ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಗರದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ, ಕಿತ್ತೂರು ಉತ್ಸವದರೊಳಗೆ ಉದ್ಘಾಟಿಸುವಂತೆ ಹಾಗೂ ಐತಿಹಾಸಿಕ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ ಮಾಡುವಂತೆ, ಇಲ್ಲಿಯೂ ಉತ್ಸವ ನಡೆಸುವಂತೆ ಆಗ್ರಹಿಸಿದರು. ಬೈಲಹೊಂಗಲ ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಇದ್ದು, ಇಲ್ಲಿ ಉತ್ಸವ ಅಂಗವಾಗಿ ಯಾವುದೇ ಕಾರ್ಯಕ್ರಮ ನಡೆಸದಿರುವುದು ಸರಿಯಲ್ಲ. ಸಮಾಧಿಗೆ ಗೌರವ ಸಮರ್ಪಿಸುವುದು ಉತ್ಸವದ ಭಾಗವಾಗಿದೆ. ಜಿಲ್ಲಾಡಳಿತ ಇದನ್ನು ಗಮನಿಸಬೇಕೆಂದರು.
ಕಿತ್ತೂರು ಪ್ರಾಧಿಕಾರ ಇಲಾಖೆಯ ಕೆಆರ್‌ಐಡಿಎಲ್ ವತಿಯಿಂದ ₹4.5 ಕೋಟಿ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಚನ್ನಮ್ಮನ ಸಮಾಧಿ ಸ್ಥಳದ ಸುತ್ತ ಮುತ್ತಲಿನ ವಿನ್ಯಾಸ, ಉದ್ಯಾನವನ, ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸ ಸಾರುವ ರೂಪಕಗಳು, ಗ್ಲಾಸ್‍ಹೌಸ್, ವಸ್ತು ಸಂಗ್ರಹಾಲಯ ಹಾಗೂ ಸುತ್ತಮುತ್ತಲಿನಲ್ಲಿ ವಿದ್ಯುತ್ ದ್ವೀಪಗಳು ಹೀಗೆ ಸಾಕಷ್ಟು ಕಾಮಗಾರಿಗಳು ಒಂದು ವರ್ಷದಿಂದ ನಡೆಯುತ್ತಿವೆ. ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು, ರೈತರು ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಅಭಿಮಾನಿಗಳು, ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ಪ್ರವಾಸಿಗರು ಇದೇ ತಿಂಗಳು ನಡೆಯುವ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಚನ್ನಮ್ಮ ಸಮಾಧಿಯ ಎಲ್ಲ ಅಭಿವೃದ್ಧಿ ಕಾಮಗಾರಿ ಮತ್ತು ರೂಪಕಗಳನ್ನು ಉದ್ಘಾಟನೆಯನ್ನು ಕೈಗೊಳ್ಳಬೇಕೆಂದು ಪುರಸಭೆಯ ಅಧ್ಯಕ್ಷರ, ಸರ್ವ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಕಾಮಗಾರಿಗಳು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಇಲಾಖೆಯ ವ್ಯಾಪ್ತಿಗೆ ಬರುವ ಕಾರಣ ಸದರಿ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಮುಗಿಸಿ ಕಿತ್ತೂರು ಉತ್ಸವದ ಒಳಗೆ ಉದ್ಘಾಟಿಸಲು ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿದರು.ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ ಮಾತನಾಡಿ, ಕಿತ್ತೂರು ಉತ್ಸವ-2025ನ್ನು ಇದೇ ತಿಂಗಳು 23, 24, 25ರಂದು ಕಿತ್ತೂರಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಮಯದ ಅಭಾವ ಇರುವುದರಿಂದ ಮತ್ತು ಬೈಲಹೊಂಗಲ ನಗರದ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಳ್ಳುವ ಮುಂಚಿತವಾಗಿಯೇ ಐಕ್ಯ ಸ್ಥಳದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲು ಹಾಗೂ ಕಿತ್ತೂರು ಉತ್ಸವ ನಿಮಿತ್ತ ಬೈಲಹೊಂಗಲದಲ್ಲಿಯೂ ಚನ್ನಮ್ಮಾಜಿ ಉತ್ಸವ ನಡೆಸಬೇಕೆಂದರು.
ಪುರಸಭೆ ಉಪಾಧ್ಯಕ್ಷ ಬುಡ್ಡೇಸಾಬ ಶೀರಸಂಗಿ, ಸದಸ್ಯರಾದ ಅರ್ಜುನ ಕಲಕುಟಕರ, ಪ್ರಕಾಶ ಕೊಟಬಾಗಿ, ಮಲ್ಲೇಶಪ್ಪ ಹೊಸಮನಿ, ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಹುಂಬಿ, ರಾಜು ಸೊಗಲ, ಶಿವಾನಂದ ಬಡ್ಡಿಮನಿ, ಅದೃಶ್ಯಪ್ಪ ಹುಚ್ಚನ್ನವರ ಸೇರಿದಂತೆ ಅನೇಕರು ಇದ್ದರು.