ಕನ್ನಡಪ್ರಭ ವಾರ್ತೆ ಬೆಳಗಾವಿ
ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ವಿಜಯ ಪತಾಕೆ ಹಾರಿಸಿದ ಸವಿನೆನಪಿನಲ್ಲಿ ಆಚರಿಸಲಾಗುತ್ತಿರುವ ಚನ್ನಮ್ಮನ ಕಿತ್ತೂರು ಉತ್ಸವವು ತುಂತುರು ಮಳೆಯ ಮಧ್ಯೆಯೇ ಸಡಗರ-ಸಂಭ್ರಮದಿಂದ ಆರಂಭಗೊಂಡಿತು.ಚನ್ನಮ್ಮನ ವಿಜಯದ ದ್ಯೋತಕವಾಗಿ ರಾಜ್ಯಾದ್ಯಂತ ಸಂಚರಿಸಿದ ವಿಜಯ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡು ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.ನಂತರ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪುತ್ಥಳಿಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.
ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಬೆಳಗಾವಿ ಉತ್ತರ ಶಾಸಕ ಆಸಿಫ್(ರಾಜು) ಸೇಠ್, ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುಂಚೆ ಪ್ರತಿವರ್ಷದಂತೆ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ಮಾಡಿದರು.ಆಕರ್ಷಕ ಜಾನಪದ ಕಲಾವಾಹಿನಿ:ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅತ್ಯಾಕರ್ಷಕ ಜಾನಪದ ಕಲಾವಾಹಿನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಚನ್ನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಚಾಲನೆ ನೀಡಿದರು.ಅಲ್ಲಿಂದ ಆರಂಭಗೊಂಡ ಜಾನಪದ ಕಲಾವಾಹಿನಿಯು ನಾಡಿನ ಜಾನಪದ ಕಲಾವೈಭವವನ್ನು ಅನಾವರಣಗೊಳಿಸಿತು. ಡೊಳ್ಳುಕುಣಿತ, ಪುರವಂತಿಕೆ, ಜಗ್ಗಲಗಿ, ಕರಡಿ ಮಜಲು, ಸಂಬಳ ವಾದನ, ಹಲಗೆ ವಾದನ, ಹೆಜ್ಜೆ ಮೇಳ, ತಾಸೇವಾದನ, ಗೊಂಬೆ ಕುಣಿತ, ಮೈಸೂರು ನಗಾರಿ,ಮಹಿಳಾ ನಗಾರಿ, ನಂದಿ ಧ್ವಜ, ಕಂಸಾಳೆ, ಚಂಡೆ ವಾದನ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಕ ಮೆರವಣಿಗೆಗೆ ಮೆರಗು ನೀಡಿದವು. ಮಳೆಯ ನಡುವೆಯೂ ಆಕರ್ಷಕ ಜಾನಪದ ಕಲಾವಾಹಿನಿಗಳೊಂದಿಗೆ ಸಾಗಿದ ವಿವಿಧ ಇಲಾಖೆಗಳಿಂದ ನೀಡಲಾಗುವ ಸರ್ಕಾರದ ಯೋಜನೆ, ಸೌಲಭ್ಯಗಳ ಸ್ತಬ್ದ ಚಿತ್ರಗಳು ನೆರೆದ ಜನಸ್ತೋಮದ ಗಮನ ಸೆಳೆದವು. ವಸ್ತು ಪ್ರದರ್ಶನ ಮಳಿಗೆ:ಕೋಟೆ ಆವರಣದಲ್ಲಿ ಸ್ಥಾಪಿಸಲಾಗಿರುವ ವಸ್ತುಪ್ರದರ್ಶನ ಮಳಿಗೆ, ಫಲಪುಷ್ಪ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕ ಬಾಬಾಸಾಹೇಬ್ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ ಶಿಂಧೆ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.ಕೃಷಿ, ಆರೋಗ್ಯ, ತೋಟಗಾರಿಕೆಗೆ ಸಂಬಂಧಿಸಿದಂತೆ 121 ವಸ್ತು ಪ್ರದರ್ಶನ ಮಳಿಗೆಗಳು ಹಾಗೂ 37 ವಿವಿಧ ನಮೂನೆಯ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿರುತ್ತದೆ. ದೀಪಾವಳಿ ಹಾಗೂ ಉತ್ಸವದ ಹಿನ್ನೆಲೆಯಲ್ಲಿ ಕಿತ್ತೂರು ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ನೂರಾರು ಜನರು ಮಳೆಯನ್ನು ಲೆಕ್ಕಿಸದೇ ಬೆಳಗ್ಗೆಯಿಂದಲೇ ವಸ್ತುಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡುವ ಮೂಲಕ ಉತ್ಸವದ ಮೆರಗು ಹೆಚ್ಚಿಸಿದರು.