ಮೋದಿ ಬಗ್ಗೆ ಖರ್ಗೆ ಅವಹೇಳನಕಾರಿ ಹೇಳಿಕೆ: ಕಾರವಾರದಲ್ಲಿ ಪ್ರತಿಭಟನೆ

KannadaprabhaNewsNetwork |  
Published : Apr 30, 2026, 02:15 AM IST
ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಕಾರವಾರದಲ್ಲಿ ಬುಧವಾರ ಬಿಜೆಪಿ ಒಬಿಸಿ, ಎಸ್‌ಸಿ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೀಡಿರುವ ಹೇಳಿಕೆ ಖಂಡಿಸಿ ಕಾರವಾರದಲ್ಲಿ ಬುಧವಾರ ಬಿಜೆಪಿ ಒಬಿಸಿ, ಎಸ್‌ಸಿ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೀಡಿರುವ ಹೇಳಿಕೆಯು ಜಿಲ್ಲೆಯಲ್ಲಿಯೂ ತೀವ್ರ ವಿರೋಧಕ್ಕೆ ಗುರಿಯಾಗಿದ್ದು, ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಜಿಲ್ಲಾ ಒಬಿಸಿ ಹಾಗೂ ಎಸ್‌ಸಿ ಮೋರ್ಚಾ ಕಾರ್ಯಕರ್ತರು ಬುಧವಾರ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇಶದ ಪ್ರಧಾನಿಯನ್ನು ಅವಮಾನಿಸುವ ಮೂಲಕ ಖರ್ಗೆ ಅವರು ಇಡೀ ದೇಶದ ಜನರಿಗೆ ಅವಮಾನ ಮಾಡಿದ್ದಾರೆ. ಅವರು ಕೂಡಲೇ ಬೇಷರತ್ತಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ದೇಶದಿಂದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿಯವರನ್ನೇ ಭಯೋತ್ಪಾದಕ ಎಂದು ಕರೆಯುವುದು ಖಂಡನೀಯ. ಉನ್ನತ ಸ್ಥಾನದಲ್ಲಿರುವ ನಾಯಕರಿಂದ ಇಂತಹ ಕೀಳು ಮಟ್ಟದ ಹೇಳಿಕೆ ಬಂದಿರುವುದು ಅಸಹ್ಯಕರ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಒಪ್ಪುವಂಥದ್ದಲ್ಲ ಎಂದು ಹರಿಹಾಯ್ದರು.

ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿರುವ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಕಾಂಗ್ರೆಸ್‌ನ ಹೀನ ಮನಸ್ಥಿತಿಯನ್ನು ತೋರಿಸುತ್ತದೆ. ಮುಂದಿನ 15 ದಿನಗಳೊಳಗೆ ಖರ್ಗೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸದಿದ್ದರೆ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆನಂತರ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜಕೀಯ ಲಾಭಕ್ಕಾಗಿ ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಂದನ ಬೋರಕರ್, ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಸ್ ಗುನಗಿ ಹಾಗೂ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಗುರಿ ಓಸ್ಯಾಟ್ ಸಂಸ್ಥೆಯದ್ದಾಗಿದೆ
ಶಿರೋಳ ಗ್ರಾಮಸ್ಥರಿಗೆ ಜಲಜೀವನ ಭಾಗ್ಯ ಯಾವಾಗ?