ಕನ್ನಡಪ್ರಭ ವಾರ್ತೆ ಹನೂರು
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ರಂಗಮಂದಿರದ ಸಮೀಪ 40 ಮಳಿಗೆಗಳಿದ್ದು 18 ಜನರು ನಿಯಮಾನುಸಾರ ಟೆಂಡರ್ ಪಡೆದು ಲಕ್ಷಾಂತರ ರುಪಾಯಿ ಬಾಡಿಗೆ ಕಟ್ಟಿ ಅಂಗಡಿ ನಡೆಸುತ್ತಿದ್ದಾರೆ. ಆದರೆ 22 ಜನರು ಕಳೆದ 8 ವರ್ಷಗಳಿಂದ ಅನಧಿಕೃತ ಮಳಿಗೆಗಳನ್ನು ನಡೆಸುತ್ತಾ ಪ್ರಾಧಿಕಾರಕ್ಕೆ ₹100 ಕೋಟಿಗೂ ಹೆಚ್ಚು ಆದಾಯಕ್ಕೆ ಕುತ್ತು ತಂದಿದ್ದಾರೆ ಎಂದು ಆರೋಪಿಸಿದರು.
ಕಳೆದ 8 ವರ್ಷಗಳಿಂದ ಅಧಿಕಾರ ನಡೆಸಿದ ಕಾರ್ಯದರ್ಶಿ ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಇವರು ನಿಯಮ ಬಾಹಿರವಾಗಿ ಅಂಗಡಿ ಮಳಿಗೆಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಲಕ್ಷಾಂತರ ರುಪಾಯಿ ಬಾಡಿಗೆ ಕಟ್ಟಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದರು.ಈ ಕೂಡಲೇ ಪ್ರಾಧಿಕಾರದ ಅಧಿಕಾರಿಗಳು ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿಸಿ ಟೆಂಡರ್ ಬಿಡುವ ಮೂಲಕ ಶ್ರೀ ಕ್ಷೇತ್ರದ ಪ್ರಾಧಿಕಾರಕ್ಕೆ ಆದಾಯ ಬರುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್ ಮಂಜುನಾಥ್ ಕ್ಷೇತ್ರದಲ್ಲಿ ಕಳೆದ 2 ವರ್ಷಗಳಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಕೋಟ್ಯಂತರ ರುಪಾಯಿ ಆದಾಯ ಬರುವ ಅಂಗಡಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಹಲವು ಅನುಮಾನಗಳಿಗೆ ತಡೆ ಮಾಡಿಕೊಟ್ಟಿದೆ ಎಂದರು.
ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸದಾಕಂಕಣ ಬದ್ಧನಾಗಿದ್ದೇನೆ ಎಂದು ಹೇಳುವ ಶಾಸಕರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡದೇ ಅನಧಿಕೃತ ನಡೆಸುತ್ತಿರುವ ಎಲ್ಲ ವ್ಯಾಪಾರಸ್ಥರನ್ನು ತೆರವುಗೊಳಿಸಲು ಇವರೇ ಸೂಚನೆ ನೀಡಿ ಟೆಂಡರ್ ಮಾಡಿಸುವ ಮೂಲಕ ದೇವಸ್ಥಾನದ ಆದಾಯವನ್ನು ಹೆಚ್ಚು ಮಾಡಬೇಕು ಎಂದರು.
ಕಳೆದ ಒಂದು ವಾರದ ಹಿಂದೆ ಪ್ರಾಧಿಕಾರದ ಕಾರ್ಯದರ್ಶಿ ರಘು ಹಾಗೂ ಸಿಬ್ಬಂದಿ ಅನಧಿಕೃತ ಮಳಿಗೆ ನಡೆಸುತ್ತಿರುವವರಿಗೆ 8 ದಿನಗಳ ಕಾಲಾವಕಾಶ ನೀಡಿ ಅಂಗಡಿ ಖಾಲಿ ಮಾಡಬೇಕು ಎಂದು ಎಚ್ಚರಿಕೆ ನೀಡಿ ಅಂಗಡಿಗಳನ್ನು ಬಂದ್ ಮಾಡಿಸಿದ್ದರು. ಆದರೆ ಎರಡು ದಿನ ಕಳೆದ ನಂತರ ವ್ಯಾಪಾರಸ್ಥರು ಮತ್ತೆ ಮಳಿಗೆ ಪ್ರಾರಂಭಿಸಿದ್ದಾರೆ. ಅಧಿಕಾರಿಗಳು ಯಾರ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಈಗ ಅನಧಿಕೃತ ವ್ಯಾಪಾರಸ್ಥರು ಮತ್ತೆ ತಮ್ಮ ಮಳಿಗೆಗಳನ್ನು ಪ್ರಾರಂಭಿಸಿರುವುದರಿಂದ ಇದರಿಂದ ಬಾಡಿಗೆ ಪಾವತಿಸಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.