ಕಾಂಗ್ರೆಸ್ಸಿಗರಿಗೆ ಸೋಲುವ ಆತಂಕ: ನಿಖಿಲ್

KannadaprabhaNewsNetwork | Published : Apr 12, 2024 1:05 AM

ಸಾರಾಂಶ

ಚನ್ನಪಟ್ಟಣ: ಯುಗಾದಿ ಹಬ್ಬದ ಮರುದಿನ ಹೊಸತೊಡುಕು ಹಿನ್ನೆಲೆಯಲ್ಲಿ ಊಟ ಹಾಕುವುದು ನಮ್ಮ ಸಂಸ್ಕೃತಿ. ಕಾಂಗ್ರೆಸ್‌ನವರಂತೆ ಸೀರೆ, ಕುಕ್ಕರ್ ಹಂಚುವ ಕಾರ್ಯಕ್ರಮ ನಮ್ಮದಲ್ಲ. ಸೋಲುವ ಆತಂಕದಲ್ಲಿ ಕಾಂಗ್ರೆಸ್‌ನವರು ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ: ಯುಗಾದಿ ಹಬ್ಬದ ಮರುದಿನ ಹೊಸತೊಡುಕು ಹಿನ್ನೆಲೆಯಲ್ಲಿ ಊಟ ಹಾಕುವುದು ನಮ್ಮ ಸಂಸ್ಕೃತಿ. ಕಾಂಗ್ರೆಸ್‌ನವರಂತೆ ಸೀರೆ, ಕುಕ್ಕರ್ ಹಂಚುವ ಕಾರ್ಯಕ್ರಮ ನಮ್ಮದಲ್ಲ. ಸೋಲುವ ಆತಂಕದಲ್ಲಿ ಕಾಂಗ್ರೆಸ್‌ನವರು ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾಲೂಕಿನ ಮತ್ತೀಕೆರೆ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಪರ ಪ್ರಚಾರ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತೋಟದಲ್ಲಿ ನೂರೈವತ್ತು ಜನ ಕೆಲಸಗಾರರಿದ್ದಾರೆ. ಅವರಿಗೆ ಹೊಸತೊಡುಕು ಹಿನ್ನೆಲೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದೆವು. ಅಲ್ಲದೇ ಕೆಲವು ಬಿಜೆಪಿ-ಜೆಡಿಎಸ್ ಮುಖಂಡರನ್ನು ಊಟಕ್ಕೆ ಆಹ್ವಾನಿಸಿದ್ದೆವು. ನಾವೇನು ತೊಟದ ಮನೆಯಲ್ಲಿ ಪಾರ್ಟಿಯೋ, ಸಾರ್ವಜನಿಕ ಸಮಾರಂಭವೋ ಮಾಡ್ತಿರಲಿಲ್ಲ. ಕಾಂಗ್ರೆಸ್‌ನವರ ದೂರು ಕೇಳಿದ ಚುನಾವಣಾಧಕಾರಿಗಳು ತೋಟದ ಮನೆಗೆ ಬಂದು ಪರಿಶೀಲನೆ ಮಾಡಿದ್ದಾರೆ ಎಂದರು.

ಚುನಾವಣಾಧಿಕಾರಿ ಏನು ಮಾಡುತ್ತಿದ್ದರು:

ಕಾಂಗ್ರೆಸ್‌ನವರ ಹಾಗೆ ನಾವು ಕುಕ್ಕರ್, ಸೀರೆ ಹಂಚುವುದಿಲ್ಲ. ಕಾಂಗ್ರೆಸ್‌ ದೂರಿಗೆ ಮಣೆ ಹಾಕಿ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದರು. ರಾಮನಗರದಲ್ಲಿ ಹಂಚಲು ಶೇಖರಿಸಿದ್ದ ೩೭೦೦ ಸೀರೆಗಳನ್ನು ಜಪ್ತಿ ಮಾಡಿ ಹಿಡಿದುಕೊಟ್ಟಿದ್ದು, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು. ಆಗ ಚುನಾವಣಾ ಆಯೋಗ, ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಮಂಡ್ಯದಲ್ಲೂ ಪ್ರಚಾರ ಮಾಡ್ತೇನೆ:

ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಿದ್ದು, ಅವರ ಪರ ಪ್ರಚಾರ ಕೈಗೊಳ್ಳುತ್ತೇವೆ. ಮಂಡ್ಯದ ೮ ವಿಧಾನಸಭಾ ಕ್ಷೇತ್ರಗಳಿಗೂ ಒಂದೊಂದು ದಿನ ಮೀಸಲಿಟ್ಟಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರಕ್ಕೆ ಬರಬೇಕು ಎಂದು ಬಹುತೇಕ ಅಭ್ಯರ್ಥಿಗಳು ಬಯಸಿದ್ದು, ರಾಜ್ಯದ ೨೮ ಕ್ಷೇತ್ರದಲ್ಲೂ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ಎಂದರು.

ಕಾರ್ಯಕರ್ತರಲ್ಲಿ ಹೊಸ ಹುರುಪು:

ಡಾ.ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾದ ದಿನದಿಂದಲೇ ಎರಡು ಪಕ್ಷದ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ಇನ್ನು ಹೆಚ್ಚಾಗಿದ್ದು, ಎಲ್ಲ ಕಡೆ ಹೊಸ ಹುರುಪು ಕಾಣುತ್ತಿದೆ. ಜನರು ಉತ್ಸಾಹದಿಂದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ವೈದ್ಯಕೀಯ ಸೇವೆಯನ್ನ ಜನ ನೆನೆಸಿಕೊಳ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆದ್ದೆ ಗೆಲುತ್ತಾರೆ. ಮಂಜುನಾಥ್ ಅವರು ಈ ಭಾಗದ ಸಂಸದರಾದರೆ ಕ್ಷೇತ್ರ ಅಭಿವೃದ್ಧಿ ಮಾಡ್ತಾರೆ. ಹಾಗಾಗಿ ಜನ ಅವರನ್ನ ಗೆಲ್ಲಿಸುವ ವಿಶ್ವಾಸ ಇದೆ ಎಂದರು.

ಗೆಲ್ಲುವ ವಿಶ್ವಾಸವಿದೆ:

ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಮಾತನಾಡಿ, ಗುರುವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ೨೦ಕ್ಕೂ ಹೆಚ್ಚು ಗ್ರಾಮದಲ್ಲಿ ಪ್ರಚಾರ ಮಾಡ್ತಿದ್ದೇವೆ. ಹೋದಲ್ಲೆಲ್ಲಾ ಜನರು ಉತ್ತಮವಾಗಿ ಸ್ಪಂದಿಸುತ್ತಿದಾರೆ. ನನ್ನ ವೈದ್ಯಕೀಯ ಸೇವೆ ಬಗ್ಗೆ ಜನ ಮಾತನಾಡ್ತಿದ್ದಾರೆ. ಜನರ ಉತ್ಸಾಹ ನೋಡಿದ್ರೆ ಈಗಾಗಲೇ ಗೆದ್ದಿದ್ದೇನೆ ಎನ್ನಿಸುತ್ತಿದೆ. ಬಿಜೆಪಿ-ಜೆಡಿಎಸ್ ಎರಡೂ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರಾಧ್ಯಕ್ಷ ಅಜಯ್, ಮುಖಂಡರಾದ ಪ್ರಸನ್ನ ಪಿ.ಗೌಡ, ಗೋವಿಂದಹಳ್ಳಿ ನಾಗರಾಜು, ಕುಕ್ಕೂರ್‌ದೊಡ್ಡಿ ಜಯರಾಮು, ಹಾಪ್‌ಕಾಮ್ಸ್ ದೇವರಾಜು ಇತರರಿದ್ದರು.

ಬಾಕ್ಸ್................

ಚನ್ನಪಟ್ಟಣದಲ್ಲಿ ಮಂಜುನಾಥ್ ಬಿರುಸಿನ ಪ್ರಚಾರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ರಂಗೇರಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಬಿರುಸಿನ ಪ್ರಚಾರ ನಡೆಸಿದರು. ತಾಲೂಕಿನ ಮುದಿಗೆರೆ, ಮತ್ತಿಕೆರೆ, ಭೈರಾಪಟ್ಟಣ, ಮಳೂರುಪಟ್ಟಣ, ಕೂಡ್ಲೂರು ಗ್ರಾಮ ಸೇರಿ ೧೫ಕ್ಕೂ ಹೆಚ್ಚು ಗ್ರಾಮಗಳು ಹಾಗೂ ನಗರ ಪ್ರದೇಶದ ಕೆಲವೆಡೆ ಡಾ. ಮಂಜುನಾಥ್ ಪ್ರಚಾರ ನಡೆಸಿದರು. ತಾಲೂಕಿನ ಮುದುಗೆರೆ ಗ್ರಾಮಕ್ಕೆ ಬೆಳಗ್ಗೆ ಆಗಮಿಸಿದ ಡಾ.ಮಂಜುನಾಥ್ ತೆರದ ವಾಹನದಲ್ಲಿ ಗ್ರಾಮದಲ್ಲಿ ಪ್ರಚಾರ ನಡೆಸುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದರು. ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಡಾ.ಮಂಜುನಾಥ್‌ಗೆ ಸಾಥ್ ನೀಡಿದರು.

ಬಹುತೇಕ ಎಲ್ಲ ಗ್ರಾಮಗಳಲ್ಲೂ ಡಾ.ಮಂಜುನಾಥ್‌ಗೆ ಜನ ಅದ್ಧೂರಿ ಸ್ವಾಗತ ಕೋರಿದರು. ಕೆಲವು ಗ್ರಾಮಗಳಲ್ಲಿ ಅವರ ಮೇಲೆ ಹೂಮಳೆ ಸುರಿಸಿದರು. ರಸ್ತೆ ಬದಿಯಲ್ಲಿ ಮನೆ ಮುಂದೆ ನಿಂತು ಜನ ಡಾ.ಮಂಜುನಾಥ್ ಅವರತ್ತ ಕೈಬೀಸಿ ಸ್ವಾಗತಿಸಿದರು.

ಬಾಕ್ಸ್.....................

ಮಗಳ ಆಪರೇಷನ್ ನೆನೆದ ಮಹಿಳೆ!

ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಮಹಿಳೆಯೊಬ್ಬರು ಮೂರು ವರ್ಷಗಳ ಹಿಂದೆ ಮಗಳಿಗೆ ಡಾ. ಮಂಜುನಾಥ್ ಆಪರೇಷನ್ ಮಾಡಿದ್ದನ್ನು ಸ್ಮರಿಸಿದರು. ೩ ವರ್ಷಗಳ ಹಿಂದೆ ಅಶ್ವಿನಿಗೆ ಆಪರೇಷನ್ ಮಾಡಿದ್ರಲ್ಲ ಅವರ ತಾಯಿ ನಾನು. ನನ್ನ ವೋಟು ನಿಮಗೇ ಎಂದು ಮಹಿಳೆ ಹೇಳಿದ್ದು ವಿಶೇಷವೆನಿಸಿತು.

(ಈ ಕೋಟ್‌ ಮೇಲೆ ಪ್ಯಾನಲ್‌ನಲ್ಲಿ ಬಳಸಿ)

ಕೋಟ್...

ಕ್ಷೇತ್ರದಲ್ಲಿ ಡಾ.ಮಂಜುನಾಥ್ ಪರ ಸಾಕಷ್ಟು ಒಲವು ಕಂಡುಬರುತ್ತಿದೆ. ಜನಾಭಿಪ್ರಾಯವೂ ಅವರ ಪರವಾಗಿಯೇ ಇದೆ. ಕ್ಷೇತ್ರದ ಶೇ.೮೦ರಷ್ಟು ಜನ ಮಂಜುನಾಥ್‌ಗೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಮಂಜುನಾಥ್ ಗೆಲುವು ಖಚಿತ.

-ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ

ಪೊಟೋ೧೧ಸಿಪಿಟಿ೧:

ಚನ್ನಪಟ್ಟಣದ ತಾಲೂಕಿನ ಮತ್ತೀಕೆರೆ ಗ್ರಾಮದಲ್ಲಿ ತೆರದ ವಾಹನದಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪ್ರಚಾರ ನಡೆಸಿದರು.

Share this article