ನಾನು, ದರ್ಶನ್‌ ದೂರವಾಗಿದ್ದೇವೆ - ಹಾಗಂತ ನಾನು ಮತ್ತು ದರ್ಶನ್‌ ಶತ್ರುಗಳಲ್ಲ : ನಟ ಸುದೀಪ್‌

KannadaprabhaNewsNetwork |  
Published : Sep 01, 2024, 01:49 AM ISTUpdated : Sep 01, 2024, 09:07 AM IST
ಸುದೀಪ್ ಪತ್ರಿಕಾಗೋಷ್ಟಿ | Kannada Prabha

ಸಾರಾಂಶ

‘ನಾನು ಮತ್ತು ದರ್ಶನ್‌ ಮೊದಲಿನಂತೆ ಮಾತನಾಡಿಕೊಳ್ಳುತ್ತಿದ್ದರೆ ಖಂಡಿತ ಈ ಸಂದರ್ಭದಲ್ಲಿ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬರುತ್ತಿದ್ದೆ’ ಎಂದು ನಟ ಸುದೀಪ್‌ ಹೇಳಿದ್ದಾರೆ.

 ಬೆಂಗಳೂರು :  ‘ನಾನು ಮತ್ತು ದರ್ಶನ್‌ ಮೊದಲಿನಂತೆ ಮಾತನಾಡಿಕೊಳ್ಳುತ್ತಿದ್ದರೆ ಖಂಡಿತ ಈ ಸಂದರ್ಭದಲ್ಲಿ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬರುತ್ತಿದ್ದೆ’ ಎಂದು ನಟ ಸುದೀಪ್‌ ಹೇಳಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಂದ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, ‘ದರ್ಶನ್ ವಿಚಾರವಾಗಿ ನಾನು ಹೇಳಬೇಕಿರೋದನ್ನು ಈಗಾಗಲೇ ಹೇಳಿದ್ದೇನೆ. ಮತ್ತೆ ಅದೇ ಮಾತನಾಡುವುದು ಬೇಡ. ಅವರಿಗೆ ಅಭಿಮಾನಿಗಳು ಇದ್ದಾರೆ. ಅವರದ್ದೇ ಕುಟುಂಬ ಇದೆ. ನಾನು ಮಾತನಾಡುವುದರಿಂದ ಅವರಿಗೆ ನೋವಾಗುವುದು ಬೇಡ. ಮತ್ತೊಂದು ಕಡೆ ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೂ ನೋವು ಆಗೋದು ಬೇಡ. ಈ ದೇಶದಲ್ಲಿ ನಾವು ಇದ್ದೇವೆ ಎಂದ ಮೇಲೆ ಕಾನೂನು ಮೇಲೆ ನಂಬಿಕೆ ಇಡಬೇಕು. ನನಗೆ ಸರ್ಕಾರ ಮತ್ತು ಕಾನೂನಿನ ಮೇಲೆ ನಂಬಿಕೆ ಇದೆ. ನಾನು ಆ ಪ್ರಕರಣದ ಬಗ್ಗೆ ಏನಾದರೂ ಹೇಳಬೇಕು ಎಂದರೆ ಮಾಧ್ಯಮಗಳಲ್ಲಿ ಬಂದಿರುವುದನ್ನು ನೋಡಿಯೇ ಹೇಳಬೇಕಿದೆ. ಯಾಕೆಂದರೆ ಅದಕ್ಕಿಂತ ಹೆಚ್ಚು ನನಗೂ ಗೊತ್ತಿಲ್ಲ. ಇನ್ನೂ ಅದರ ಬಗ್ಗೆಯೇ ಮಾತನಾಡಿ ಎಂದರೆ ನಾನು ಜೈಲಿಗೆ ಹೋಗಬೇಕಾ ಅಥವಾ ದರ್ಶನ್‌ ಅವರನ್ನು ಜೈಲಿನಿಂದ ಕರೆಸಬೇಕಾ’ ಎಂದು ಮರು ಪ್ರಶ್ನೆ ಮಾಡಿದರು.

‘ದರ್ಶನ್‌ ಅವರು ಜೈಲಿಗೆ ಹೋಗುವ ಮುನ್ನವೇ ನಾವಿಬ್ಬರೂ ಚೆನ್ನಾಗಿದ್ದಿದ್ದರೆ ನಾನು ಹೋಗಿ ಭೇಟಿ ಮಾಡಿ ಮಾತನಾಡುತ್ತಿದ್ದೆ. ಆದರೆ ನಾವಿಬ್ಬರು ಮಾತನಾಡುತ್ತಿಲ್ಲವೇ? ನಾವು ದೂರ ಆಗಿದ್ದೇವೆ ಎಂದ ಮಾತ್ರಕ್ಕೆ ನಾನು ಸರಿ ಇಲ್ಲ, ಅವರು ಸರಿ ಇಲ್ಲ ಅಂತಲ್ಲ. ನಾವಿಬ್ಬರೂ ಒಟ್ಟಿಗೆ ಸರಿಯಿಲ್ಲ. ಹಗಲಿನಲ್ಲಿ ಸೂರ್ಯ, ರಾತ್ರಿ ಚಂದ್ರ ಬರಬೇಕು. ಒಟ್ಟಿಗೆ ಬರಕ್ಕೆ ಆಗಲ್ಲ. ಹಾಗಂತ ದರ್ಶನ್ ವ್ಯಕ್ತಿತ್ವದಲ್ಲಿ ತೊಂದರೆ ಇದೆ ಎಂದು ನಾನು ಹೇಳುತ್ತಿಲ್ಲ. ನಾನು ಬೇರೆ, ಅವರು ಬೇರೆ. ನಮ್ಮಿಬ್ಬರ ಅಭಿರುಚಿ ಮತ್ತು ಯೋಚನೆಗಳೇ ಬೇರೆ ಬೇರೆ’ ಎಂದು ಹೇಳಿದರು.

‘ಹಾಗಂತ ನಾನು ಮತ್ತು ದರ್ಶನ್‌ ಶತ್ರುಗಳಲ್ಲ. ಯಾರೋ ಹೇಳುತ್ತಾರೆ, ಯಾರನ್ನೋ ಮೆಚ್ಚಿಸಬೇಕು ಎಂದುಕೊಂಡು ಕೆಲಸ ಮಾಡುವವನಲ್ಲ ನಾನು. ಮನಸ್ಸಿಂದ ಬಂದರೆ ಯಾರು ಏನೇ ಅಂದುಕೊಂಡರೂ ನಾನು ಅಂಥವರ ಜತೆಗೆ ನಿಲ್ಲುತ್ತೇನೆ. ಹೊಸಪೇಟೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ದರ್ಶನ್‌ ಅವರಿಗೇ ತೊಂದರೆ ಆದಾಗ ನಾನು ಪತ್ರ ಬರೆದು ನನ್ನ ಅಭಿಪ್ರಾಯ ಹಂಚಿಕೊಂಡೆ. ಅವತ್ತು ನಾನು ಪತ್ರ ಬರೆದಿದ್ದು ಯಾರನ್ನೋ ಮೆಚ್ಚಿಸಲು ಅಲ್ಲ. ಯಾವುದೇ ಕಲಾವಿದರಿಗೂ ಅದು ಆಗಬಾರದು. ಕೋಪವನ್ನು ಸಾರ್ವಜನಿಕವಾಗಿ ಆ ರೀತಿ ತೋರಿಸಿಕೊಳ್ಳಬಾರದಿತ್ತು. ಅದು ನಮ್ಮ ಸಂಸ್ಕೃತಿ ಅಲ್ಲ’ ಎಂದು ಹೇಳಿದ್ದೆ. ಅದು ನನ್ನ ಮನಸ್ಸಿನಿಂದ ಬಂದ ಮಾತುಗಳು. ದರ್ಶನ್‌ ಅವರ ಜತೆಗೆ ನಾನು ಇದ್ದಿದ್ದರೆ ಇಂಥ ಘಟನೆ ಆಗುತ್ತಿಲ್ಲ ಎಂಬುದು ತಪ್ಪು. ಯಾಕೆಂದರೆ ನಾನು ಯಾರನ್ನೂ ತಿದ್ದುವಷ್ಟು ದೊಡ್ಡ ಮನುಷ್ಯ ಅಲ್ಲ. ಸ್ನೇಹಿತರಾಗಿದ್ದಾಗ ಕೂತು ಮಾತನಾಡುತ್ತಿದ್ವಿ ಅಷ್ಟೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುದೀಪ್‌ ಅವರ ಆಪ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್‌ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!