ಕನ್ನಡದಲ್ಲಿ ಮೆಸೇಜ್‌ ಕಳಿಸಿ ಸಿಕ್ಕಿಬಿದ್ದ ಹಂತಕ!

KannadaprabhaNewsNetwork |  
Published : Nov 07, 2026, 02:00 AM IST
ಹಂತಕ | Kannada Prabha

ಸಾರಾಂಶ

ಒಂದೇ ಕುಟುಂಬದ 7 ಮಂದಿ ಹತ್ಯಾಕಾಂಡ ಪ್ರಕರಣದಲ್ಲಿ ಖಾಕಿ ಬಲೆಗೆ ಹಂತಕರು ಬೀಳಲು ‘ಕನ್ನಡ’ದಲ್ಲಿ ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದ ಸಂದೇಶವೇ ಸುಳಿವು ನೀಡಿದೆ ಎಂಬ ರೋಚಕ ಸಂಗತಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದೇ ಕುಟುಂಬದ 7 ಮಂದಿ ಹತ್ಯಾಕಾಂಡ ಪ್ರಕರಣದಲ್ಲಿ ಖಾಕಿ ಬಲೆಗೆ ಹಂತಕರು ಬೀಳಲು ‘ಕನ್ನಡ’ದಲ್ಲಿ ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದ ಸಂದೇಶವೇ ಸುಳಿವು ನೀಡಿದೆ ಎಂಬ ರೋಚಕ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ವಾರ ಅ.31ರಂದು ತನ್ನ ತಂಗಿ ಸುನೀತಾ ಮನೆಗೆ ಬಾಡೂಟಕ್ಕೆ ಹೋಗುವುದಾಗಿ ಸ್ನೇಹಿತರಿಗೆ ಹೇಳಿ ಪತ್ನಿ ಹಾಗೂ ಮಗನ ಜತೆ ಶಂಕರ್ ಬಂದಿದ್ದ. ಅಲ್ಲದೆ ತನ್ನ ಪೋಷಕರಿಗೂ ಮಾಂಸದ ಊಟಕ್ಕೆ ನಾದಿನಿ ಮನೆಗೆ ಹೋಗುತ್ತಿರುವುದಾಗಿ ನಳಿನಿ ಸಹ ಕರೆ ಮಾಡಿ ಹೇಳಿದ್ದಳು. ಆದರೆ 2 ದಿನಗಳಾದರೂ ಶಂಕರ್ ದಂಪತಿ ಮನೆಗೆ ಬಾರದಿದ್ದಾಗ ನಳಿನಿ ಪೋಷಕರು ಹಾಗೂ ಶಂಕರ್ ಸ್ನೇಹಿತರಿಗೆ ಅನುಮಾನ ಬಂದಿದೆ. ಮನೆ ಬಳಿ ಮೃತ ಶಂಕರ್‌ನ ಸ್ನೇಹಿತರು ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ನಿರಂತರವಾಗಿ ಶಂಕರ್ ಮೊಬೈಲ್‌ನಿಂದ ಆತನ ಸ್ನೇಹಿತರಿಗೆ ತಾನು ಉತ್ತರ ಭಾರತದ ಪ್ರವಾಸಕ್ಕೆ ಬಂದಿರುವುದಾಗಿ ಕನ್ನಡದಲ್ಲಿ ಸಂದೇಶಗಳು ರವಾನೆಯಾಗಿದ್ದವು. ಇತ್ತ ನಳಿನಿ ಪೋಷಕರಿಗೂ ಸಹ ಆಕೆಯ ಮೊಬೈಲ್‌ನಿಂದ ಸಂದೇಶ ಬಂದಿದ್ದವು. ಅಲ್ಲದೆ ತಮ್ಮನ್ನು ಮಾವ ಉತ್ತರ ಭಾರತಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಅಜ್ಜಿಗೆ ಹೇಳು ಕಾಲ್ ಮಾಡಬೇಡ ಅಂತ. ನಮಗೆ ನೆಟ್‌ ವರ್ಕ್ ಸಿಗಲ್ಲ. ಅಲ್ಲದೆ ಮೊಬೈಲ್‌ಗಳನ್ನು ಅಫೀಸರ್‌ಗಳ ಬಳಿ ಇರುತ್ತದೆ ಎಂದು ಶಂಕರ್ ಪುತ್ರನಿಂದ ವಾಯ್ಸ್‌ ನೋಟ್ ಅನ್ನು ನಳಿನಿ ತಂದೆಗೆ ಕಳುಹಿಸಿದ್ದರು.

ಆದರೆ ತನ್ನ ಸ್ನೇಹಿತ ಶಂಕರ್‌ಗೆ ಕನ್ನಡದಲ್ಲಿ ಸುಲಿತವಾಗಿ ಟೈಪ್ ಮಾಡಲು ಬರುವುದಿಲ್ಲ. ಅದ್ಹೇಗೆ ಕನ್ನಡದಲ್ಲೇ ಆತ ಚಾಟ್ ಮಾಡಿದ್ದಾನೆ ಎಂದು ಮೃತ ಶಂಕರ್ ಸ್ನೇಹಿತರಿಗೆ ಶಂಕೆ ಮೂಡಿದೆ. ಈ ಅನುಮಾನದ ಮೇರೆಗೆ ನಳಿನಿ ಪೋಷಕರ ಮನೆಗೆ ತೆರಳಿ ಆತನ ಸ್ನೇಹಿತರು ವಿಚಾರಿಸಿದ್ದಾರೆ. ಆಗ ಅವರಿಗೂ ಸಹ ಸಂದೇಶ ಬಂದಿರುವುದು ಗೊತ್ತಾಗಿದೆ. ಆಗ ಸ್ನೇಹಿತರ ಗುಮಾನಿಗೆ ಹೆಚ್ಚಾಗಿದೆ. ಕೂಡಲೇ ಶ್ರೀರಾಮಪುರ ಠಾಣೆಗೆ ನ.2 ರಂದು ತಮ್ಮ ಮಗಳು ನಳಿನಿ, ಅಳಿಯ ಶಂಕರ್ ಹಾಗೂ 11 ವರ್ಷದ ಮೊಮ್ಮಗ ನಾಪತ್ತೆಯಾಗಿದ್ದಾರೆ ಎಂದು ಮೃತಳ ನಳಿನಿ ತಾಯಿ ದೂರು ನೀಡಿದರು.

ಒಂದೇ ನೆಟ್‌ವರ್ಕ್‌ನಲ್ಲಿ ಮೊಬೈಲ್‌ಗಳು ಸಂಪರ್ಕ:

ಈ ದೂರಿನ ಬಗ್ಗೆ ಪ್ರಾಥಮಿಕ ಹಂತದಲ್ಲಿ ಪೊಲೀಸರು ವಿಚಾರಿಸಿದಾಗ ಅನಾಹುತವಾಗಿರುವ ಸೂಚನೆ ಸಿಕ್ಕಿದೆ. ತಕ್ಷಣವೇ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ.ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಡಿಸಿಪಿ ಸಾರಥ್ಯದಲ್ಲಿ ನಾಪತ್ತೆ ಆದವರ ಪತ್ತೆಗೆ ತಂಡವನ್ನು ರಚಿಸಿ ಜಂಟಿ ಆಯುಕ್ತ ವಂಶಿಕೃಷ್ಣ ಕಾರ್ಯಾಚರಣೆಗೆ ಇಳಿಸಿದ್ದಾರೆ.

ರಾಜಾಜಿನಗರ ಠಾಣೆಗೆ ಮೊಕ್ಕಾಂ ಹೂಡಿ ಶೋಧ ಕಾರ್ಯಾಚರಣೆ ಉಸ್ತುವಾರಿಯನ್ನು ಅವರು ನಿರ್ವಹಿಸಿದ್ದಾರೆ. ಆಗ ತನ್ನ ಭಾವನ ಮನೆಗೆ ತೆರಳಿದವರು ನಿಗೂಢ‍ವಾಗಿ ಕಣ್ಮರೆಯಾಗಿದ್ದಾರೆ ಎಂದು ತಿಳಿದ ಪೊಲೀಸರು, ಕೂಡಲೇ ಇಂದುಶೇಖರ್ ಬಗ್ಗೆ ವಿಚಾರಿಸಿದಾಗ ಆತ ಸಹ ನಾಪತ್ತೆಯಾಗಿದ್ದ. ಬಳಿಕ ಶಂಕರ್ ಸೋದರ ಶಿವಕುಮಾರ್ ದಂಪತಿ, ತಾಯಿ ರೂಪಾವತಿ ಸಹ ಕಣ್ಮರೆಯಾಗಿರುವುದು ಗೊತ್ತಾಗಿದೆ. 2 ವಾರಗಳ ಅಂತರದಲ್ಲಿ 7 ಮಂದಿ ದಿಢೀರ್ ನಾಪತ್ತೆ ಬಗ್ಗೆ ಪೊಲೀಸರಿಗೆ ಶಂಕೆ ಮೂಡಿದೆ.

ಆಗ ಆ 7 ಮಂದಿಯ ಮೊಬೈಲ್‌ ಕರೆಗಳು ಹಾಗೂ ಇಂದುಶೇಖರ್ ಮೊಬೈಲ್ ಒಂದೆಡೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಟವರ್ ಲೋಕೆಶನ್‌ ಮೂಲಕ ಹಂತಕನ ಜಾಡು ಹಿಡಿದು ಪೊಲೀಸರು ಶೋಧನೆಗಿಳಿದಿದ್ದಾರೆ. ಆಗ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ತಮಿಳುನಾಡು ಸೇಲಂನಲ್ಲಿ ಸುತ್ತಾಡಿ ನ.3ರಂದು ಮಂಗಳವಾರ ನಸುಕಿನಲ್ಲಿ ಕಾರಿನಲ್ಲಿ ತನ್ನ ಮಗಳು ಹಾಗೂ ಭಾಮೈದನ ಪುತ್ರನ ಜತೆ ಇಂದುಶೇಖರ್ ಮರಳಿದ್ದಾನೆ.

ಆಗ ಹಲಸೂರು ಗೇಟ್ ಬಳಿ ಮೂತ್ರ ವಿಸರ್ಜನೆ ಸಲುವಾಗಿ ಆತ ಕಾರು ನಿಲ್ಲಿಸಿದ್ದಾನೆ. ಕಾರಿನಿಂದಿಳಿದ ಮೃತ ಶಂಕರ್ ಪುತ್ರ, ಮಾಸ್ಕ್ ತೆಗೆದು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಆಗ ಆತನ ಪತ್ತೆ ಹಚ್ಚಿದ ಪೊಲೀಸರು, ಆತನ ಪೋಷಕರ ಪೋಟೋ ತೋರಿಸಿ ಯಾರಿವರು ಎಂದಿದ್ದಾರೆ. ಆತ ಪೋಟೋ ಗುರುತು ಪತ್ತೆ ಹಚ್ಚಿದ ತಕ್ಷಣವೇ ಬಾಲಕನನ್ನು ರಕ್ಷಿಸಿದ ಪೊಲೀಸರು, ಅಲ್ಲೇ ಇದ್ದ ಇಂದುಶೇಖರ್ ಪುತ್ರಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಅಷ್ಟರಲ್ಲಿ ಕಾರು ತೆಗೆದುಕೊಂಡು ಇಂದು ಶೇಖರ್‌ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಆತನನ್ನು ಸುತ್ತುವರೆದು ಪೊಲೀಸರು ಬಲೆಗೆ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.

ಸಾಕ್ಷಿ ನುಡಿದ ಬಾಲಕ

ತನ್ನ ಮಾವನ ಮನೆಯಲ್ಲಿ ನಡೆದ ಪೈಶಾಚಿಕ ಕೃತ್ಯದ ಬಗ್ಗೆ ಪೊಲೀಸರ ಮುಂದೆ ಬಾಲಕ ವಿವರಿಸಿದ್ದಾನೆ. ಬಾಲಕನ ಮಾಹಿತಿ ಮೇರೆಗೆ ಇಂದುಶೇಖರ್ ಹಾಗೂ ಆತನ ಪುತ್ರಿಯನ್ನು ಪೊಲೀಸರು ಪ್ರಶ್ನಿಸಿದಾಗ ಹತ್ಯಾಕಾಂಡದ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ

ಸೋದರರ ಪ್ರತ್ಯೇಕ ವಾಸ

ಶ್ರೀರಾಮಪುರದಲ್ಲಿ ತಮ್ಮ ಕುಟುಂಬಗಳ ಜತೆ ಶಿವಕುಮಾರ್ ಹಾಗೂ ಶಂಕರ್ ಸೋದರರು ಪ್ರತ್ಯೇಕವಾಗಿ ವಾಸವಾಗಿದ್ದರು. ಮಾಗಡಿ ರಸ್ತೆಯ ಗ್ರಂಥಾಲಯದಲ್ಲಿ ಶಿವಕುಮಾರ್ ಹಾಗೂ ಸಣ್ಣ ಕೈಗಾರಿಕೆಯಲ್ಲಿ ಶಂಕರ್ ಕೆಲಸ ಮಾಡುತ್ತಿದ್ದರು. ಪ್ರತ್ಯೇಕವಾಗಿ ನೆಲೆಸಿದ್ದರಿಂದ ತನ್ನ ತಾಯಿ ರೂಪಾವತಿ ಹಾಗೂ ಸೋದರನ ಶಿವಕುಮಾರ್ ಕುಟುಂಬ ಕಣ್ಮರೆಯಾಗಿರುವ ವಿಚಾರವು ಶಂಕರ್‌ಗೆ ತಿಳಿದಿರಲಿಲ್ಲ. ಅಲ್ಲದೆ ಅಜ್ಜಿ ಹಾಗೂ ತಾಯಿ ತಮಿಳುನಾಡು ಪ್ರವಾಸಕ್ಕೆ ಹೋಗಿದ್ದಾರೆ ಎಂದು ಮಾವಂದಿರಿಗೆ ಸುನೀತಾ ಪುತ್ರಿ ಸುಳ್ಳು ಹೇಳಿ ನಂಬಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ