ಲೇಖನ: ಭುವನ ಪ್ರಸಾದ ಹೆಗ್ಡೆ1915ನೇ ಇಸವಿಯ ಜೂನ್ 8ರಂದು ಜನಿಸಿ, ತಮ್ಮ 9ನೇ ವರ್ಷ ಪ್ರಾಯದಲ್ಲಿ ಪ್ರಥಮ ಕವಿತೆ ರಚಿಸಿದ ಕಯ್ಯಾರ ಕಿಞ್ಞಣ್ಣ ರೈ ಅವರದು ವಯಸ್ಸಿಗೆ ಮೀರಿದ ಬಾಲಪ್ರತಿಭೆ.
ಕವಿಗೋಷ್ಠಿಯ ಅಧ್ಯಕ್ಷರಾಗಿದ್ದ ವರಕವಿ ಬೇಂದ್ರೆಯವರು ಇದನ್ನು ಮೆಚ್ಚಿ, ಕಯ್ಯಾರರಿಗೆ ಇನ್ನೊಂದು ಕವಿತೆ ಓದಲು ಸೂಚಿಸಿದರು. ಈ ಘಟನೆಯನ್ನು ಕಯ್ಯಾರರು ಸದಾ ಸಂತೋಷ ಮತ್ತು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತಿದ್ದರು. ರಾಮಾಯಣದಲ್ಲಿ ತೀರಾ ನಿರ್ಲಕ್ಷ್ಯಕ್ಕೊಳಗಾಗಿದ್ದ ಊರ್ಮಿಳೆಯ ಕುರಿತು ಏನೂ ಅನುಕಂಪವನ್ನು ವ್ಯಕ್ತಪಡಿಸದ ವಾಲ್ಮೀಕಿಯನ್ನು ಕವಿ ಆಕ್ಷೇಪಿಸುತ್ತಾರೆ. ಈ ಸಾಲುಗಳು ಕನ್ನಡ ಕಾವ್ಯಲೋಕದಲ್ಲಿ ಸಂಚಲನ ಮೂಡಿಸಿದುವು.ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನ ಪದವಿ ಶಿಕ್ಷಣ ಕಾಲದಲ್ಲಿ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಲೇಖನಗಳಿರುವ, ಕನ್ನಡದಲ್ಲಿ ''''''''ನಗು'''''''' ಮತ್ತು ಸಂಸ್ಕೃತದಲ್ಲಿ ''''''''ವಿಕಾಸ'''''''' ಎಂಬ ಕೈಬರಹದ ಮಾಸ ಪತ್ರಿಕೆಗಳನ್ನು ಸಂಪಾದಕರಾಗಿ ಕಯ್ಯಾರರು ಪ್ರಕಟಿಸುತ್ತಿದ್ದರು. ಅಮ್ಮೆಂಬಳ ಶಂಕರನಾರಾಯಣ ನಾವಡರು ಆಗ ಕಯ್ಯಾರರ ಸಹವರ್ತಿಯಾಗಿದ್ದರು.
1940ನೇ ಇಸವಿಯಲ್ಲಿ, ತನ್ನ 25ನೇ ವಯಸ್ಸಿನಲ್ಲಿ, ''''''''ಕನ್ನಡ ಪದ್ಯ ಮಂಜರಿ'''''''' ಭಾಗ ಒಂದು ಮತ್ತು ಎರಡನ್ನು ಸಚಿತ್ರವಾಗಿ ಪ್ರಕಟಿಸಿದರು. ಇದರ ಹಲವು ಪದ್ಯಗಳನ್ನು ಕಯ್ಯಾರರೇ ಲೇಖಕರಾಗಿರುವ, ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಪಠ್ಯವಾಗಿದ್ದ ನವೋದಯ ಕನ್ನಡ ವಾಚನಮಾಲೆಯಲ್ಲಿ ಅಳವಡಿಸಲಾಗಿತ್ತು. ಈ ಪುಸ್ತಕಗಳು ದಕ್ಷಿಣ ಕನ್ನಡ, ಬಳ್ಳಾರಿ, ಕೊಡಗು ಜಿಲ್ಲೆಗಳಲ್ಲಿ ಜನಪ್ರಿಯ ಪಠ್ಯ ಪುಸ್ತಕಗಳಾಗಿದ್ದುವು.“ಪಠ್ಯ ಪುಸ್ತಕಗಳ ರಾಷ್ಟ್ರೀಕರಣದ ನಂತರವೂ ಕರ್ನಾಟಕ, ಕೇರಳ, ಮಹಾ ರಾಷ್ಟ್ರ ಸರ್ಕಾರದವರು ತಮ್ಮ ಕನ್ನಡ ಪಠ್ಯಗಳಲ್ಲಿ ಪದ್ಯ ಮಂಜರಿಯ ಹಾಡುಗಳನ್ನು ಆರಿಸಿಕೊಳ್ಳುತ್ತಿದ್ದರು. ಕನ್ನಡದಲ್ಲಿ ಶಿಶು ಸಾಹಿತ್ಯವಿರುವ ತನಕ ಕಯ್ಯಾರರ ಶಿಶುಗೀತೆಗಳು ಉಳಿದೇ ಉಳಿಯುತ್ತವೆ. ಶಿಶು ಗೀತೆಗಳ ರಚನೆಯ ಕಾಲಕ್ಕೆ ಕವಿ ಮಗುವಾಗಬೇಕು. ಮಗು ಮನಸ್ಸಿನ ಚಿಂತನೆಯಿದ್ದರೆ ಮಕ್ಕಳ ಸಾಹಿತ್ಯ ನಿರ್ಮಾಣವಾಗಬಲ್ಲುದು. ಹಾರುತ ಕುಣಿಯುತ, ಕುಣಿಯುತ ಹಾರುವ ಶಿಶುಗೀತೆಗಳನ್ನು ಕಯ್ಯಾರರು ರಚಿಸಿದ್ದಾರೆ. ಲಾಲಿತ್ಯ ಪೂರ್ಣವಾದ ಮತ್ತು ಗೇಯತೆ, ಸರಳತೆ, ನೀತಿ ಪಾಠಗಳಿಂದ ಈ ಪದ್ಯಗಳು ಜನ ಮೆಚ್ಚುಗೆಗೆ ಪಾತ್ರವಾಗಿದ್ದುವು " ಎಂದು ಹಿರಿಯ ಕವಿ ಅಧ್ಯಾಪಕ ಅಂಬಾತನಯ ಮುದ್ರಾಡಿ ವಿಶ್ಲೇಷಿಸುತ್ತಾರೆ.
2015ನೇ ಇಸವಿಯಲ್ಲಿ ಮಣಿಪಾಲದ ಮಾಹೆಯ ಯುನಿವರ್ಸಲ್ ಪ್ರೆಸ್ ಸಾಂರ್ದಭಿಕ ಚಿತ್ರಗಳನ್ನು ಅಳವಡಿಸಿ, ಈ ಪುಸ್ತಕವನ್ನು ಮರುಮುದ್ರಣ ಮಾಡಿರುವುದು, ಪ್ರಥಮ ಪ್ರಕಟಣೆಯ 75 ವರ್ಷಗಳ ನಂತರವೂ ಈ ಪುಸ್ತಕದ ಬೇಡಿಕೆಗೆ ಹಿಡಿದ ಕೈಗನ್ನಡಿ.
‘ಕುಂಟ ಮತ್ತು ಕುರುಡ’ ಎಂಬ ಪದ್ಯ ನಡೆಯಲಾರದ ಕುಂಟನನ್ನು ಕಣ್ಣು ಕಾಣದ ಕುರುಡ ಹೆಗಲ ಮೇಲೇರಿಸಿಕೊಂಡು ಸಹಕಾರದಿಂದ ಜೀವನ ನಡೆಸಲು ಸಾಧ್ಯವಿದೆ ಎಂಬ ಸತ್ಯವನ್ನು ತಿಳಿಸುತ್ತದೆ.“ಕಾ ಕಾ ಕಾ ಕಾ ಪದ ಹಾಡಕ್ಕಾ” ಎನ್ನುವ ಗೀತೆ ಮೋಸಗಾರ ನರಿಯ ಹೊಗಳಿಕೆಗೆ ಮರುಳಾಗಿ ಕಾಗೆ ತನ್ನ ಬಾಯಲ್ಲಿದ್ದ ಆಹಾರವನ್ನು ಕಳೆದುಕೊಂಡ ಪರಿಯನ್ನು ತಿಳಿಸುತ್ತದೆ. ನರಿ ಬುದ್ದಿಯ ಜನರ ಹೊಗಳ ಮಾತಿಗೆ ಉಬ್ಬಿ ತಮ್ಮದೆಲ್ಲವನ್ನು ಕಳಕೊಳ್ಳಬಾರದೆಂಬ ನೀತಿ ಬೋಧೆ ಇದರಲ್ಲಿ ಅಡಗಿದೆ.ಭೂತಾಳ ಪಾಂಡ್ಯ ಎನ್ನುವ ಕಥನ ಕಾವ್ಯದಲ್ಲಿ ತುಳುನಾಡಿನ ಜೀವನ ಚಿತ್ರಣವಿದೆ. ಸೋದರ ಸೋದರಿಯರ ಬಾಂಧವ್ಯದ ಕುರಿತ ಕವಿತೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಪನ್ನಾದಾಸಿ ಕವಿತೆಯಲ್ಲಿ ಸ್ವಾಮಿನಿಷ್ಠ ದಾಸಿಯು ತನ್ನ ಸ್ವಂತ ಮಗುವನ್ನು ಕಟುಕನಿಗಿತ್ತು ರಾಜನ ಮಗನನ್ನು ಬದುಕಿಸಿದ ತ್ಯಾಗಮಯಿಯ ಚಿತ್ರಣವಿದೆ.ಕಯ್ಯಾರರ “ಏರಲಿ ಹಾರಲಿ ನಮ್ಮಿಧ್ವಜವು”, ಮತ್ತು “ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ” ಎಂಬ ಧ್ವಜಗೀತೆಗಳು ಮಕ್ಕಳಿಗೆ ದೇಶಪ್ರೇಮದ ಪಾಠವನ್ನು ಹೇಳುತ್ತವೆ.
ಕರ್ಣನಿಗೆ ಕೌರವನ ಪರವಾಗಿ ಹೋರಾಡಬೇಕಾಗಿದ್ದರೂ ಪಾಂಡವರನ್ನು ಕಾಪಾಡಬೇಕಾದ ಅನಿವಾರ್ಯತೆಯನ್ನು ಕುಂತಿಯ ಮಾತಿನ ಮೂಲಕ ಕಯ್ಯಾರರು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ.“ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡುತೊಟ್ಟ ಶರವಂ ಮರಳಿ ಮರೆತು ಬಿಡುನಿನಗಕ್ಕೆ ಮಂಗಳಂ”ಎಂಬ ಸ್ವರಚಿತ ಕವನದ ಭಾವುಕ ಸನ್ನಿವೇಶವನ್ನು ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗ ಕಯ್ಯಾರರು ಗದ್ಗದಿತರಾಗಿ ಕಣ್ಣಂಚಿನಿಂದ ನೀರು ಹನಿಯುತ್ತಿತ್ತು ಎಂದು ಅವರ ಶಿಷ್ಯೆ ನಿವೃತ್ತ ಕನ್ನಡ ಪ್ರಾಧ್ಯಾಪಿಕೆ ಡಾ| ಯು ಮಹೇಶ್ವರಿ ನೆನಪಿಸುತ್ತಾರೆ. “ಮಕ್ಕಳಿಗೆ ಪಾಠ ಹೇಳುವುದರ ಜೊತೆಗೆ ಅವರ ವ್ಯಕ್ತಿತ್ವವನ್ನು ಬೆಳೆಸುವ ದೊಡ್ಡ ಗುಣ ಕಯ್ಯಾರರದ್ದು” ಎಂದು ತುಳು ಅಕಾಡೆಮಿಯ ಮಾಜಿ ಸದಸ್ಯೆ ಲೇಖಕಿ ರೂಪಕಲಾ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಕಯ್ಯಾರರ ಈ ಎಲ್ಲಾ ಸಾಧನೆಗಳ ಹೊರತಾಗಿಯೂ ಅವರು ವಿನಮ್ರತೆಯಿಂದ ಇಂತು ಆತ್ಮನಿವೇದನೆ ಮಾಡಿಕೊಂಡಿದ್ದಾರೆ. “ಕನ್ನಡದ ಈ ಹಿರಿಯ ಪಂಕ್ತಿಯಲ್ಲಿ ನಾನು ಅತ್ಯಂತ ಕಿರಿಯನು. ಹೆಬ್ಬೆರಳು, ತೋರು ಬೆರಳು, ನಡು ಬೆರಳುಗಳ ಸಾಲಿನಲ್ಲಿ ಕೇವಲ ಕಿರು ಬೆರಳಿನಂತಿರುವವನು. ಬದುಕಿನುದ್ದಕ್ಕೂ ನಾಡು ನುಡಿಗಳ ಪ್ರೇಮದ ಪುಣ್ಯಭಾರವನ್ನು ಹರಕೆಯ ಹೊರೆಯನ್ನು ಹೊತ್ತುಕೊಂಡು ನಡೆಯುತ್ತಾ ಬಂದಿದ್ದೇನೆ. ಮುಂದೆ ಒಂದು ಸುದಿನ ಸೂರ್ಯೋದಯದಲ್ಲಿ ಕನ್ನಡ ತಾಯಿಯ ಅಡಿಗಳಿಗೆ ಮುಡಿ ಮುಟ್ಟಿಸಿ ಹರಕೆಯ ಹೊರೆ ಅರ್ಪಿಸಿ ನನ್ನ ಪಾಲಿನ ಋಣದ ಭಾರವನ್ನು ಕೈಲಾದಷ್ಟು ಇಳಿಸಿ ಜೀವನದಲ್ಲಿ ಸಾರ್ಥಕ್ಯ ಪಡೆಯಲು ಹಾರೈಸುತ್ತೇನೆ. ಅದಕ್ಕಿಂತ ಹೆಚ್ಚಿನ ಭಾಗ್ಯ ಬೇರೇನಿದೆ?”ಕಯ್ಯಾರರು ನಿಸ್ಪೃಹರು, ರಾಷ್ಟ್ರಪ್ರಶಸ್ತಿ ಪುರಸ್ಕೃತರು, 3 ಅವಧಿಗೆ ಪಂಚಾಯತ್ ಅಧ್ಯಕ್ಷರು, ಆ ಅವಧಿಯಲ್ಲಿ ರಾಜ್ಯದ ಅತ್ಯುತ್ತಮ ಪಂಚಾಯತ್ ಪ್ರಶಸ್ತಿಗೆ ಭಾಜನರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ ಅವರಿಗೆ ಗೌರವ ಪ್ರಶಸ್ತಿಗಳು ಬಹಳ ವಿಳಂಬವಾಗಿ ದೊರೆತುವು.
ಸದಾ ಶತಮಾನದ ಬದುಕನ್ನು ಹಾರೈಸುತ್ತಿದ್ದ ಅವರು 100 ವರ್ಷ, 2 ತಿಂಗಳು 1 ದಿನದ ಪರಿಪೂರ್ಣ ಜೀವನವನ್ನು ಪೂರೈಸಿ 2015ನೇ ಇಸವಿ ಆಗಸ್ಟ್ 9ರಂದು ಕಾವ್ಯಲೀನರಾದರು. ಅವರ ಜೀವಮಾನ ಸಾಧನೆಗಳನ್ನು ನಿರಂತರವಾಗಿ ಕಾಪಿಡುವ ಕಾರ್ಯ ನಡೆದಿದೆ. ಬದಿಯಡ್ಕದಲ್ಲಿ ಅವರ ಮನೆಗೆ ಹೋಗುವ ರಸ್ತೆಗೆ ಅವರ ಹೆಸರನ್ನಿಡಲಾಗಿದೆ. ಮೂಡಬಿದ್ರೆಯಲ್ಲಿ ಮೋಹನ ಆಳ್ವರು ಅವರಿಂದಲೇ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಕಯ್ಯಾರರ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಬದಿಯಡ್ಕದಲ್ಲಿ ಅವರ ಹೆಸರಿನ ಸಂಶೋಧನ ಕಟ್ಟಡದ ಕಾರ್ಯ ಪೂರ್ಣವಾಗುತ್ತಿದೆ. ಈ ಎಲ್ಲಾ ಕಾರ್ಯಗಳಿಂದಾಗಿ ಕಯ್ಯಾರರ ಹೆಸರು ಅಜರಾಮರವಾಗಿರುತ್ತದೆ.