‘ಕಿಲಾರಿ ಕಲರವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಸಹಯೋಗದೊಂದಿಗೆ ಸೋಮವಾರ ನಡೆದ ಕಿಲಾರಿ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಿಲಾರಿಗಳು ತಮ್ಮ ಬದುಕನ್ನು ಪಶುಪಾಲನೆಗಾಗಿ ಮುಡಿಪಾಗಿಟ್ಟವರು. ತಮ್ಮ ವೈಯಕ್ತಿಕ ಜೀವನ ಮೆರೆತು ಪಶುಪಾಲನೆಯ ಸಂಸ್ಕೃತಿಯಾಗಿ ಉಳಿಸಿಕೊಂಡು ಬಂದಿದ್ದಾರೆ ಎಂದರು.
ಕರ್ನಾಟಕದ ನೆಲಕ್ಕೆ ಒಂದು ವಿಶಿಷ್ಟವಾದ ಗುಣವಿದೆ. ಕವಿಗಳು, ಕಲಾವಿದರು, ಹಾಡುಗಾರರು, ನಾಟಕಕಾರರು, ವಿಮರ್ಶಕರು, ಸಾಧು, ಸಂತರು, ಶರಣರು, ಸೂಫಿಗಳು ಸೇರಿದಂತೆ ಬಹಳಷ್ಟು ಜನ ಬಾಳಿ ಬದುಕಿದ್ದಾರೆ. ಹಾಗಾಗಿ ಈ ನೆಲ ಸಾಂಸ್ಕೃತಿಕವಾಗಿ ಸಿರಿತನದಲ್ಲಿದೆ. ಸಾಂಸ್ಕೃತಿಕ ಅಸ್ಮಿತೆಗಳ ಸಮಸ್ಯೆ ಬಂದಾಗ ಈ ಹುಡುಕಾಟದಲ್ಲಿ ನಮಗೆ ಕಿಲಾರಿ ಕಲರವ ದೊರೆತಿದೆ. ಮಣ್ಣಿನ ವಾಸನೆಯೊಂದಿಗೆ ಬದುಕುವ ಕಿಲಾರಿಗಳಲ್ಲಿ ಸಮರ್ಪಣಾ ಮನೋಭಾವವಿದೆ ಎಂದು ಹೇಳಿದರು.ಈ ಮಣ್ಣಿಗೆ ಆಕರ್ಷಕವಾದ ತಾಯ್ತನದ ಮನಸ್ಸಿದೆ. ಹಾಗಾಗಿ ಹೆಚ್ಚು ಸಂತರು, ಶರಣರು, ದಾರ್ಶನಿಕರು, ತತ್ವಪದಕಾರರು ಇಲ್ಲಿ ಮಾತ್ರ ಅರಳಲು ಸಾಧ್ಯವಾಯಿತು. ತಮಗಾಗಿ ಹಾಗೂ ತಮ್ಮ ಕುಟುಂಬಕ್ಕಾಗಿ ಎಲ್ಲರೂ ಬದುಕುತ್ತಾರೆ. ಅವರಿಗಾಗಿ ಅವರು ಬದುಕುವುದು ದೊಡ್ಡದಲ್ಲ. ಆದರೆ ಸಮಾಜ, ನೆಲ, ಪ್ರಕೃತಿ, ಸಮುದಾಯ ಹಾಗೂ ಜಗತ್ತಿಗಾಗಿ ಬದುಕುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಗುಡುಗು, ಸಿಡಿಲು, ಮಳೆ, ಗಾಳಿ ಇದ್ಯಾವುದನ್ನು ಲೆಕ್ಕಿಸದೆ ಸಮಾಜ, ನೆಲ, ಸಮುದಾಯ ಪ್ರಕೃತಿಗಾಗಿ ಬದುಕುವ ಕಿಲಾರಿಗಳು ಬೆಳ್ಳಿ, ಬಂಗಾರ, ಕಂಚು ಹಿತ್ತಾಳೆ ಯಾವುದಕ್ಕೂ ಆಸೆ ಪಡುವವರಲ್ಲ. ನೆಲದ ವಾಸನೆ ಹಾಗೂ ಮಣ್ಣಿನ ಸೊಗಡಿನಲ್ಲಿ ಬದುಕು ಅರಳಿಸುವುದು ವಿಶಿಷ್ಟವಾದ ಗುಣ ಅವರದು. ಇದು ನಿಸರ್ಗದ ನಿಮಯಕ್ಕೆ ಬಹಳ ಹತ್ತಿರವಾದದ್ದು. ನಿಜವಾದ ಪ್ರಾಕೃತಿಕ ಅಲೋಚನೆ ಮತ್ತು ತಾಯ್ತನದ ಬದುಕನ್ನು ಕಿಲಾರಿಗಳು ಸವೆಸುತ್ತಾರೆ. ಪ್ರಕೃತಿಯೊಂದಿಗೆ ಬದುಕನ್ನು ಸಮರ್ಪಿಸಿಕೊಳ್ಳುವ ಕಿಲಾರಿಗಳನ್ನು ಒಳಗಣ್ಣಿನಿಂದ ನೋಡಬೇಕು ಎಂದರು.
ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ತತ್ವಪದಕಾರರ ನಾಥ, ಸಿದ್ದ, ಅವಧೂತರ ಪರಂಪರೆಯನ್ನು ಒಳಗೊಂಡಂತೆ ಕಿಲಾರಿಗಳ ಚರಿತ್ರೆಯನ್ನು ಶೈಕ್ಷಣಿಕ ಶಿಸ್ತಿನೊಳಗೆ ದಾಖಲಿಸುವ ಪ್ರಯತ್ನವಾಗಬೇಕು ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾಸ್ತಾವಿಕ ಮಾತನಾಡಿ, ಮ್ಯಾಸ ಬುಡಕಟ್ಟಿನಲ್ಲಿ ಗಾದ್ರಿಪಾಲ ನಾಯಕ, ಯರಮಂಚಿ ನಾಯಕ ಮುಂತಾದ ವಿವಿಧ ಸಾಂಸ್ಕೃತಿಕ ಅಧಿದೈವಗಳ ಹೆಸರಿನಲ್ಲಿ ಆಚರಣಾತ್ಮಕ ನೆಲೆಯೊಳಗೆ ಗೋವುಗಳನ್ನು ಎತ್ತುಗಳನ್ನು ಹರಕೆ ರೂಪದಲ್ಲಿ ತುರುಪಟ್ಟಿಗಳಿಗೆ ಸೇರಿಸಲಾಗುತ್ತದೆ. ಈ ಮಾದರಿಯ ದೇವರ ಎತ್ತುಗಳನ್ನು ವಿಧಿಬದ್ಧವಾಗಿ ಪಾಲನೆ, ಪೋಷಣೆ ಮಾಡುವವರನ್ನು ಕಿಲಾರಿಗಳೆದು ಕರೆಯಲಾಗುತ್ತದೆ ಎಂದರು.