ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಸ್ತುತ ಕಲಬುರಗಿ ಸಂಚಾರದಲ್ಲಿರುವ ಡಾ. ರಾಜೇಂದ್ರ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಲಬುರಗಿ ಜಿಲ್ಲೆ ಸೇರಿದಂತೆ ಯಾದಗಿರಿ, ವಿಜಯನಗರ, ಬಳ್ಳಾರಿ, ಬೀದರ್, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಇವೆಲ್ಲವೂ ಕಲ್ಯಾಣದ 7 ಜಿಲ್ಲೆಗಳಾಗಿದ್ದು ಸದಾಕಾಲ ಬರ, ನೀರಿನ ಬವಣೆಗೆ ಹೆಸರುವಾಸಿ, ಈ ಭಾಗದಲ್ಲಿ ಮಳೆ ಸಾಕಷ್ಟಾಗುತ್ತಿದ್ದರೂ ಸಹ ಮಳೆ ನೀರಿನ ಸಂರಕ್ಷಣೆಯ ಕೆಲಸಗಲಾಗಿಲ್ಲ, ಜನತೆಗೆ ನೀರಿನ ಪ್ರತಿ ಹುಟ್ಟಿಸುವ ಕೆಲಸಗಳು ಆಗಿಲ್ಲವೆಂದರು.
ತಾವು ಸಮುದಾಯ ಆಧಧಾರಿತ ಮಳೆ ನೀರಿನ ಸಂರಕ್ಷಣೆ ಹಾಗೂ ಅದನ್ನು ಹಿಡಿದಿಟ್ಟು ಭೂಮಿಯೊಳಗೆ ಇಂಗಿಸುವ ಕೆಲಸಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ ಅವರು ಈ ವಿಷಯವಾಗಿ ತಾವೀಗ ಕಲ್ಯಾಣ ನಾಡಿನ ಸಂಚಾರದಲ್ಲಿರೋದಾಗಿ ಹೇಳಿದ್ದಾರೆ.ಅಕ್ಷರ, ಅನ್ನ, ಆರೋಗ್ಯ ರಂಗದಲ್ಲಿ ಅದೇನೇ ಯೋಜನೆ ರೂಪಿಸಿದರೂ ಕೂಡಾ ನೀರೇ ಇಲ್ಲದಿದ್ದರೆ ಅವೆಲ್ಲ ವ್ಯರ್ಥ. ಹೀಗಾಗಿ ಕೆಕೆಆರ್‌ಡಿಬಿ ಮಂಡಳಿಯವರು ಮೊದಲು ಈ 7 ಜಿಲ್ಲೆಗಳಲ್ಲಿ ನೀರಿನ ವಿಚಾರದಲ್ಲಿ ಜಾಗೃತಿ ಮೂಡಿಸುವುದು, ಮಳೆ ನೀರನ್ನು ಭೂಮಿಯೊಳಗೆ ಹೋಗುವಂತೆ ಮಾುವ ದಿಶೆಯಲ್ಲಿ ಯೋಚನೆ ಮಾಡಲು ಮುಂದಾಗಿರೋದು ನಿಜಕ್ಕೂ ಹೆಮ್ಮೆಯ ವಿಚಾರವೆಂದರು.
ನೀರಿಗಾಗಿ ಜಗತ್ತಿನಲ್ಲಿ ಯುದ್ಧಗಳಾಗುತ್ತಿದ್ದರೂ ಯಾರೂ ನೀರನ್ನು ಮಿತವಾಗಿ ಬಳಸುವ ವಿಚಾರ ಮಾಡುತ್ತಿಲ್ಲವೆಂದು ವಿಷಾದಿಸಿದ ಡಾ. ರಾಜೇಂದ್ರ ಸಿಂಗ್ ಜಲ ಸಾಕ್ಷರತೆಗೆ ಜನರೇ ಒತ್ತಾಯಿಸಬೇಕಾಗಿದೆ, ಪರಿಸ್ಥಿತಿ ಹೀಗೆ ಅಲಕ್ಷಿಸಿದರೆ ಮುಂದಿನ ಈ ಭಾಗ ಆಫ್ರಿಕಾ, ಇಥಿಯೋಪಿಯಾದಂತೆ ನೀರಿಗಾಗಿ ಬವಣೆ ಪಡುವಂತಹ ದುರವಸ್ಥೆಗೂ ತುತ್ತಾಗಬಹುದು ಎಂದು ಆತಂಕ ಹೊರಹಾಕಿದರು.
ತಾವು 2 ದಿನಗಳ ಕಲಬುರಗಿಸಂಚಾರದಲ್ಲಿ ಜೇವರ್ಗಿ ತಾಲೂಕಿನ ಭೀಮಾ ತೀರ, ನಾಲಾಗಳು, ಕೆರೆ ಕಟ್ಟುಗಳಿಗೆ ಭೇಟಿ ನೀಡಲಿದ್ದೇನೆ. ಪಕ್ಕದ ಯಾದಗಿರಿ ಜಿಲ್ಲೆಯಲ್ಲಿಯೂ ಕೆಲವು ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಭೌಗೋಳಿಕ ವಾತಾವರಣ ಅಧ್ಯಯನ ಮಾಡೋದಾಗಿ ಹೇಳಿದರು.ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ. ರಾಜೇಂದ್ರ ಸಿಂಗ್ ಅವರು ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಅವರೊಂದಿಗೆ ತಾವು ಈ ಅಧ್ಯಯನದ ನಂತರ ಮಾತುಕತೆ ನಡೆಸೋದಾಗಿ ಹೇಳಿದರು.
ಜನ ನಾಯಕರಲ್ಲಿ ಜಲ ಸಾಕ್ಷರತೆ ಬಗ್ಗೆ ಏನಾದರೂ ಮಾಡಬೇಕೆಂಬ ಚಿಂತನೆ ಇರಬೇಕು. ಅದು ಬಹಳಷ್ಟು ಜನರಲ್ಲಿ ಇಲ್ಲವಾಗಿದೆ. ಆದರೆ ಕೆಕೆಆರ್‌ಡಿಬಿ ಅಧ್ಯಕ್ಷರ ಕಣ್ಣಲ್ಲಿ ಅದನ್ನು ಕಂಡದ್ದೇನೆ. ಬರುವ ದಿನಗಳಲ್ಲಿ ಅದು ಯಾವ ಸ್ವರೂಪ ಪಡೆಯುವುದೋ ನೋಡೋಣ ಎಂದರು.