ಶಾಸಕರ ಆಸಕ್ತಿಯಿಂದಲೇ ಕಿತ್ತೂರು ಅಭಿವೃದ್ಧಿ ಪರ್ವ

KannadaprabhaNewsNetwork | Published : Apr 23, 2025 12:39 AM

ಸಾರಾಂಶ

ಮಾದರಿ ಕ್ಷೇತ್ರವನ್ನಾಗಿಸಲು ಶಾಸಕರ ಆಸಕ್ತಿ ಬಹಳ ಮುಖ್ಯ. ಈ ಆಸಕ್ತಿಯಿಂದಲೇ ಕಿತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಮಾದರಿ ಕ್ಷೇತ್ರವನ್ನಾಗಿಸಲು ಶಾಸಕರ ಆಸಕ್ತಿ ಬಹಳ ಮುಖ್ಯ. ಈ ಆಸಕ್ತಿಯಿಂದಲೇ ಕಿತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಕೋಟೆಯ ಮುಂಭಾಗದಲ್ಲಿ ಸೋಮವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಎಲ್ಲ ಶಾಸಕರಿಗೆ ನಮ್ಮ ಇಲಾಖೆಯಿಂದ ಮುಕ್ತವಾಗಿ ಅನುದಾನ ನೀಡಲಾಗುತ್ತಿದೆ. ಈ ಅನುದಾನ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಳಿಸಿದೆ ಎಂದರು.ಕಿತ್ತೂರು ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿಗೆ ಕ್ಷೇತ್ರದ ಜನರು ನಮ್ಮ ಶಾಸಕರಾಗಿ ಬಾಬಾಸಾಹೇಬ ಪಾಟೀಲರೇ ಇರಬೇಕು. ಅಲ್ಲದೇ ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಕಾಂಗ್ರೆಸ್ ಪಕ್ಷವೇ ಇರಬೇಕೆನ್ನುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದನ್ನು ಮನಗೊಂಡು ಕ್ಷೇತ್ರದ ಜನರು ಮತ್ತೊಮ್ಮೆ ಪಾಟೀಲರನ್ನು ಶಾಸಕರನ್ನಾಗಿಸಲು ತಮ್ಮ ಮತಗಳನ್ನು ನೀಡಬೇಕು ಎಂದು ಕೋರಿದರು.ಕಿತ್ತೂರಿಂದ ಗಂದಿಗವಾಡ ಗ್ರಾಮಕ್ಕೆ ತೆರಳುವ ರಸ್ತೆಯನ್ನು ಸುಧಾರಿಸಲು ಸೂಕ್ತಕ್ರಮ ಕೈಗೊಳ್ಳಲಾಗುವುದು. ಈ ರಸ್ತೆ ಸುಧಾರಣೆಯಾದಲ್ಲಿ 3 ಕಿಮೀ ವರೆಗೆ ಪ್ರಯಾಣ ಕಡೆಮೆಗೊಳ್ಳಲಿದೆ ಎಂದು ತಿಳಿಸಿದರು.ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಪಟ್ಟಣದ ಅಭಿವೃದ್ಧಿಯ ಜೊತೆಗೆ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳು ಸಹ ಆರಂಭಗೊಂಡಿವೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಂಪೂರ್ಣ ಬೆಂಬಲ ದೊರೆಯುತ್ತಿದೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಬೆಂಬಲದ ಜೊತೆಗೆ ಅನುದಾನ ಕೂಡ ಕಿತ್ತೂರು ಕ್ಷೇತ್ರಕ್ಕೆ ದೊರೆತಿದೆ ಎಂದು ತಿಳಿಸಿದರು.₹೫ ಕೋಟಿ ವೆಚ್ಚದಲ್ಲಿ ಗೊಂಬಿಗುಡಿಯಿಂದ ಬಸಾಪೂರ ಕ್ರಾಸ್‌ವರೆಗೆ, ₹85 ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಅರಳಿಕಟ್ಟಿಯವರೆಗೆ ವಿದ್ಯುತ್ ಅಲಂಕಾರಿಕ ಕಾಮಗಾರಿ, ₹3 ಕೋಟಿ ವೆಚ್ಚದಲ್ಲಿ ರಾಣಿ ಚನ್ನಮ್ಮಾಜಿಯ ಸಭಾಭವನಕ್ಕೆ ರಸ್ತೆ, ಚರಂಡಿ ಹಾಗೂ ಪೀಠೋಪಕರಣ ಅಳವಡಿಕೆ, ₹5 ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆಯ ಕ್ರಾಸನಿಂದ ಹೆದ್ದಾರಿಯವರೆಗೆ ಚಥುಶ್ಪಥ ರಸ್ತೆ, ₹10. 30 ಕೋಟಿ ವೆಚ್ಚದಲ್ಲಿ ಅವರಾದಿಯಿಂದ ಖೋದಾನಪೂರ ರಸ್ತೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿವೆ ಎಂದು ತಿಳಿಸಿದರು.ನಂತರ ಪಟ್ಟಣ ಪಂಚಾಯತಿಯ ವಾಹನಗಳಿಗೆ ಹಾಗೂ ಯಂತ್ರೋಪಕರಣಗಳಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಪಪಂ ಅಧ್ಯಕ್ಷ ಜೈ ಶಿದ್ದರಾಮ ಮಾರಿಹಾಳ, ಕಿತ್ತೂರು ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಮುಖಂಡರಾದ ಶಂಕರ ಹೊಳಿ ಸೇರಿದಂತೆ ಪಪಂ ಸದಸ್ಯರು ಹಾಜರಿದ್ದರು.ಮೊದಲ ಬಾರಿ ಯಾರೇ ಶಾಸಕರಾದರೂ ಅದು ಉಡುಗೊರೆಯಾಗಿರುತ್ತದೆ. 2ನೇ ಬಾರಿಯ ಗೆಲವು ಮಾತ್ರ ಗೆಲುವಿನ ಸಂತಸ ನೀಡುತ್ತಿದೆ. ಈ ನಿಟ್ಟಿನಲ್ಲಿ ಶಾಸಕ ಬಾಬಾಸಾಹೇಬ ಪಾಟೀಲರನ್ನು 2ನೇ ಬಾರಿ ಶಾಸಕರನ್ನಾಗಿಸುವ ತಯಾರಿ ನಡೆಸುತ್ತಿದ್ದೇವೆ.

-ಸತೀಶ ಜಾರಕಿಹೊಳಿ,

ಬೆಳಗಾವಿ ಉಸ್ತುವಾರಿ ಸಚಿವರು.

Share this article