ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅವಳಿ ಗ್ರಾಮಗಳ ಕಿಕ್ಕೇರಿ-ಲಕ್ಷ್ಮೀಪುರ ಗ್ರಾಮದ ಅದಿದೇವತೆ ಕಿಕ್ಕೇರಮ್ಮನವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.ಮಳೆರಾಯನ ಸಿಂಚನದೊಂದಿಗೆ ಆರಂಭವಾದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರು ಉಘೇ ಉಘೇತಾಯಿ ಲಕ್ಕಮ್ಮ, ಕಿಕ್ಕೇರಮ್ಮ, ಮಹಾಮಾತೆ ಎಂದು ರಥವನ್ನು ಎಳೆಯುತ್ತಿದ್ದ ನೋಟ ಜಾತ್ರೆಯ ವೈಶಿಷ್ಟತೆಗೆ ಸಾಕ್ಷಿಯಾಯಿತು. ರಥೋತ್ಸವಕ್ಕೆ ಮಳೆರಾಯನ ಆರ್ಭಟದಿಂದ ತುಸು ಅಡಚಣೆಯಾದರೂ ರೈತರು, ಭಕ್ತರು ಸಂಭ್ರಮಪಟ್ಟರು.
ಭಕ್ತರು ದೇವಿಗೆ ಹಣ್ಣು ಧವನ ಎಸೆದು ಧನ್ಯತಾ ಭಾವ ಪ್ರದರ್ಶಿಸಿದರು. ಕಿಕ್ಕೇರಮ್ಮನವರ ಅಡ್ಡೆದೇವಿಯಾದ ಚಿಕ್ಕಮ್ಮದೇವಿಯನ್ನು ಗುಡಿಯಿಂದ ಪಟ್ಟಣದಲ್ಲಿನ ರಾಜಬೀದಿ, ಹೊಸಬೀದಿ, ಕೆ.ಎಸ್.ನರಸಿಂಹಸ್ವಾಮಿ ಬೀದಿ, ಕೋಟೆಗಣಪತಿ, ಆಂಜನೇಯ ಬೀದಿ, ಬ್ರಾಹ್ಮಣಛತ್ರ ಬೀದಿ, ಬ್ರಹ್ಮೇಶ್ವರಬೀದಿ ಮೊದಲೆಡೆಯಲ್ಲಿ ಮೆರವಣಿಗೆ ಮಾಡಲಾಯಿತು. ದೇವಿಗೆ ಆರತಿ ಎತ್ತಿರಥದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ರಥಕ್ಕೆ ಆಗ್ರಪೂಜೆ ಸಲ್ಲಿಸಿ ನಿರ್ವಿಘ್ನವಾಗಿ ಜಾತ್ರೋತ್ಸವ ನೆರವೇರಲು ಪ್ರಾರ್ಥಿಸಿ ರಥದಲ್ಲಿ ದೇವಿ ಪ್ರತಿಷ್ಟಾಪಿಸಲಾಯಿತು.ಮಂಗಳ ವಾದ್ಯದೊಂದಿಗೆ ಸಾಗಿದರಥದ ಮುಂದೆ ಹಾಗೂ ಹಿಂದೆ ಸಹಸ್ರಾರು ಭಕ್ತರು ಜಿಲ್ಲೆ, ಹೊರಜಿಲ್ಲೆಯಲ್ಲದೆ ಹೊರ ರಾಜ್ಯಗಳಾದ ಮಹಾರಾಷ್ಟ್ರ ಮುಂತಾದ ಕಡೆಯಿಂದ ಬಂದ ಭಕ್ತರು ಭಕ್ತಿ ಭಾವದೊಂದಿಗೆ ಸಾಗಿ ಹಣ್ಣು, ಧವನ ಎಸೆದರು. ಅಂತಿಮವಾಗಿ ಗುಡಿಗೆ ಸಾಗಿ ದೇವಿಯದರ್ಶನ ಪಡೆದರು.
ರಥೋತ್ಸವ ಗ್ರಾಮದಿಂದ ಗುಡಿಯವರೆಗೆ ಭಕ್ತರ ಉದ್ಘೋಷದೊಂದಿಗೆ ಸಾಗಿತು. ಬಣ್ಣ ಬಣ್ಣದ ದ್ವಜ ಪತಾಕೆ, ಪುಷ್ಪಮಾಲೆಗಳಿಂದ ಅಲಂಕೃತವಾಗಿದ್ದ ರಥಕ್ಕೆ ಭಕ್ತರು, ನವಜೋಡಿಗಳು ನಮಿಸಿ ಧನ್ಯರಾದರು. ರಥೋತ್ಸವದ ಅಂಗವಾಗಿ ವಿವಿಧ ಸಂಘ-ಸಂಸ್ಥೆಯವರು, ಗ್ರಾಮಸ್ಥರುಅರವಟ್ಟಿಗೆ, ನೀರು ಮಜ್ಜಿಗೆ ಪಾನಕ ನೀಡುವ ಮೂಲಕ ಬಿಸಿಲಿನಿಂದ ಬಸವಳಿದ ಭಕ್ತರದಾಹ ನೀಗಿಸಿದರು.ಪಕ್ಷಾತೀತವಾಗಿ ವಿವಿಧ ಪಕ್ಷಗಳ ಜನರು, ಲಕ್ಷ್ಮೀಪುರದದೇವಿಯ ಆರಾಧಕರಾದ ಕೆಂಚಮ್ಮ, ದೊಡ್ಡಹಟ್ಟಿ, ಬೂನಾಸಿ, ಮಾರಮ್ಮ ವಠಾರದ ಮುಖಂಡರು, ಹೋಬಳಿಯ ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಇನ್ಸ್ ಪೆಕ್ಟರ್ ರೇವತಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.