ಕಿಡ್ನಾಪ್‌: ₹5 ಕೋಟಿಗೆ ಬೇಡಿಕೆ ಇಟ್ಟ ಅಪಹರಣಕಾರರು

KannadaprabhaNewsNetwork |  
Published : Oct 11, 2025, 12:03 AM IST
ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಮಂಜುನಾಥ ಶೇಜವಾಡ್ಕರ್‌ ಅಪರಹರಣವಾಗಿರುವ ವ್ಯಕ್ತಿ  | Kannada Prabha

ಸಾರಾಂಶ

ಮಂಜುನಾಥ ಎಂದಿನಂತೆ ಬೆಳಿಗ್ಗೆ 5.30ರ ಸುಮಾರಿಗೆ ಗ್ರಾಮದಿಂದ ಮೈಲಾರ ರಸ್ತೆಯಲ್ಲಿ ವಾಯು ವಿಹಾರಕ್ಕೆ ಹೋಗಿದ್ದರು.

ಹೂವಿನಹಡಗಲಿ: ತಾಲೂಕಿನ ಹೊಳಲು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ವಾಯುವಿವಾಹಕ್ಕೆಂದು ಹೋಗಿದ್ದ ವ್ಯಕ್ತಿಯನ್ನು ಅಪಹರಿಸಿ ₹5 ಕೋಟಿ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಗ್ರಾಮದ ಮಂಜುನಾಥ ಶೇಜವಾಡ್ಕರ್‌ (58) ಅಪಹರಣವಾಗಿರುವ ವ್ಯಕ್ತಿ.

ಮಂಜುನಾಥ ಎಂದಿನಂತೆ ಬೆಳಿಗ್ಗೆ 5.30ರ ಸುಮಾರಿಗೆ ಗ್ರಾಮದಿಂದ ಮೈಲಾರ ರಸ್ತೆಯಲ್ಲಿ ವಾಯು ವಿಹಾರಕ್ಕೆ ಹೋಗಿದ್ದರು. ಆದರೆ ಮನೆಗೆ ಬರುವುದು ತಡವಾಗಿರುವುದನ್ನು ಕಂಡು ಗಾಬರಿಗೊಂಡ ಮನೆಯ ಸದಸ್ಯರು ಅಕ್ಕಪಕ್ಕದಲ್ಲಿ ಹುಡುಕಾಡಿದ್ದಾರೆ. ಅದೇ ಸಂದರ್ಭದಲ್ಲಿ ಮಂಜುನಾಥ ಅವರ ಮೊಬೈಲ್‌ನಿಂದ ಅಪಹರಣಕಾರರು, ದಾವಣಗೆರೆಯಲ್ಲಿರುವ ಮಂಜುನಾಥ ಅವರ ಹಿರಿಯ ಸಹೋದರಿ ಡಾ.ಮಂಜುಳಾ ಅವರಿಗೆ ವ್ಯಾಟ್ಸ್‌ ಆ್ಯಪ್‌ ಕಾಲ್‌ ಮಾಡಿ ಮಂಜುನಾಥ ಅವರ ಕಡೆಯಿಂದ ಮಾತನಾಡಿಸಿದ್ದಾರೆ. ಈವೇಳೆ ಮಂಜುನಾಥ ಮಾತನಾಡಿ, ನನ್ನನ್ನು ಯಾರೋ ಕಾರಲ್ಲಿ ಅಪಹರಿಸಿ ಕಟ್ಟಿ ಹಾಕಿದ್ದಾರೆ. ₹5 ಕೋಟಿ ಕೊಡಬೇಕೆಂದು ಹೇಳುತ್ತಿದ್ದಾರೆ ಎಂದು ತಿಳಿಸುತ್ತಲೇ, ಅಪಹರಣಕಾರ ನೇರವಾಗಿ ಮಂಜುನಾಥ ಸಹೋದರಿಯ ಹತ್ತಿರ ಮಾತನಾಡಿ, ಬೇಗನೇ ಹಣ ನೀಡಿ ನಮಗೂ ಇವರಿಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ನಮಗೆ ಹಣ ಬೇಕು ಅಷ್ಟೇ ಎಂದಿದ್ದಾರೆ. ಅದಕ್ಕೆ ಡಾ.ಮಂಜುಳಾ ಪ್ರತಿಕ್ರಿಯಿಸಿ ಅಷ್ಟೊಂದು ಹಣ ನಮ್ಮಿಂದ ನೀಡಲು ಆಗುವುದಿಲ್ಲ. ಏನು ಮಾಡುವುದು ನೀವೇ ಹೇಳಿ ಎಂದಾಗ, ಅಪಹರಣಕಾರು ಎಷ್ಟು ನೀಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಇವರು ಒಂದು ಲಕ್ಷ ಮಾತ್ರ ನೀಡಲು ಸಾಧ್ಯ ಎಂದಾಗ ನಾವು ಕೇಳಿದಷ್ಟು ಹಣ ನೀಡದಿದ್ದರೆ, ನಿಮ್ಮ ತಮ್ಮನ ಬಾಡಿ ಕೂಡ ಸಿಗುವುದಿಲ್ಲ ಎಂದು ಹೆದರಿಸಿದ್ದಾರೆ. ಈ ಸಂಭಾಷಣೆ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಷಯ ತಿಳಿದ ತಕ್ಷಣ ಹಿರೇಹಡಗಲಿ ಪಿಎಸ್‌ಐ ಭರತ್ ಪ್ರಕಾಶ, ಸಿಪಿಐ ದೀಪಕ್ ಭೂಸರೆಡ್ಡಿ ಭೇಟಿ ನೀಡಿ ವಿಶೇಷ ತಂಡ ರಚನೆ ಮಾಡುವ ಮೂಲಕ ತನಿಖೆ ನಡೆಸಿದ್ದಾರೆ.

ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ