)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊದಲು ಕ್ಯಾಬ್ ಚಾಲಕನಾಗಿ ಆತ ಜೀವನ ಸಾಗಿಸುತ್ತಿದ್ದ. ಆದರೆ ಆಮೇಲೆ ಸ್ಥಳೀಯವಾಗಿ ಪುಂಡಾಟಿಕೆ ಶುರು ಮಾಡಿದ. ಆಗ ‘ಠಾಣಾ ವರದಿ’ ಎಂಬ ಹೆಸರಿನ ಪತ್ರಿಕೆ ಹಾಗೂ ಯೂಟ್ಯೂಬ್ ಚಾನೆಲ್ ಶುರು ಮಾಡಿ ದಿಢೀರನೇ ಪತ್ರಕರ್ತನ ವೇಷವನ್ನು ಧರಿಸಿದ. ನೆರೆಹೊರೆಯ ಅಂಗಡಿ ಮಾಲೀಕರಿಗೆ ಸಣ್ಣಪುಟ್ಟ ವಿಷಯಗಳಿಗೆ ಕಿರಿಕಿರಿ ಮಾಡುತ್ತಿದ್ದ. ಆ ಅಂಗಡಿಗಳ ಮುಂದೆ ವಾಹನ ನಿಲುಗಡೆಗೆ ಕೂಡ ಇಂದುಶೇಖರ್ ಅವಕಾಶ ಕೊಡುತ್ತಿರಲಿಲ್ಲ. ಆತನ ಕಿರುಕುಳ ಸಹಿಸಲಾಗುತ್ತಿರಲಿಲ್ಲ. ಯಾರಾದರು ತನ್ನ ವಿರುದ್ಧ ಮಾತನಾಡಿದರೆ ಪತ್ರಿಕೆಯಲ್ಲಿ ಸುದ್ದಿ ಮಾಡುವುದಾಗಿ ಬೆದರಿಸುತ್ತಿದ್ದ. ಈತನ ಹಿಂಸೆ ಸಹಿಸಲಾರದೆ ನೆರೆಹೊರೆ ಕಟ್ಟಡಗಳಲ್ಲಿ ಅಂಗಡಿಗಳನ್ನು ಕೆಲವರು ಮುಚ್ಚಿದ್ದರು ಎಂದು ಸ್ಥಳೀಯರು ದೂರಿದ್ದಾರೆ.
ಮನೆ ಮಾಲಿಕನಿಗೆ ವಿರುದ್ಧವೇ ಕೇಸ್:ಮದುವೆ ಬಳಿಕ ರಾಜಾಜಿನಗರದ ಬಾಷ್ಯ ವೃತ್ತ ಸಮೀಪದ ಎರಡು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಇಂದುಶೇಖರ್ ವಾಸವಾಗಿದ್ದ. ಆದರೆ ಆ ಮನೆ ಮಾಲಿಕರ ಸಹಿಯನ್ನೇ ನಕಲಿಯಾಗಿ ಬಳಸಿ ಕೊನೆಗೆ ಆ ಕಟ್ಟಡದ ತನಗೆ ಸೇರಿದ್ದು ಎಂದು ಆತ ವಾದಿಸುತ್ತಿದ್ದ. ಈ ಸಂಬಂಧ ನ್ಯಾಯಾಲಯದಲ್ಲಿ ಮಾಲಿಕರ ವಿರುದ್ಧ ಭೂ ವ್ಯಾಜ್ಯ ಹೂಡಿದ್ದ. ಕಳೆದ 18 ವರ್ಷಗಳಿಂದ ನ್ಯಾಯಾಲಯದಲ್ಲಿ ಕಟ್ಟಡದ ಮಾಲಿಕತ್ವದ ವಿವಾದದ ವಿಚಾರಣೆ ನಡೆದಿದೆ. ಇನ್ನು ಈ ಕಟ್ಟಡದಲ್ಲಿ ಬಾಡಿಗೆದಾರರಿಗೆ ಇಂದು ಕಿರುಕುಳ ಕೊಟ್ಟು ಓಡಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಂದುಶೇಖರ್ ಅಪರಾಧ ಹಿನ್ನಲೆಯುಳ್ಳವನಾಗಿದ್ದು, ಆತನ ಮೇಲೆ ರಾಜಾಜಿನಗರ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ತನ್ನ ಅಪರಾಧ ಹಿನ್ನಲೆ ಮುಚ್ಚಿಟ್ಟು ಆತ ಸಾಮಾಜಿಕ ಕಾರ್ಯಕರ್ತನಂತೆ ಬಿಂಬಿಸಿಕೊಳ್ಳುತ್ತಿದ್ದ ಎಂದು ಮೂಲಗಳು ಹೇಳಿವೆ.