ಉದ್ಯಾವರದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ನಿರಂಜನ ಭಟ್ ನಿರ್ದೇಶನದಲ್ಲಿ ಕೃಷ್ಣಾರ್ಜುನ ಕಾಳಗ ಬಳಿಕ ಉಚ್ಚಿಲದ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನಿಶ್ವಲ್ ತೀರ್ಥಹಳ್ಳಿ ನಿರ್ದೇಶನದ ಜಾಂಬವತೀ ಕಲ್ಯಾಣ ಪ್ರಸಂಗಗಳು ಪ್ರಸ್ತುತಗೊಂಡವು.
ಕನ್ನಡಪ್ರಭ ವಾರ್ತೆ ಕಾಪು
ಕಾಪು ವಿಧಾನ ಸಭಾ ವ್ಯಾಪ್ತಿಗೆ ಸೇರಿದ ಎಂಟು ಶಾಲೆಗಳಲ್ಲಿ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಯಕ್ಷಗಾನ ತರಬೇತಿ ಪಡೆದ ಮಕ್ಕಳ ಯಕ್ಷಗಾನ ಪ್ರದರ್ಶನ ಸರಣಿ ಕಾರ್ಯಕ್ರಮ ಕಿಶೋರ ಯಕ್ಷಗಾನ ಇಲ್ಲಿನ ಉಚ್ಚಿಲ ಮಹಾಲಕ್ಷ್ಮೀ ದೇವಳದ ಆಶ್ರಯದಲ್ಲಿ ದೇವಳದ ವಠಾರದಲ್ಲಿ ನಡೆದಿದ್ದು ಅದರ ಸಮಾರೋಪ ಸಮಾರಂಭ ಡಿ.23ರಂದು ಜರುಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗರ್ಮೆ ಸುರೇಶ ಶೆಟ್ಟಿ ಅವರು ಮಾತನಾಡಿ, ಯಕ್ಷ ಶಿಕ್ಷಣ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹತ್ತ್ವದ ಪಾತ್ರ ವಹಿಸುತ್ತದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಶಾಲೆಗಳಿಗೆ ಇದನ್ನು ವಿಸ್ತರಿಸೋಣ ಎಂದರು ಮತ್ತು ಈ ಮಹಾಭಿಯಾನದ ಯಶಸ್ಸಿಗೆ ಕಾರಣರಾದ ಕಲಾರಂಗದ ಕಾರ್ಯಕರ್ತರನ್ನು ಅಭಿನಂದಿಸಿದರು.ಮಂಗಳೂರಿನ ಖ್ಯಾತ ವೖದ್ಯ ಡಾ. ಜೆ. ಎನ್. ಭಟ್, ಗುರು ಬನ್ನಂಜೆ ಸಂಜೀವ ಸುವರ್ಣ, ನಿವೃತ್ತ ಪ್ರಾಧ್ಯಾಪಕ, ಡಾ. ಚಂದ್ರಶೇಖರ ಶೆಟ್ಟಿ, ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ, ದ. ಕ ಮೊಗವೀರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ ಹೆಜಮಾಡಿ, ಕಲಾ ಗಂಗೋತ್ರಿಯ ಸದಾಶಿವ ಅಭ್ಯಾಗತರಾಗಿ ಭಾಗವಹಿಸಿದ್ದರು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಪ್ರದರ್ಶನ ನೀಡಿದ ಶಾಲೆಗಳ ಐವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಾರಂಭದ ಪೂರ್ವದಲ್ಲಿ ಉದ್ಯಾವರದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ನಿರಂಜನ ಭಟ್ ನಿರ್ದೇಶನದಲ್ಲಿ ಕೃಷ್ಣಾರ್ಜುನ ಕಾಳಗ ಬಳಿಕ ಉಚ್ಚಿಲದ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನಿಶ್ವಲ್ ತೀರ್ಥಹಳ್ಳಿ ನಿರ್ದೇಶನದ ಜಾಂಬವತೀ ಕಲ್ಯಾಣ ಪ್ರಸಂಗಗಳು ಪ್ರಸ್ತುತಗೊಂಡವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.