ಕೆ. ವಿ. ಮನು
ಕನ್ನಡಪ್ರಭ ವಾರ್ತೆ ಕನಕಪುರಕರ್ನಾಟಕದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಅಚ್ಚರಿಯ ಫಲಿತಾಂಶವನ್ನು ನೀಡಿದ್ದು, ಕ್ಷೇತ್ರದಲ್ಲಿ ಎರಡನೇ ಬಾರಿ ಕಮಲ ಅರಳಿದೆ. ಡಾ. ಸಿ. ಎನ್ ಮಂಜುನಾಥ್ ಕಾಂಗ್ರೆಸ್ ನ ಡಿ.ಕೆ ಸುರೇಶ್ ವಿರುದ್ಧ ಭಾರೀ ಗೆಲುವು ಸಾಧಿಸಿದ್ದು, ಜನ ಬಲದ ಮುಂದೆ ಹಣ ಬಲಕ್ಕೆ ಸೋಲಾಗಿದೆ ಎಂದು ತಾಲೂಕಿನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷದ ಅತಿಯಾದ ಆತ್ಮ ವಿಶ್ವಾಸ ಹಾಗೂ ಪಕ್ಷದ ಕಾರ್ಯಕರ್ತರು,ಮುಖಂಡರ ಅಹಂಕಾರದ ಮಾತುಗಳೂ ಕಾರಣ ಎನ್ನಲಾಗುತ್ತಿದೆ.
1985ರಲ್ಲಿ ಮೊದಲ ಬಾರಿಗೆ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಎಚ್. ಡಿ. ದೇವೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಮುಖಾಮುಖಿಯಾಗಿ ಅಂದು ದೇವೇಗೌಡರು ಗೆಲುವನ್ನು ದಾಖಲಿಸಿದ್ದರು. 1999 ರಲ್ಲಿ ಪುನಃ ಸಾತನೂರು ಕ್ಷೇತ್ರದಿಂದ ಡಿಕೆಶಿ ಹಾಗೂ ಎಚ್ ಡಿಕೆ ನಡುವಿನ ಕದನದಲ್ಲಿ ಡಿಕೆಶಿ ಮೇಲುಗೈ ಸಾಧಿಸಿದ್ದರು, 2002 ರಲ್ಲಿ ನಡೆದ ಕನಕಪುರ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಕೆಶಿ ವಿರುದ್ಧ ಎಚ್ ಡಿಡಿ ಗೆಲುವು ಕಂಡಿದ್ದರು, 2013 ರ ಲೋಕಸಭೆ ಚುನಾವಣೆಯಲ್ಲಿ ಅನಿತಾ ಕುಮಾರ ಸ್ವಾಮಿ ವಿರುದ್ಧ ಡಿಕೆ ಸುರೇಶ್ ಗೆಲುವು ಸಾಧಿಸುವ ಮೂಲಕ 2 ಕುಟುಂಬಗಳು ಸಮಬಲದ ಹೋರಾಟವನ್ನು ನಡೆಸಿದ್ದವು.ಆದರೆ, ಈ ಲೋಕಸಭೆ ಕದನದಲ್ಲಿ ತಾಲೂಕಿನ ಮತದಾರರು ಡಿ. ಕೆ. ಸುರೇಶ್ ಎದುರಾಳಿಯಾಗಿದ್ದ ಡಾ. ಸಿ.ಎನ್. ಮಂಜುನಾಥ್ ರವರಿಗೆ 85,000 ಸಾವಿರಕ್ಕೂ ಅಧಿಕ ಮತಗಳನ್ನು ನೀಡಿ, ಡಿಕೆ ಸುರೇಶ್ ಕೇವಲ 25,000 ಸಾವಿರ ಮತಗಳ ಲೀಡ್ ಗಳಿಸುವಂತೆ ಮತ ಚಲಾವಣೆಮಾಡಿದ್ದರು.
ಮೈತ್ರಿ ಎಫೆಕ್ಟ್!:2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಒಂದಾಗಿ ಅಂದು ಬಿಜೆಪಿ ಎದುರಾಳಿ ಅಶ್ವತ್ಥ ನಾರಾಯಣ್‌ಗೌಡ ವಿರುದ್ಧ ಪ್ರಬಲ ಪೈಪೋಟಿ ನೀಡಿ ಒಟ್ಟು 2,07,229 ಮತಗಳ ಅಂತರದಿಂದಷ್ಟೇ ಸುರೇಶ್ ಗೆಲುವು ಸಾಧಿಸಿದ್ದರು, ಆದರೆ ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ 2,69,647 ಲಕ್ಷ ಮತಗಳ ಅಂತರದಿಂದ ಡಿ.ಕೆ. ಸುರೇಶ್ ಅವರನ್ನು ಹೀನಾಯವಾಗಿ ಸೋಲಿಸಿರುವುದು ಮತ್ತೊಂದು ವಿಶೇಷವಾಗಿದೆ,
ಡಾ ಸಿ.ಎನ್ ಮಂಜುನಾಥ್ ಗೆಲುವಿಗೆ ಕಾರಣಗಳಿವು:ದೇಶದಲ್ಲಿ ಇದ್ದಂತಹ ಮೋದಿ ಅಲೆ ಹಾಗೂ ಜೆಡಿಎಸ್ ಬಿಜೆಪಿ ಪಕ್ಷಗಳ ಮೈತ್ರಿ ಯಶಸ್ಸು, ಡಾ. ಮಂಜುನಾಥ್ ರವರಿಗಿದ್ದ ವೈಯಕ್ತಿಕ ವರ್ಚಸ್ಸು ಹಾಗೂ ಅವರು ಮಾಡಿರುವ ಸೇವೆ, ಸ್ಥಳೀಯ ಮಟ್ಟದಲ್ಲಿ ಇದ್ದ ವೈಮನಸ್ಸು ಮರೆತು ಎರಡು ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಒಟ್ಟಾಗಿ ಹಗಲಿರುಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ಬಿಜೆಪಿ ನಾಯಕರು ಪ್ರಚಾರ
ನಡೆಸಿ ಎರಡು ಪಕ್ಷದ ಮುಖಂಡರು ಹಾಗು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದು, ಡಿಕೆ ಸಹೋದರರು ಹಾಗೂ ಅವರ ಹಿಂಬಾಲಕರ ದರ್ಪ, ದೌರ್ಜನ್ಯ ಹಾಗೂ ಅಹಂಕಾರದ ಮಾತುಗಳ ವಿರುದ್ಧ ತಾಲೂಕಿನಲ್ಲಿ ಜನಾಭಿಪ್ರಾಯ ಮೂಡಿಸುವಲ್ಲಿ ಯಶಸ್ಸು ಕಂಡಿದ್ದು, ಈ ಎಲ್ಲಾ ಕಾರಣಗಳಿಂದ ಡಾ.ಸಿ.ಎನ್.ಮಂಜುನಾಥ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.