ಕಿನ್ನಿಗೋಳಿ: ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಒತ್ತಾಯ

KannadaprabhaNewsNetwork | Published : Jun 17, 2024 1:35 AM

ಸಾರಾಂಶ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತ್ತುಲ್ ಪರಿಸರದಲ್ಲಿ ತ್ಯಾಜ್ಯ ನೀರು ಸರಿಯಾಗಿ ಹರಿದು ಹೋಗದೆ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಹು ಮಹಡಿ ಕಟ್ಟಡ, ಮನೆ, ವಾಣಿಜ್ಯ ವಸತಿ ಸಮುಚ್ಛಯದ ತ್ಯಾಜ್ಯ ನೀರನ್ನು ದ್ರವ ತ್ಯಾಜ್ಯ ಘಟಕಕ್ಕೆ ಅನಧಿಕೃತವಾಗಿ ಬಿಡುತ್ತಿರುವುದರಿದ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತ್ತುಲ್ ಪರಿಸರದಲ್ಲಿ ತ್ಯಾಜ್ಯ ನೀರು ಸರಿಯಾಗಿ ಹರಿದು ಹೋಗದೆ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಶಾಶ್ವತ ವ್ಯವಸ್ಥೆ ಕಲ್ಪಿಸಲು ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ವಾಣಿಜ್ಯ ವಸತಿ ಸಮುಚ್ಛಯ, ಹೋಟೆಲ್ ಮಾಲೀಕರ, ಸಾರ್ವಜನಿಕರ ಸಭೆ ನಡೆಯಿತು.ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಮಾತನಾಡಿ, ಹಿಂದಿನ ಕಿನ್ನಿಗೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯದಿಂದ ತ್ಯಾಜ್ಯ ಬಿಡುವ ಅವೈಜ್ಞಾನಿಕ ಕಾಮಗಾರಿ ನಡೆದಿದ್ದು, ಈಗಲೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಇದೇ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇಲ್ಲಿನ ಅಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ. ಅಭಿವೃದ್ಧಿ ಬಗ್ಗೆ ಮಾತನಾಡಿದರೆ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಸದಸ್ಯರು ಇಲ್ಲದೆ ಆಡಳಿತಾಧಿಕಾರಿಗಳು ತಮ್ಮದೇ ಆಟ ಆಡುತ್ತಿದ್ದು, ಅವ್ಯವಸ್ಥೆಗಳ ಬಗ್ಗೆ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಪ್ರತೀ ಮನೆಗೆ ಹೋಗದಿದ್ದರೂ ಮನೆಯವರಿಂದ ತ್ಯಾಜ್ಯ ವಿಲೇವಾರಿ ಹಣ ವಸೂಲು ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ನಾಗರಿಕರನ್ನು ಸಮಾಧಾನಪಡಿಸಿ ಮಾತನಾಡಿ, ತ್ಯಾಜ್ಯ ನೀರಿನ ಘಟಕದಲ್ಲಿರುವ ಅನಧಿಕೃತ ಕನೆಕ್ಷನ್ ಕೂಡಲೇ ತೆಗೆಯಬೇಕು, ದ್ರವ ತ್ಯಾಜ್ಯ ಮಾತ್ರ ಬಿಡಬೇಕು, ನಾಗರಿಕರ ಹಾಗೂ ಹೋಟೆಲ್, ವಸತಿ ಸಮುಚ್ಛಯ ಮಾಲಕರ ಸಮಿತಿ ರಚನೆ ಮಾಡಿ ಘಟಕವನ್ನು ಶುದ್ಧೀಕರಣಗೊಳಿಸಬೇಕು, ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಮೂಲಕ ಜಾಗ ಗುರುತಿಸಿ 10 ಕೋಟಿ ರು. ವೆಚ್ಚದಲ್ಲಿ ನೂತನ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರಾಜ್, ಜೂನಿಯ‌ರ್ ಎಂಜಿನಿಯರ್ ನಾಗರಾಜ್ ಎಚ್. ಉಪಸ್ಥಿತರಿದ್ದರು.

Share this article