೊತ್ತಾಗುತ್ತಿಲ್ಲ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬೇಜವಾಬ್ದಾರಿಯುತವಾದುದು, ಅವರಂತಹ ರಾಷ್ಟ್ರೀಯ ನಾಯಕರಿಗೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ ಎಂದರು.

ದೇಶ ವಿದೇಶದ ಕೋಟ್ಯಾಂತರ ಜನರು ಮಹಾಕುಂಭಮೇಳದಲ್ಲಿ ಭಾಗಿಯಾಗಬೇಕು ಎಂಬ ಇನ್ನೂ ಹಂಬಲದಲ್ಲಿದ್ದಾರೆ. ಆದರೆ ಖರ್ಗೆಯವರ ಹೇಳಿಕೆ ವಿಶ್ವದ ಮುಂದೆ ಭಾರತ ತಲೆತಗ್ಗಿಸುವಂತೆ ಮಾಡಿದೆ. ಇದು ಖರ್ಗೆ ಅವರ ಪ್ರಾಯದೋಷದ ಹೇಳಿಕೆಯಾಗಿದ್ದರೆ ಕಾಂಗ್ರೆಸ್ ನ ಇತರೆ ನಾಯಕರು ಸ್ಪಷ್ಟನೆ ಕೊಡಬೇಕು ಎಂದರು.

ಖರ್ಗೆ ಅವರೆ ನೀವು ಹಿರಿಯರು, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ, ಹಿಂದೂ ಧರ್ಮ ಏನು ಎಂದು ಗೊತ್ತಿಲ್ಲದೇ ಸ್ವರ್ಗ ನರಕದ ಬಗ್ಗೆ ಮಾತನಾಡುತ್ತಿದ್ದೀರಿ. ಹಿಂದೂ ಧರ್ಮದ ಆಚಾರ - ವಿಚಾರ ಗೊತ್ತಿಲ್ಲದೆ ಸ್ವರ್ಗ ನರಕದ ವಿಚಾರ ಮಾತನಾಡುವ ನೈತಿಕತೆ ನಿಮಗಿಲ್ಲ, ದೇಶದ ಜನ ಇದನ್ನು ಸಹಿಸುವುದಿಲ್ಲ, ತಕ್ಷಣ ಸಾರ್ವಜನಿಕವಾಗಿ ನೀವು ಕ್ಷಮೆ ಕೋರಬೇಕು ಎಂದು ಯಶ್‌ಪಾಲ್‌ ಆಗ್ರಹಿಸಿದರು.

ಅಲ್ಪಸಂಖ್ಯಾತರ ಓಲೈಕೆಗಾಗಿ ಖರ್ಗೆಯವರು ಇಂತಹ ಹೇಳಿಕೆ ಕೊಡುತ್ತಿದ್ದಾರೆ. ವಿಶ್ವದ ಜನ ಪ್ರಧಾನಿ ಮೋದಿಯನ್ನು ಒಪ್ಪಿದ್ದಾರೆ. ಮೋದಿ, ಅಮಿತ್ ಶಾ ಏಳಿಗೆ ಮತ್ತು ನಾಯಕತ್ವವನ್ನು ಒಪ್ಪದವರು ಇಂತಹ ಹೇಳಿಕೆ ಕೊಡುತ್ತಾರೆ. ಇದು ಖಂಡನೀಯ. ಮೋದಿ, ಅಮಿತ್ ಶಾ ರಂತಹ ನಾಯಕರು ಮುಂದಿನ ದಿನಗಳಲ್ಲಿ ದೇಶಕ್ಕೆ ಲಭಿಸುವುದು ಕಷ್ಟ ಸಾಧ್ಯ. ಮೋದಿಯವರ ಆಡಳಿತ ವೈಖರಿ, ದೂರದರ್ಶಿತ್ವ ಯೋಜನೆಗಳು ದೇಶಕ್ಕೆ ಅಗತ್ಯ ಇದೆ ಎಂದು ಯಶ್‌ಪಾಲ್ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ