ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಿನ್ನಿಗೋಳಿ ಬಸ್ ನಿಲ್ದಾಣ ಸಮೀಪದ ಬಿತ್ತುಲ್ ಪ್ರದೇಶದಲ್ಲಿ ಮಳೆ ನೀರು ಹರಿಯುವ ತೋಡಿನಲ್ಲಿ ಕೊಳಚೆ ನೀರು ಹರಿದು ಬರುತ್ತಿದ್ದು ಇದರಿಂದ ಸ್ಥಳೀಯ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.ಕಿನ್ನಿಗೋಳಿಯು ಕೆಲವು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದ್ದು ಅಭಿವೃದ್ದಿ ಹೊಂದುತ್ತಿರುವ ಕಿನ್ನಿಗೋಳಿಯಲ್ಲಿ ಹೆಚ್ಚಿನ ವಾಣಿಜ್ಯ ಸಂಕೀರ್ಣಗಳು,ವ ಸತಿ ಸಂಕೀರ್ಣಗಳು ನಿರ್ಮಾಣವಾಗಿದೆ. ಆದರೆ ಅದಕ್ಕೆ ಪೂರಕವಾಗಿ ಒಳ ಚರಂಡಿ ವ್ಯವಸ್ಥೆ ಆಗಿಲ್ಲ. ಹೊಟೇಲ್, ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ರಸ್ತೆ ಬದಿಯ ಚರಂಡಿಗಳಲ್ಲಿ ಹರಿದು ಹೋಗುತ್ತಿದೆ.
ಕಿನ್ನಿಗೋಳಿ ಪೇಟೆಯ ಅಂಗಡಿಗಳು, ಫ್ಲ್ಯಾಟ್‌ಗಳು, ಹೋಟೆಲ್, ಬಾರ್‌ಗಳ ಮಲತ್ಯಾಜ್ಯ ನೀರು, ಡ್ರೈನೇಜ್ ನೀರನ್ನು ಸಂಸ್ಕರಿಸದೆ, ಮಳೆ ನೀರು ಹಾದು ಹೋಗುವ ಒಳಚರಂಡಿಗೆ ಬಿಡಲಾಗುತ್ತಿದೆ. ಮಳೆ ನೀರು ಹಾದುಹೋಗುವ ತೋಡಿನಲ್ಲಿ ಈ ತ್ಯಾಜ್ಯ ನೀರು ಹರಿದು ಹೋಗುತ್ತಿದ್ದು, ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಾವಿಗಳಿಗೆ ಈ ಕೊಳಚೆ ನೀರು ಸೇರುತ್ತಿದೆ. ಹಲವಾರು ಸಮಯದಿಂದ ಇಲ್ಲಿ ಮಲ ತ್ಯಾಜ್ಯ ನೀರು ಹರಿಯುತ್ತಿದ್ದರೂ, ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪೂರಕ ಸ್ಪಂದನೆ ಸಿಕ್ಕಿಲ್ಲ. ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸದ ಕಾರಣ ಸಮಸ್ಯೆಯಾಗಿ ಉಳಿದಿದೆ.ಈ ಭಾಗದಲ್ಲಿ ಕೊಳಚೆ ನೀರು ಸಂಸ್ಕರಿಸಲು ಯಂತ್ರಗಳನ್ನು ಅಳವಡಿಸಿದ್ದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಅನೇಕ ಬಾರಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಬೈಕಂಪಾಡಿಯಲ್ಲಿರುವ ಪರಿಸರ ಇಲಾಖೆಗೆ ಸ್ಥಳೀಯರು ದೂರು ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಸ್ಪ್ಯಾನಿ ಪಿಂಟೋ ತಿಳಿಸಿದ್ದಾರೆ
.