ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿನ 56 ಸಾರಿಗೆ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ಸಾರಿಗೆ ಸಿಬ್ಬಂದಿಗೆ ರಜಾ ನಿರ್ವಹಣಾ ವ್ಯವಸ್ಥೆ (ಎಲ್‌ಎಂಎಸ್) 2016-17ರಿಂದ ಬಂದ್ ಆಗಿದ್ದು, 6 ವರ್ಷ ಕಳೆದರೂ ಆಗಿರುವ ಅವ್ಯವಸ್ಥೆಯನ್ನು ಸರಿಪಡಿಸದ ಕಾರಣ ರಜಾ ಪಡೆಯಲು ಸಾರಿಗೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.ಹೌದು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ವ್ಯಾಪ್ತಿಗೆ ಬರುವ ಸಾರಿಗೆ ಇಲಾಖೆಯ 56 ಡಿಪೋಗಳಲ್ಲಿ ಕರ್ತವ್ಯ ನಿರ್ವಹಿಸುವ ಸಾರಿಗೆ ಸಿಬ್ಬಂದಿ ರಜಾ ಪಡೆಯಲು ಸರ್ಕಾರ 2013-14ರಲ್ಲಿ ರಜಾ ನಿರ್ವಹಣಾ ವ್ಯವಸ್ಥೆಯನ್ನು (ಎಲ್‌ಎಂಎಸ್) ಜಾರಿಗೆ ತಂದಿತ್ತು.
ಎಲ್ಲ ಡಿಪೋಗಳಲ್ಲಿ ರಜಾ ಪಡೆಯಲು ಯಂತ್ರ ಅಳವಡಿಸಲಾಗಿತ್ತು. ಸಾಫ್ಟ್‌ವೇರ್ ಸರಿಯಾಗಿ ಡಿಸೈನ್ ಇಲ್ಲದ ಕಾರಣ ಸಾರಿಗೆ ಸಿಬ್ಬಂದಿ ಕೇಳಿದಷ್ಟು ರಜಾ ದಿನಗಳನ್ನು ಮಂಜೂರು ಮಾಡುತ್ತಿತ್ತು. ಇದರಿಂದ ಈ ಭಾಗದಲ್ಲಿ ಸಿಬ್ಬಂದಿ ಕೊರತೆ ಬೇರೆ ಕಾಡುತ್ತಿತ್ತು. ಸಾರಿಗೆ ಘಟಕದಲ್ಲಿ ಕೆಲಸ ಮಾಡಲು ಸಿಬ್ಬಂದಿಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರಿಂದ ನೂರಾರು ಮಾರ್ಗಗಳಲ್ಲಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದವು. ಅನೇಕ ತೊಂದರೆಗಳ ನಡುವೆ ಈ ವ್ಯವಸ್ಥೆ 3ರಿಂದ 4 ವರ್ಷಗಳ ಕಾಲ ನಡೆಯಿತು. ತದನಂತರದಲ್ಲಿ ಮಷಿನ್‌ಗಳು ಕೆಟ್ಟು ಹೋದವು. ಅಂದು ಮೂಲೆಗೆ ಸೇರಿದ ಮಷಿನ್‌ಗಳನ್ನು ಸರಿಪಡಿಸುವಂತಹ ಗೋಜಿಗೆ ಅಧಿಕಾರಿಗಳು ಹೋಗಲಿಲ್ಲ.ರಾಜ್ಯ ವ್ಯಾಪ್ತಿಯಲ್ಲಿನ ಎಲ್ಲ ಸಾರಿಗೆ ಘಟಕಗಳಲ್ಲಿ ರಜಾ ನಿರ್ವಹಣಾ ವ್ಯವಸ್ಥೆ ಇತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಈ ಹಿಂದೆಯೇ ಅಧಿಕಾರಿಗಳು, ಕೆಟ್ಟು ಹೋಗಿದ್ದ ಮಷಿನ್‌ಗಳನ್ನು ಬದಲಾವಣೆ ಮಾಡಿ, ಹೊಸ ತಂತ್ರಜ್ಞಾನ ಹೊಂದಿರುವ ಆನ್‌ಲೈನ್ ಮೂಲಕವೇ ರಜಾ ಪಡೆಯುವಂತಹ ವ್ಯವಸ್ಥೆ ಮಾಡಿದ್ದಾರೆ. ಆದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಭಾಗದ ಸಾರಿಗೆ ಘಟಕಗಳಲ್ಲಿ ರಜಾ ನಿರ್ವಹಣಾ ವ್ಯವಸ್ಥೆ ಬದಲಾವಣೆ ಮಾಡಲು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ.ರಜಾ ನಿರ್ವಹಣಾ ವ್ಯವಸ್ಥೆ ಯಂತ್ರ ಕೆಟ್ಟು ಹೋಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಮೇಲಧಿಕಾರಿಗಳು, ಸಾರಿಗೆ ಸಿಬ್ಬಂದಿಗೆ ರಜಾ ನೀಡಲು ಭಕ್ಷೀಸು ಪಡೆಯುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.ರಜಾ ನಿರ್ವಹಣಾ ವ್ಯವಸ್ಥೆಯ ಅನುಷ್ಠಾನ ಕುರಿತು ಅಧಿಕಾರಿಗಳ ಪ್ರತಿ ಸಭೆಯಲ್ಲಿಯೂ ಚರ್ಚೆಯಾಗುತ್ತಿದೆ. ಆದರೆ ಸರಿಯಾಗಿ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿನ ಎಲ್ಲ ಸಿಬ್ಬಂದಿ ಮಾಹಿತಿಯನ್ನು ಸಂಗ್ರಹಿಸಿ ಹೊಸ ಸಾಫ್ಟ್‌ವೇರ್‌ನಲ್ಲಿ ಅಳವಡಿಸುವಂತಹ ಕೆಲಸ ನಡೆಯುತ್ತಿದೆ. ಈಗಾಗಲೇ ಬೇರೆ ಕಡೆಗೆ ಇರುವ ಸಾಫ್ಟ್‌ವೇರ್‌ಗಳನ್ನು ಅಧ್ಯಯನ ಮಾಡಿ ಅದಕ್ಕಿಂತ ಹೊಸ ರೀತಿಯ ವ್ಯವಸ್ಥೆ ಜಾರಿಗೆ ತರುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಸಾರಿಗೆ ಸಿಬ್ಬಂದಿಗೆ ರಜಾ ನೀಡಲು ಇದ್ದ ರಜಾ ನಿರ್ವಹಣಾ ವ್ಯವಸ್ಥೆ ಬಂದ್ ಆಗಿತ್ತು. ಈಗಾಗಲೇ ಎಲ್ಲ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ನೀಡಲಾಗಿದೆ. ಹೊಸ ತಂತ್ರಜ್ಞಾನ ಹೊಂದಿರುವ ಸಾಫ್ಟ್‌ವೇರ್ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಜನವರಿ ಅಂತ್ಯಕ್ಕೆ ಅನುಷ್ಠಾನ ಆಗುವ ಸಾಧ್ಯತೆ ಇದೆ ಎಂದು ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ನಾಯ್ಕ ಹೇಳಿದ್ದಾರೆ.