ಕಿಶೋರ ಯಕ್ಷಗಾನ ಸಂಭ್ರಮ ಮಹಾಭಿಯಾನ ಸಮಾರೋಪ

KannadaprabhaNewsNetwork |  
Published : Jan 10, 2025, 12:48 AM IST
09ಸಮಾರೋಪ | Kannada Prabha

ಸಾರಾಂಶ

ಯಕ್ಷಶಿಕ್ಷಣ ಟ್ರಸ್ಟ್ ನ.23ರಂದು ಬ್ರಹ್ಮಾವರದಲ್ಲಿ ಆರಂಭಿಸಿದ ಕಿಶೋರ ಯಕ್ಷಗಾನ ಸಂಭ್ರಮವು ಜ.3ರಂದು ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಕ್ತಾಯಗೊಂಡಿತು. ಈ 42 ದಿನಗಳ ಕಾಲ, 11 ಕಡೆಗಳಲ್ಲಿ ನಡೆದ 91 ಶಾಲೆಗಳ ಪ್ರದರ್ಶನದಲ್ಲಿ 2805 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

91 ಶಾಲೆಗಳ ಪ್ರದರ್ಶನದಲ್ಲಿ 2805 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗಿ

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಯಕ್ಷಶಿಕ್ಷಣ ಟ್ರಸ್ಟ್ ನ.23ರಂದು ಬ್ರಹ್ಮಾವರದಲ್ಲಿ ಆರಂಭಿಸಿದ ಕಿಶೋರ ಯಕ್ಷಗಾನ ಸಂಭ್ರಮವು ಜ.3ರಂದು ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಕ್ತಾಯಗೊಂಡಿತು. ಈ 42 ದಿನಗಳ ಕಾಲ, 11 ಕಡೆಗಳಲ್ಲಿ ನಡೆದ 91 ಶಾಲೆಗಳ ಪ್ರದರ್ಶನದಲ್ಲಿ 2805 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್‍ ಕುಮಾರ್ ಕೊಡ್ಗಿ, ಇದೊಂದು ಸಮಷ್ಟಿ ಪ್ರಯತ್ನ, ಇದರ ಯಶಸ್ಸಿನಲ್ಲಿ ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್‌ನೊಂದಿಗೆ ಯಕ್ಷಗಾನ ಕಲಾರಂಗದ ಕಾರ್ಯಕರ್ತರ ನಿಸ್ವಾರ್ಥ ದುಡಿಮೆ ಗಮನಾರ್ಹ. ಮುಂದೆಯೂ ಶಾಲೆಯ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಪಾಲಕರು ಸಹಕರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಉಪಾಧ್ಯಕ್ಷೆ ವನಿತಾ ಎಸ್. ಬಿಲ್ಲವ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘ ಕುಂದಾಪುರದ ಅಧ್ಯಕ್ಷ ಡಾ. ನಾಗೇಶ್, ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಕಿರಣ್ ಹೆಗ್ಡೆ, ಉದ್ಯಮಿ ವಾಸುದೇವ ಹಂದೆ, ಗುತ್ತಿಗೆದಾರ ಸೂರ್ಯಕಾಂತ್ ದಪೇದಾರ್, ಕುಂದಾಪುರ ಅಮೆಚೂರು ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ವಿಠಲವಾಡಿಯ ಗುಣರತ್ನ ರಾಮ ಪೂಜಾರಿ ಅಭ್ಯಾಗತರಾಗಿ ಭಾಗವಹಿಸಿದ್ದರು.

ಐವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಭಾಗವಹಿಸಿದ ಮಕ್ಕಳ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು.

ಯಕ್ಷಗಾನ ಕಲಾರಂಗದ ಟ್ರಸ್ಟಿಗಳಾದ ಯು.ಎಸ್. ರಾಜಗೋಪಾಲ ಆಚಾರ್ಯ, ಎಸ್.ವಿ. ಭಟ್, ಎಚ್.ಎನ್. ಶೃಂಗೇಶ್ವರ, ಗಣೇಶ ಬ್ರಹ್ಮಾವರ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಪೂರ್ವದಲ್ಲಿ ಸರಕಾರಿ ಪ್ರೌಢಶಾಲೆ ಕಾಳಾವರ ಇಲ್ಲಿನ ವಿದ್ಯಾರ್ಥಿಗಳಿಂದ, ನವೀನ ಕೋಟ ಇವರ ನಿರ್ದೇಶನದಲ್ಲಿ ತರಣಿಸೇನ ಕಾಳಗ ಮತ್ತು ಸಭೆಯ ಬಳಿಕ ಕೆಪಿಎಸ್ ಕೋಟೇಶ್ವರ ಇಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸ್ಕಂದ ಇವರ ನಿರ್ದೇಶನದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ