ಜೈನ ಮುನಿಗಳ ಹತ್ಯೆ: 28ಕ್ಕೆ ಸಮುದಾಯದ ಪ್ರಮುಖರ ಸಭೆ

KannadaprabhaNewsNetwork |  
Published : Jan 24, 2024, 02:05 AM IST
ಜೈನ ಮುನಿಗಳ ಹತ್ಯೆ : ಜ.28 ರಂದು ಸಮುದಾಯದ ಪ್ರಮುಖರ ಸಭೆ | Kannada Prabha

ಸಾರಾಂಶ

15 ತಿಂಗಳೊಳಗೆ 4 ಜೈನ ಮುನಿಗಳ ಹತ್ಯೆಯಾಗಿದ್ದು, ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ಜ.28 ರಂದು ಬೆಳಗ್ಗೆ 11 ಗಂಟೆಗೆ ಸಮುದಾಯದ ಪ್ರಮುಖರ ಸಭೆ ಕರೆಯಲಾಗಿದೆ ಎಂದು ರಾಷ್ಟ್ರಸಂತ 108 ಗುಣಧರ ನಂದಿ ಮಹಾರಾಜರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಜೈನ ಮುನಿಗಳ ಮತ್ತು ಸಂತರ ಹತ್ಯೆಯ ಸಮಸ್ಯೆ ಕುರಿತು ಚರ್ಚಿಸಲು ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ಜ.28 ರಂದು ಬೆಳಗ್ಗೆ 11 ಗಂಟೆಗೆ ಸಮುದಾಯದ ಪ್ರಮುಖರ ಸಭೆ ಕರೆಯಲಾಗಿದೆ ಎಂದು ರಾಷ್ಟ್ರಸಂತ 108 ಗುಣಧರ ನಂದಿ ಮಹಾರಾಜರು (ವರೂರ) ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುನಿಗಳು, 15 ತಿಂಗಳೊಳಗೆ 4 ಜೈನ ಮುನಿಗಳ ಹತ್ಯೆಯಾಗಿದೆ. ಮೂರು ದಿನದ ಹಿಂದೆ ರಾಜಸ್ಥಾನದ ಪಾಲಿ ಎಂಬ ಗ್ರಾಮದಲ್ಲಿ ಟ್ರಕ್ ಮೂಲಕ ನೇರ ಆಕ್ರಮಣ ಮಾಡುವ ಘಟನೆ ನಡೆದಿದೆ. ಇವೆಲ್ಲವನ್ನು ನೋಡಿದರೆ, ಸರ್ಕಾರಗಳು ಜೈನ ಸಾಧು ಸಂತರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿವೆ ಎಂದು ಎನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಸತಿಗೆ ಸೌಲಭ್ಯ ಬೇಕು:

ಜೈನ ಮುನಿಗಳು ಕಾಲ್ನಡಿಗೆಯಲ್ಲಿ ಪಯಣ ಬೆಳೆಸುವರು. ರಾತ್ರಿ ವೇಳೆ ಅವರಿಗೆ ತಂಗಲು ಜಾಗ ಬೇಕು. ಅದಕ್ಕಾಗಿ ಸಂಜೆ ಹೊತ್ತಿಗೆ ಯಾವ ಊರು ತಲುಪುವರೊ ಆ ಊರಿನ ಶಾಲೆಯಲ್ಲಿ ತಂಗಲು ಸ್ಥಳಾವಕಾಶ ಮಾಡಿಕೊಡುವಂತೆ ಸರ್ಕಾರ ಶಿಕ್ಷಣ ಇಲಾಖೆಗೆ ನಿರ್ದೇಶಿಸಬೇಕು ಎಂದು ಆಗ್ರಹಿಸಿದರು. ಕೆಲವೊಂದು ಬಾರಿ ತಂಗಲು ಜಾಗ ಸಿಗದೆ ಇದ್ದಾಗ 28 ಮುನಿಗಳು ರಸ್ತೆ ಬದಿ ಮಲಗಿದ್ದನ್ನು ಸ್ಮರಿಸಿದರು. ತಾವೂ ಸಹ ಕೆರೆ ದಂಡೆಯ ಮೇಲೆ ಮಲಗಿರುವುದಾಗಿ ಹೇಳಿ ಅಸಹಾಯಕತೆ ವ್ಯಕ್ತಪಡಿಸಿದರು.

ಬೇರೆ ಸಮುದಾಯಕ್ಕೆ ಹೇಗೆ ಮಂಡಳಿ ಅಥವಾ ನಿಗಮ ರಚಿಸುವಿರೊ ಹಾಗೆಯೇ ಜೈನ ಸಮುದಾಯಕ್ಕೆ ನಿಗಮ ಅಥವಾ ಮಂಡಳಿ ರಚಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರವನ್ನು ಆಗ್ರಹಿಸಿದರು.

ಆರು ತಿಂಗಳ ಹಿಂದೆ ಸರ್ಕಾರಕ್ಕೆ ಭೇಟಿಯಾಗಿ ತಮ್ಮ 4 ಬೇಡಿಕೆ ಈಡೇರಿಸುವಂತೆ ಹೇಳಿದ್ದೆವು. ಅವುಗಳಲ್ಲಿ 2 ಈಡೇರಿವೆ. ಇನ್ನೂ ಎರಡು ಈಡೇರಿಸಬೇಕಾಗಿದೆ ಎಂದ ಅವರು ತಮ್ಮ ಮನವಿಗೆ ಸ್ಪಂದಿಸದಿದ್ದರೆ, ಫೆ.8 ರಂದು ಉತ್ತರ ಕರ್ನಾಟಕದ ಜೈನರ ಬೃಹತ್ ಸಮಾವೇಶ ಶಮನೇವಾಡಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಸರ್ಕಾರ ಜೈನರ ಅಪೇಕ್ಷೆ ಈಡೇರಿಸದಿದ್ದರೆ ಸಮುದಾಯದ ನಿರ್ಧಾರದಂತೆ ಕ್ರಮ ಕೈಗೊಳ್ಳಬೇಕಾಗುವುದು ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ವೇಳೆ ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಮುಖಂಡರಾದ ಸಂಜಯ ನಿಲಜಗಿ, ಪ್ರಜ್ವಲ್ ನಿಲಜಗಿ, ಸಿ.ಪಿ.ಪಾಟೀಲ್, ರೋಹಿತ್ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಅಶೋಕ ಪಾಟೀಲ್, ಮಲ್ಲಪ್ಪ ಬಿಸಿರೊಟ್ಟಿ ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ